ಜಗತ್ತಿನ ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಅಮೃತಕ್ಕೆ ಸಮಾನವಾದುದು.

ಕನ್ನಡಪ್ರಭ ವಾರ್ತೆ ಗದಗ

ಜಗತ್ತಿನ ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಅಮೃತಕ್ಕೆ ಸಮಾನವಾದುದು. ದೇಶದ ಭವಿಷ್ಯವು ತರಗತಿ ಕೋಣೆಗಳಲ್ಲಿ ನಿರ್ಮಾಣವಾಗುವುದರಿಂದ ಭಾವಿ ಶಿಕ್ಷಕರು ನಿರಂತರ ಅಧ್ಯಯನ ಮತ್ತು ಪರಿಶ್ರಮದ ಜತೆಗೆ ಸಚ್ಚಾರಿತ್ರ್ಯ ರೂಢಿಸಿಕೊಳ್ಳಬೇಕು ಎಂದು ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ಕುಲಸಚಿವ ಡಾ. ಅಮರೇಶ ಯತಗಲ್ ಹೇಳಿದರು.

ಗದಗ ನಗರದ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಕ ಅರಿವಿನ ಗುರು, ಲೋಕದ ಗುರು. ಪರಿಶ್ರಮವಿಲ್ಲದೆ ಯಾವುದೇ ಫಲ ಸಿಗದು ಎಂದು ತಮ್ಮ ಬಿ.ಎಡ್ ತರಬೇತಿಯ ದಿನಗಳ ಅನುಭವಗಳನ್ನು ಹಂಚಿಕೊಂಡರು.

ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಜಿ.ಎಲ್. ಬಾರಟಕ್ಕೆ, ಶಿಕ್ಷಣ ಇಲಾಖೆ ಎಂದರೆ ಅದು ಕೇವಲ ಕಡತಗಳ ವ್ಯವಹಾರವಲ್ಲ, ವಿದ್ಯಾರ್ಥಿಗಳ ಮನಸ್ಸಿನ ವ್ಯವಹಾರ. ಶಿಕ್ಷಕ ವೃತ್ತಿಯು ಎಲ್ಲ ವೃತ್ತಿಗಳನ್ನು ಬೆಳೆಸುವ ಮೂಲ ಬೇರು ಎಂದರು.

ಗದಗ ಡಯಟ್‌ನ ನಿವೃತ್ತ ಉಪನ್ಯಾಸಕ ಎಸ್.ಡಿ. ಗಾಂಜಿ ಮಾತನಾಡಿ, ಪ್ರತಿಭೆಯು ಶ್ರೀಮಂತಿಕೆಯನ್ನೂ ಮೆಟ್ಟಿ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ಅಳವಂಡಿ ಶ್ರೀ ಸಿದ್ದೇಶ್ವರ ಸಂಯುಕ್ತ ಪಿಯು ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಂ.ಎಸ್. ಹೊಟ್ಟಿನ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಕರು ನಿಭಾಯಿಸಬೇಕಾದ ಆಡಳಿತಾತ್ಮಕ ಹೊಣೆಗಾರಿಕೆಗಳ ಕುರಿತು ಮಾರ್ಗದರ್ಶನ ನೀಡಿದರು.

ಅಳವಂಡಿಯ ಕರ್ನಾಟಕ ವಿದ್ಯಾವರ್ಧಕ ಸಮಿತಿ ಚೇರ್ಮನ್ ಭುಜಂಗಸ್ವಾಮಿ ಇನಾಮದಾರ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಕಾರ್ಯದರ್ಶಿ ವಿಜಯಲಕ್ಷ್ಮಿ ಕಟ್ಟಿಮನಿ ಹಿರೇಮಠ ಅವರು ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿದರು. ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಎಸ್.ಎ. ಹಿರೇಮಠ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಬಿಇಡಿ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿನೋದ ಗುರಿಕಾರ ಅವರನ್ನು ಸನ್ಮಾನಿಸಲಾಯಿತು. ಪ್ರಶಿಕ್ಷಣಾರ್ಥಿಗಳಾದ ಕಾವ್ಯಾ ಹೊಟ್ಟಿನ, ಅಭಿಷೇಕ ಶ್ಯಾಗೋಟಿ ಅನಿಸಿಕೆ ಹಂಚಿಕೊಂಡರು. ಪ್ರಾಚಾರ್ಯ ಡಾ. ಬಿ.ಬಿ. ಹೊಳಗುಂದಿ ವಾರ್ಷಿಕ ವರದಿ ವಾಚಿಸಿ, ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಆರ್. ಜಟ್ಟೆಣ್ಣವರ ಕ್ರೀಡಾ ವರದಿ ವಾಚಿಸಿದರು. ಲಕ್ಷ್ಮಿದೇವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಒಡ್ಡಟ್ಟಿ ವಂದಿಸಿದರು. ಸ್ನೇಹಾ ಮಾಲಿಗೌಡ್ರ ನಿರೂಪಿಸಿದರು.