ಬಾಸುಂಡೆ ಬರುವಂತೆ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ

| Published : Aug 26 2024, 01:39 AM IST

ಬಾಸುಂಡೆ ಬರುವಂತೆ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ
Share this Article
  • FB
  • TW
  • Linkdin
  • Email

ಸಾರಾಂಶ

ಗಣಿತ ಟೆಸ್ಟಿನಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 4ನೇ ತರಗತಿಯ ಬಾಲಕನಿಗೆ ಶಿಕ್ಷಕನೋರ್ವ ಅಮಾನವೀಯವಾಗಿ ಬಾಸುಂಡೆ ಬರುವಂತೆ ಥಳಿಸಿದ ಘಟನೆ ಸೈದಾಪುರ ಪಟ್ಟಣದ ಭಗವಾನ್‌ ಮಹಾವೀರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಗಣಿತ ಟೆಸ್ಟಿನಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 4ನೇ ತರಗತಿಯ ಬಾಲಕನಿಗೆ ಶಿಕ್ಷಕನೋರ್ವ ಅಮಾನವೀಯವಾಗಿ ಬಾಸುಂಡೆ ಬರುವಂತೆ ಥಳಿಸಿದ ಘಟನೆ ಸೈದಾಪುರ ಪಟ್ಟಣದ ಭಗವಾನ್‌ ಮಹಾವೀರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಕನ ಥಳಿಸಿದ ಆರೋಪದಡಿ ಕೇರಳ ರಾಜ್ಯದ ತ್ರಿಶೂರ್‌ ಮೂಲದ ಶಿಕ್ಷಕ ಪಿ. ಡೆಲ್ವಿನ್‌ ಎಂಬಾತನ ವಿರುದ್ಧ ಸೈದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (0111/2024) ದಾಖಲಿಸಲಾಗಿದೆ. ಈಗಾಗಲೇ ಶಿಕ್ಷಕನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಸೈದಾಪುರ ಸ್ಟೇಷನ್‌ ರಸ್ತೆಯಲ್ಲಿರುವ ಭಗವಾನ್‌ ಮಹಾವೀರ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ 10 ವರ್ಷದ ಬಾಲಕನಿಗೆ ಶಿಕ್ಷಕ ಡೆಲ್ವಿನ್‌ ಬಾಸುಂಡೆ ಬರುವಂತೆ ಬಡಿಗೆಯಿಂದ ಮನಸೋ ಇಚ್ಛೆ ಥಳಿಸಿದ್ದ. ತೀವ್ರ ನೋವಿನಿಂದ ನರಳುತ್ತಿದ್ದ ಬಾಲಕ ಈ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾನೆ. ಬಾಲಕನ ಬೆನ್ನಿನ ಮೇಲಾದ ಬಾಸುಂಡೆಗಳ ನೋಡಿದ ಪಾಲಕರು, ಈ ಬಗ್ಗೆ ದೂರು ನೀಡಲು ತೆರಳಿದಾಗ, ಶಾಲಾಡಳಿತ ಠಾಣೆಯಲ್ಲಿ ಸಂಧಾನಕ್ಕೆ ಯತ್ನಿಸಿದ್ದಾರೆ. ಈ ವಿಷಯ ಬಹಿರಂಗಗೊಂಡರೆ ಶಾಲೆಗೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಆತಂಕಗೊಂಡ ಶಾಲಾಡಳಿತ ಮಂಡಳಿ, ಮಗುವಿನ ಚಿಕಿತ್ಸೆ ಖರ್ಚು ಭರಿಸುವುದಾಗಿ ಭರವಸೆ ನೀಡಿದ್ದರು. ಆ.19 ರಂದು ಘಟನೆ ನಡೆದಿದ್ದರೂ, ನಾಲ್ಕೈದು ದಿನಗಳವರೆಗೆ ಈ ಪ್ರಕರಣ ಬೆಳಕಿಗೆ ಬಾರದಂತೆ ತಡೆಯಲಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದಾದರೂ, ಅವರೂ ಸಹ ಈ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದರು ಎಂಬ ಆರೋಪಗಳಿವೆ. ಆದರೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್‌ ಕೋಸಂಬೆ ಅವರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ, ಪ್ರಕರಣ ದಾಖಲಿಸುವಂತೆ ಡಿಡಿಪಿಐ ಅವರಿಗೆ ಸೂಚಿಸಿದ್ದರಿಂದ, ಕೊನೆಗೆ ದೂರು ದಾಖಲಿಸಲಾಗಿದೆ.