ನಿಟುವಳ್ಳಿ ಸರ್ಕಾರಿ ಶಾಲೆ ಅಂದ ಹೆಚ್ಚಿಸಿದ ಶಿಕ್ಷಕ

| Published : Sep 05 2025, 01:00 AM IST

ಸಾರಾಂಶ

ತಾನು ಕೆಲಸ ಮಾಡುವ ಸರ್ಕಾರಿ ಶಾಲೆಯನ್ನು ಎಸ್ಡಿಎಂಸಿ, ಜನ ಪ್ರತಿನಿಧಿ, ಅಧಿಕಾರಿಗಳು, ಪಾಲಕರು, ಮುಖಂಡರು, ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸುವ ಜತೆಗೆ 257 ಮಕ್ಕಳ ಸಂಖ್ಯೆ ಇದ್ದ ಶಾಲೆಯಲ್ಲಿ 600 ಮಕ್ಕಳು ಓದುವಂತೆ ಮಾಡುವಲ್ಲಿ ಹಿರಿಯ ಶಿಕ್ಷಕರೊಬ್ಬರು ಪ್ರಮುಖ ಪಾತ್ರ ವಹಿಸುವ ಮೂಲಕ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ತಾನು ಕೆಲಸ ಮಾಡುವ ಸರ್ಕಾರಿ ಶಾಲೆಯನ್ನು ಎಸ್ಡಿಎಂಸಿ, ಜನ ಪ್ರತಿನಿಧಿ, ಅಧಿಕಾರಿಗಳು, ಪಾಲಕರು, ಮುಖಂಡರು, ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸುವ ಜತೆಗೆ 257 ಮಕ್ಕಳ ಸಂಖ್ಯೆ ಇದ್ದ ಶಾಲೆಯಲ್ಲಿ 600 ಮಕ್ಕಳು ಓದುವಂತೆ ಮಾಡುವಲ್ಲಿ ಹಿರಿಯ ಶಿಕ್ಷಕರೊಬ್ಬರು ಪ್ರಮುಖ ಪಾತ್ರ ವಹಿಸುವ ಮೂಲಕ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ದಾವಣಗೆರೆ ನಗರದ ನಿಟುವಳ್ಳಿಯ ಸರ್ಕಾರಿ ಪ್ರೌಢಶಾಲೆಯ ಗಣಿತ ವಿಷಯದ ಸಹ ಶಿಕ್ಷಕ ಕೆ.ಟಿ.ಜಯಣ್ಣ ಶಾಲೆ, ಮಕ್ಕಳ ಬಗ್ಗೆ ತಮ್ಮ ಬದ್ಧತೆ ತೋರುವ ಮೂಲಕ ಜನಾನುರಾಗಿ ಶಿಕ್ಷಕರಾಗಿದ್ದಾರೆ. 2010ರಿಂದಲೂ ಇದೇ ಶಾಲೆಯಲ್ಲಿ ಸಹ ಶಿಕ್ಷಕರಾಗಿ, ಪ್ರಭಾರಿ ಮುಖ್ಯ ಶಿಕ್ಷಕರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಗುಣಾತ್ಮಕ ಶಿಕ್ಷಣ, ಅದಕ್ಕೆ ಪೂರಕ ವಾತಾವರಣ ಕಲ್ಪಿಸುವಲ್ಲೂ ಶ್ರಮಿಸುತ್ತಾ ಬಂದವರು.

ಪಿಎಂಶ್ರೀ ಸ್ಕೀಂಗೆ ಆಯ್ಕೆಯಾದ ಜಿಲ್ಲಾ ಕೇಂದ್ರದ ಏಕೈಕ ಶಾಲೆ ಇದು. 500ಕ್ಕೂ ಹೆಚ್ಚು ಮಕ್ಕಳಿದ್ದರೆ ಶಾಲೆ ಪಿಎಂಶ್ರೀ ಸ್ಕೀಂಗೆ ಆಯ್ಕೆಯಾಗುತ್ತದೆ. ಶಿಕ್ಷಕ ಕೆ.ಟಿ.ಜಯಣ್ಣ, ಸಹೋದ್ಯೋಗಿಗಳು, ಎಸ್ಡಿಎಂಸಿ, ಪಾಲಕರ ಸಹಕಾರದಿಂದ ಇದೊಂದು ಮಾದರಿ ಶಾಲೆಯಾಗಿ ಹೊರ ಹೊಮ್ಮಿದೆ. ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಕಾಲದಲ್ಲಿ, ಸರ್ಕಾರಿ ಶಾಲೆಗೆ ಬೀಗ ಜಡಿಯುವ ಕಾಲಘಟ್ಟದಲ್ಲಿ ಅಂತಹ ಪ್ರಯತ್ನಕ್ಕೂ ಮುನ್ನ ಆಲೋಚಿಸುವಂತೆ ಶಾಲೆ ಮಾದರಿಯಾಗಿ ಹೆಜ್ಜೆ ಇಡುತ್ತಿರುವುದರ ಹಿಂದೆ ಕೆ.ಟಿ.ಜಯಣ್ಣ ಪರಿಶ್ರಮವಿದೆ.

