ಸಮಾಜದಲ್ಲಿ ಜಾತಿ, ಅಸ್ಪೃಶ್ಯತೆ ಹಾಗೂ ಅಸಮಾನತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಜನರಲ್ಲಿ ಆತ್ಮವಿಶ್ವಾಸ, ಶಿಕ್ಷಣ, ಸಂಘಟನೆ ಮತ್ತು ಸಾಮಾಜಿಕ ಸಮಾನತೆಯ ಅರಿವು ಮೂಡಿಸಿದ ಮಹಾನ್ ಸಮಾಜ ಸುಧಾರಕರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರಮುಖರಾಗಿದ್ದಾರೆ ಎಂದು ಮಕ್ಕಂದೂರು ಸಾಧ್ಯ ಟ್ರಸ್ಟಿ ಆಫ್ ಸೋಶಿಯಲ್ ಡೆವಲಪ್‌ಮೆಂಟ್ ಟ್ರಸ್ಟಿ ಬಿ.ಎನ್.ರಮೇಶ್ ಹೇಳಿದರು.

ಮಡಿಕೇರಿ: ಸಮಾಜದಲ್ಲಿ ಜಾತಿ, ಅಸ್ಪೃಶ್ಯತೆ ಹಾಗೂ ಅಸಮಾನತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಜನರಲ್ಲಿ ಆತ್ಮವಿಶ್ವಾಸ, ಶಿಕ್ಷಣ, ಸಂಘಟನೆ ಮತ್ತು ಸಾಮಾಜಿಕ ಸಮಾನತೆಯ ಅರಿವು ಮೂಡಿಸಿದ ಮಹಾನ್ ಸಮಾಜ ಸುಧಾರಕರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರಮುಖರಾಗಿದ್ದಾರೆ ಎಂದು ಮಕ್ಕಂದೂರು ಸಾಧ್ಯ ಟ್ರಸ್ಟಿ ಆಫ್ ಸೋಶಿಯಲ್ ಡೆವಲಪ್‌ಮೆಂಟ್ ಟ್ರಸ್ಟಿ ಬಿ.ಎನ್.ರಮೇಶ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಕೋಟ್ಯಾಂತರ ಜನರಲ್ಲಿ ಕೆಲವರು ಮಾತ್ರ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮಹಾನ್ ವ್ಯಕ್ತಿಗಳಾಗುತ್ತಾರೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ದೈವಾಂಶ ಸಂಭೂತರಾಗಿ ಗುರುತಿಸಿಕೊಂಡವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದರು.

ಸೋಮವಾರಪೇಟೆ ಸೆಂಟ್ ಜೋಸೆಫರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಜ್ಯೋತಿ ಅರುಣ್ ಕುಮಾರ್ ಅವರು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಅವರ ಕುರಿತು ಉಪನ್ಯಾಸ ನೀಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ಕಾಯಕ ತತ್ವ ಹಾಗೂ ಸಮಾನತೆಯ ಸಂದೇಶದಿಂದ ಪ್ರೇರಣೆಗೊಂಡು, ದುಡಿಮೆಯನ್ನೇ ಆರಾಧನೆಯನ್ನಾಗಿಸಿಕೊಂಡು ಬದುಕಿದ ಶಿವಶರಣ ನುಲಿಯ ಚಂದಯ್ಯನವರ ಜೀವನ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ನಿವೃತ್ತ ಪೊಲೀಸ್ ಉಪ ಅಧೀಕ್ಷರಾದ ಬಿ.ಆರ್.ಲಿಂಗಪ್ಪ ಅವರು, ನಾರಾಯಣ ಗುರುಗಳು ನೀಡಿದ ಸಂಘಟಿತರಾಗಿ, ವಿದ್ಯಾವಂತರಾಗಿ ಎಂಬ ಬೋಧನೆಯನ್ನು ಇಂದಿನ ಸಮಾಜ ಸ್ಮರಿಸಬೇಕಾಗಿದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಎಲ್.ದಿವಾಕರ ಮಾತನಾಡಿ, ಮಹನೀಯರು ಯಾವುದೇ ಒಂದು ಜಾತಿಗೆ ಸೀಮಿತವಾಗಿರದೆ, ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಆದ್ದರಿಂದ ಒಂದು ಸಮುದಾಯದ ಗಣ್ಯ ವ್ಯಕ್ತಿಗಳ ಜಯಂತಿಯನ್ನು ಆಚರಿಸುವಾಗ ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಇಡೀ ಸಮಾಜವನ್ನು ಒಗ್ಗೂಡಿಸಬೇಕು ಎಂದು ಹೇಳಿದರು. ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಸ್.ಡಿ.ವಿಜೇತ್ ಮಾತನಾಡಿ, ಮಹನೀಯರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಮಡಿಕೇರಿ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಸಮಾಜದ ಪ್ರಮುಖರಾದ ಚೆನ್ನಪ್ಪ, ಗಂಗಾಧರ್, ರಂಜನ್, ಪ್ರತೀಪ, ಸುಧೀರ್, ಕುಸುಮಾವತಿ, ಚಂದ್ರಹಾಸ್, ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಸಾಹಿತಿ ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.