ಪೊಲೀಸರ ಅಮಾನತು ಮಾಡದಿದ್ದಕ್ಕೆ ತಹಸೀಲ್ದಾರ್ ಜೀಪ್ ಗೆ ಬೆಂಕಿ

| Published : Sep 07 2024, 01:35 AM IST

ಸಾರಾಂಶ

ಬೆಂಗಳೂರಿನ ವಿಧಾನಸೌಧದ ಮುಂಭಾಗ ಬೈಕ್ ಗೆ ಬೆಂಕಿ ಹಚ್ಚಿದ್ದ ಪೃಥ್ವಿರಾಜ್ ಮತ್ತೆ ಚಳ್ಳಕೆರೆಯಲ್ಲಿ ತಹಸೀಲ್ದಾರ್ ಜೀಪಿಗೆ ಬೆಂಕಿ ಇಟ್ಟು ಸುದ್ದಿಯಾಗಿದ್ದಾನೆ. ತಹಸೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿದ ನಂತರ ಪೊಲೀಸರು ಪೃಥ್ವಿರಾಜ್ ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆಗ ತಹಸೀಲ್ದಾರ್ ಜೀಪಿಗೆ ಬೆಂಕಿ ಇಟ್ಟಿದ್ದು ಯಾಕೆ ಎಂದು ಕೇಳಿದ್ದಕ್ಕೆ, ನಾನು ನೀಡಿದ ದೂರಿನನ್ವಯ ಕೇವಲ ಓರ್ವ ಪೋಲೀಸ್ ಪೇದೆಯನ್ನು ಮಾತ್ರ ಅಮಾನತು ಪಡಿಸಲಾಗಿದ್ದು, ಇನ್ನೋರ್ವರ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ. ಹಾಗಾಗಿ ತಹಸೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಏನಿದು ಪ್ರಕರಣ

ನನ್ನ ಮಗ ಪೃಥ್ವಿರಾಜ್ ನಾಪತ್ತೆಯಾಗಿದ್ದಾನೆ ಹುಡುಕಿಕೊಡಿ ಎಂದು ಪೃಥ್ವಿರಾಜ್ ತಾಯಿ ಕಳೆದ ಜುಲೈನಲ್ಲಿ ಚಳ್ಳಕೆರೆ ಠಾಣೆಗೆ ದೂರು ನೀಡಲು ಬಂದಿದ್ದರು. ಅಂದು ಪೊಲೀಸರು ದೂರು ದಾಖಲಿಸಿಕೊಳ್ಳದೇ ತಾಯಿಯನ್ನು ವಾಪಾಸ್ಸು ಕಳಿಸಿದ್ದರು. ಬಳಿಕ ದೂರು ದಾಖಲಿಸಿಕೊಳ್ಳದೇ ಇರುವುದರ ಬಗ್ಗೆ ವಿಚಾರಿಸಲು ಅಮ್ಮನ ಕರೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದ ನನ್ನನ್ನು ಥಳಿಸಲಾಗಿತ್ತು ಎಂಬುದು ಪ್ರೃಥ್ವಿರಾಜ್ ವಾದ. ಈ ಕಾರಣದಿಂದ ಟೆರರಿಸ್ಟ್ ಆಗುವುದಾಗಿ ಹೇಳಿ ಪೃಥ್ವಿರಾಜ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಪ್ಪೊಪ್ಪಿಗೆ ಪತ್ರ ಬರೆಯಿಸಿಕೊಂಡು ಬಿಟ್ಟಿದ್ದರು.

ನಂತರ ಬೆಂಗಳೂರಿನ ವಿಧಾನಸೌಧದ ಮುಂಭಾಗ ಬೈಕ್ ಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಪೃಥ್ವಿ ಆಕ್ರೋಶ ವ್ಯಕ್ತಪಡಿಸಿದ್ದ. ಇದಾದ ತರುವಾಯ ವಿಚಾರಣೆ ನಡೆಸಿದ್ದ ಚಿತ್ರದುರ್ಗ ಎಸ್ಪಿ ಧರ್ಮೇಂದ್ರ ಕುಮಾರ್ ಓರ್ವ ಪೇದೆಯ ಅಮಾನತು ಮಾಡಿ ಆದೇಶಿಸಿದ್ದರು. ಠಾಣೆಯಲ್ಲಿ ಹಲ್ಲೆ ಮಾಡಿದ ಇಬ್ಬರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂಬುದು ಪೃಥ್ವಿರಾಜ್ ಆಗ್ರಹವಾಗಿತ್ತು. ಹಾಗಾಗಿ ತಹಸೀಲ್ದಾರ್ ಜೀಪಿಗೆ ಬೆಂಕಿಯಿಟ್ಟಿದ್ದೇನೆಂದು ಪೃಥ್ವಿ ಪೊಲೀಸರಿಗೆ ಸ್ಪಷ್ಟ ಪಡಿಸಿದ್ದಾನೆ.