ಸರ್ಕಾರದಿಂದಲೂ ನಿಟುವಳ್ಳಿ ಶಾಲೆ ಮಾದರಿ ಶಾಲೆಯಾಗಿ ಗುರುತಿಸಲ್ಪಟ್ಟಿದೆ. ಮಕ್ಕಳಿಗೆ ಬರೀ ಶಿಕ್ಷಣವಷ್ಟೇ ಅಲ್ಲದೇ, ನೈತಿಕ ಮೌಲ್ಯ, ಯೋಗ, ಧ್ಯಾನ, ಶಾರೀರಿಕ ಶಿಕ್ಷಣದ ಬಗ್ಗೆಯೂ ಬೋಧಿಸಲಾಗುತ್ತದೆ. ಗಣಿತ ಬೋಧನೆ, ಶಾಲೆಗೆ ಸೌಲಭ್ಯ ತರಲಿಕ್ಕಷ್ಟೇ ಸೀಮಿತವಾಗದ ಶಿಕ್ಷಕ ಜಯಣ್ಣ ಯೋಗ, ಧ್ಯಾನ, ಶಾರೀರಿಕ ಶಿಕ್ಷಣವನ್ನೂ ಮಕ್ಕಳಿಗೆ ಧಾರೆ ಎರೆಯುತ್ತಾರೆ. ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಈ ಶಾಲೆ ತಲೆ ಎತ್ತಿ ನಿಂತಿದೆ. ಶಾಲೆಯಲ್ಲೇ ಹೆಚ್ಚು ಸಮಯ ಕಳೆಯುವ ಜಯಣ್ಣ ಆದರ್ಶ ಶಿಕ್ಷಕರಾಗಿ ಇತರರಿಗೂ ಪ್ರೇರಣೆಯಾಗಿದ್ದಾರೆ.

ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರಪ್ರಶಸ್ತಿ, ಅತ್ಯುತ್ತಮ ಸೇವಾದಳ ಶಿಕ್ಷಕ ರಾಜ್ಯ ಪ್ರಶಸ್ತಿ, ಏಕತಾ ಅಕ್ಷರ ಯೋಗಿ ರಾಜ್ಯ ಪ್ರಶಸ್ತಿ, ದಾವಣಗೆರೆ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ, ಭಾರತ ಸೇವಾದಳದ ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕರಾಗಿ ಭಾರತದ ಗೌರವದ ಪ್ರತೀಕವಾದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗ್ಗೆ ಮಾಹಿತಿಯನ್ನೂ ಸತತವಾಗಿ ಶಿಕ್ಷಣ ಇಲಾಖೆಯ ಎಲ್ಲರಿಗೂ, ಹಿಂದುಳಿದ ವರ್ಗ ಸಮಾಜ ಕಲ್ಯಾಣ ಇಲಾಖೆ ಎಲ್ಲಾ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೂ ನೀಡಿದ್ದಾರೆ.

ವಿಶೇಷವಾಗಿ ಕೈದಿಗಳಿಗೆ ಮನಃಪರಿವರ್ತನಾ ಶಿಬಿರಗಳನ್ನು ಜೈಲಿನಲ್ಲೇ ಆಯೋಜಿಸಿ ತರಬೇತಿ ನೀಡುತ್ತಾರೆ. ಶಾಲಾ ಬ್ಯಾಂಡ್ ವಾದನದಲ್ಲೂ ಸಹ ರಾಜ್ಯ ಸಂಪನ್ಮೂಲ ಶಿಕ್ಷಕರಾಗಿದ್ದಾರೆ ಇಲಾಖೆಯಲ್ಲೂ ರಾಜ್ಯ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಕೆ.ಟಿ.ಜಯಪ್ಪ ಶಾಲೆಗಾಗಿ ಯೋಗ ಮತ್ತು ಪ್ರಸಾದ ಮಂದಿರ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್. ಶಾಲಾ-ಕೊಠಡಿ ಮತ್ತು ವ್ಯವಸ್ಥಿತ ಪೀಠೋಪಕರಣ, ಹೈಟೆಕ್ ಶೌಚಾಲಯ. ಪ್ರತಿಭಾ ವೇದಿಕೆ. ಶಾಶ್ವತ ಧ್ವಜ ಸ್ತಂಭ. ಹೈಟೆಕ್ ಅಡುಗೆ ಕೋಣೆ. ಶುದ್ಧ ಕುಡಿಯುವ ನೀರು ಹೀಗೆ ಶಾಲೆಗೆ ಹೈಟೆಕ್ ಸ್ಪರ್ಶ ನೀಡುವಲ್ಲಿ ಜಯಣ್ಣ ಕೊಡುಗೆ ಇದೆ.

ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಶಾಲಾ ದತ್ತಿ ನಿಧಿ, ಅಡುಗೆ ಮನೆ ಪರಿಕರ, ಉತ್ತಮ ಶಾಲಾ ಪರಿಸರ ನಿರ್ಮಾಣ, ಬಡ ಮಕ್ಕಳಿಗೆ ದಾನಿಗಳಿಂದ ಪ್ರತಿ ವರ್ಷ ಧನಸಹಾಯ, ಬ್ಯಾಂಕುಗಳಿಂದ ವಿದ್ಯಾರ್ಥಿ ವೇತನ, ವಿಶೇಷ ತರಗತಿ, ಸೋಲಾರ್ ವ್ಯವಸ್ಥೆ, ಕಾಂಪೌಂಡ್, ಮಹಿಳಾ ಸಿಬ್ಬಂದಿಗೆ ಶೌಚಾಲಯ, ಕೊರೋನಾ ವೇಳೆ ಶಾಲೆಯ ಬಡ ಮಕ್ಕಳ ಪೋಷಕರಿಗೆ ಸುಮಾರು 1 ಸಾವಿರ ಫುಡ್ ಕಿಟ್ ಹಂಚಿದ್ದು, ಶಾಸಕರ ಯೋಜನೆಯಡಿ 1.5 ಕೋಟಿ ರು.ಗಿಂತ ಹೆಚ್ಚಿನ ವ್ಯವಸ್ಥೆಯಡಿ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಿಸಿದ್ದು, ಗೈರಾದ ಮಕ್ಕಳ ಮನೆ ಭೇಟಿಯಿಂದ ಹಾಜರಾತಿ ಹೆಚ್ಚಿಸುವುದು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಶೇಷ ತರಗತಿಗಳು ಶನಿವಾರ, ಭಾನುವಾರ ಇತರೆ ರಜಾ ದಿನಗಳಲ್ಲೂ ಮಕ್ಕಳ ಕಲಿಕೆಗೆ ಒತ್ತು ನೀಡುತ್ತಿರುವುದು ಈ ಶಿಕ್ಷಕರ ವಿಶೇಷ.

ವಿಶೇಷವಾಗಿ ಶಾಲೆಯ ಕ್ಯಾನ್ಸರ್ ಪೀಡಿತ ಹೆಣ್ಣು ಮಗುವಿಗೆ ಸುಮಾರು 15 ಲಕ್ಷ ರು.ಗಳನ್ನು ಎಲ್ಲರಿಂದ ಸಂಗ್ರಹಿಸಿ, ಮಗುವನ್ನು ಬದುಕಿಸಿದರು. ಅದೇ ಮಗು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.94 ಅಂಕ ಪಡೆದಿದೆ. ದಾವಣಗೆರೆ ಪ್ರತಿಷ್ಠಿತ ಕಾಲೇಜಿನಲ್ಲಿ ಉಚಿತ ಪ್ರವೇಶವನ್ನು ಪಾಲಿಕೆ ಸದಸ್ಯರೊಂದಿಗೆ ಸೇರಿ ಕೊಡಿಸಿದ್ದು ಜಯಣ್ಣ. ಪದವಿವರೆಗೆ ಆ ಮಗುವನ್ನು ಶೈಕ್ಷಣಿಕ ದತ್ತು ಪಡೆದಿದ್ದಾರೆ. ಶಿಕ್ಷಕರು ತಾವೇ ಕೈಯಿಂದ ಹಣವನ್ನು ಭರಿಸಿ ಮಕ್ಕಳ ಗುಣಾತ್ಮಕ ಶಿಕ್ಷಣ ಮತ್ತು ಸುಲಭ ಕಲಿಕೆಗಾಗಿ ಗಣಿತ ಪ್ರಯೋಗಾಲಯ ನಿರ್ಮಿಸಿದ್ದಾರೆ. ಮಾಡಿರುತ್ತಾರೆ. ತನಗಿಂತ ಕಿರಿಯರಿಲ್ಲವೆಂಬಂತೆ ಶಾಲೆ, ಶಾಲೆಯ ಮಕ್ಕಳ ಹಿತಕ್ಕಾಗಿ ಜಯಣ್ಣ ತಮ್ಮ ವೃತ್ತಿ, ಪ್ರವೃತ್ತಿಯನ್ನೆಲ್ಲಾ ಧಾರೆ ಎರೆಯುತ್ತಿದ್ದಾರೆ.