ಸಾರಾಂಶ
ಜ್ಞಾನಧಾರೆ ಯಾನ ಕಾರ್ಯಕ್ರಮ ಉದ್ಘಾಟಿಸಿದ ಕೊಪ್ಪಳ ವಿವಿ ಕುಲಪತಿ
ಕನ್ನಡಪ್ರಭ ವಾರ್ತೆ ಕುಕನೂರು
ಸಮಾಜದ ಪರಿವರ್ತನೆ ಮಾಡಲು ಶಿಕ್ಷಣ ಅತಿ ಅವಶ್ಯವಾಗಿದೆ. ದೇಶ ಕಟ್ಟುವ ಕೆಲಸ ಇಂದಿನ ಯುವ ಪೀಳಿಗೆ ಮೇಲಿದೆ. ಹಾಗಾಗಿ ಪ್ರತಿಯೊಬ್ಬರೂ ಸಮಾಜದ ಪರಿವರ್ತನೆ ರಾಯಭಾರಿಯಾಗಿ ಕೆಲಸ ಮಾಡಬೇಕು ಎಂದು ಕೊಪ್ಪಳ ವಿವಿಯ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.ತಾಲೂಕಿನ ತಳಕಲ್ಲ ಗ್ರಾಮದ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದ ಅಂಗವಾಗಿ ಜರುಗಿದ ಜ್ಞಾನಧಾರೆ ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಗೆ ನೂತನ ವಿವಿಯನ್ನು ಕಳೆದ ವರ್ಷದ ಹಿಂದೆ ಆರಂಭಿಸಿದೆ. ಹಾಗಾಗಿ ನೂತನ ವಿಶ್ವವಿದ್ಯಾಲಯದ ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಶಿಕ್ಷಣದಿಂದ ಉತ್ತಮ ಜ್ಞಾನ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಬೇಕು. ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಅನೇಕ ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಗುರಿ ನಿರ್ಧರಿಸಿಕೊಂಡು ಛಲದಿಂದ ಮುನ್ನಡೆದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.
ಕುಲಸಚಿವ ಪ್ರೊ. ಕೆ.ವಿ. ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಬೆಲೆಬಾಳುವ ಸಮಯವನ್ನು ವ್ಯರ್ಥ ಮಾಡದೆ ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜಮುಖಿ ಬದುಕು ಕಟ್ಟಿಕೊಳ್ಳಬೇಕು ಎಂದರು.ಕೊಪ್ಪಳ ವಿವಿಯ ಹಣಕಾಸು ಅಧಿಕಾರಿ ಅಮೀನಸಾಬ ಮಾತನಾಡಿ,
ಪುಸ್ತಕದೊಂದಿಗೆ ಜೊತೆ ಬಾಂಧವ್ಯ ಹೊಂದಿರುವವರು ಖಂಡಿತವಾಗಿ ಬದುಕನ್ನು ಬದಲಾಯಿಸಿಕೊಳ್ಳಲು ಸಾಧ್ಯ. ಹಾಗಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಂದೆ-ತಾಯಿಗಳು ಮಕ್ಕಳ ಬಗ್ಗೆ ಅನೇಕ ಕನಸು ಕಾಣುತ್ತಿದ್ದಾರೆ. ಅವರ ಕನಸನ್ನು ನನಸು ಮಾಡಲು ನಿರಂತರವಾಗಿ ಪ್ರಯತ್ನ, ಪರಿಶ್ರಮ ಇರಬೇಕು ಎಂದರು.ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿದ್ಯಾರ್ಥಿ ಪತ್ರಿಕೆ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ನಂತರ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ ಯಳವಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಚಾಂದ್ ಬಾಷಾ, ಜಡೆಪ್ಪ, ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು.