ಅಮೇರಿಕಾದ ಹ್ಯೂಸ್ಟನ್‌ನಲ್ಲಿ ಉಡುಪಿಯ ಪುತ್ತಿಗೆ ಮಠಕ್ಕೆ ನೂತನ ಶ್ರೀಕೃಷ್ಣ ವೃಂದಾವನ ದೇವಾಲಯ ನಿರ್ಮಾಣಕ್ಕಾಗಿ ಸುಮಾರು 8 ಎಕರೆ ಭೂಮಿ ಸಮರ್ಪಣೆ ಸಮಾರಂಭವು ಭಕ್ತಿಸಂಭ್ರಮದಿಂದ ನಡೆಯಿತು.

ಉಡುಪಿ: ಅಮೇರಿಕಾದ ಹ್ಯೂಸ್ಟನ್‌ನಲ್ಲಿ ಉಡುಪಿಯ ಪುತ್ತಿಗೆ ಮಠಕ್ಕೆ ನೂತನ ಶ್ರೀಕೃಷ್ಣ ವೃಂದಾವನ ದೇವಾಲಯ ನಿರ್ಮಾಣಕ್ಕಾಗಿ ಸುಮಾರು 8 ಎಕರೆ ಭೂಮಿ ಸಮರ್ಪಣೆ ಸಮಾರಂಭವು ಭಕ್ತಿಸಂಭ್ರಮದಿಂದ ನಡೆಯಿತು.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಗಣ್ಯರನ್ನು ಕುದುರೆ ಸಾರೋಟಿನಲ್ಲಿ 8 ಎಕರೆ ಪ್ರದೇಶದ ಸುತ್ತ ಕರೆದೊಯ್ದು ಸ್ಥಳದ ಪರಿವೀಕ್ಷಣೆ ಮಾಡಿಸಲಾಯಿತು. ಹುಲಿವೇಷ ಮತ್ತು ಕೋಲಾಟದೊಂದಿಗೆ ಶ್ರೀಪಾದರನ್ನು ವೇದಿಕೆಗೆ ಸ್ವಾಗತಿಸಲಾಯಿತು. ಶ್ರೀಪಾದರು ಗಣ್ಯರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜಮುನಾ - ಬಿ.ಎನ್. ಮುರಳಿ ದಂಪತಿ ದೇವಾಲಯ ನಿರ್ಮಾಣಕ್ಕಾಗಿ 8 ಎಕರೆ ಭೂಮಿಯನ್ನು ಸಮರ್ಪಿಸಿದ ಸಂಕೇತವಾಗಿ ಭೂದಾನದ ಫಲಕವನ್ನು ಪೂಜ್ಯ ಶ್ರೀಪಾದರಿಗೆ ಅರ್ಪಿಸಿದರು. ಅವರನ್ನು ಹಾಗೂ ಸುಮಾರು 1.9 ಮಿಲಿಯನ್ ಡಾಲರ್ ಮೌಲ್ಯದ ಭೂಮಿ ಖರೀದಿಗೆ ಸಹಕರಿಸಿದ ಹ್ಯೂಸ್ಟನ್ ಜೈನ್ ಸೊಸೈಟಿ, 1 ಮಿಲಿಯನ್ ಡಾಲರ್ ದೇಣಿಗೆ ನೀಡಿದ ಗೀತಾ ರಾಮರಾವ್ - ರಾಮರಾವ್ ದಂಪತಿ ಶ್ರೀಗಳು ಅಭಿನಂದಿಸಿದರು.

ನಂತರ ಆಶೀರ್ವಚನ ನೀಡಿದ ಶ್ರೀಪಾದರು, ನಿರ್ಮಾಣವಾಗಲಿರುವ ದೇವಾಲಯದ ಪರಿಸರದಲ್ಲಿ ಚರ್ಚ್, ಮಸೀದಿ, ಬೌದ್ಧ ಮಂದಿರ ಹಾಗೂ ವಿವಿಧ ಹಿಂದೂ ದೇವಾಲಯಗಳಿರುವುದು ‘ವಸುದೈವ ಕುಟುಂಬಕಂ’ ಎಂಬ ಸನಾತನ ಧರ್ಮದ ಸಂದೇಶಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನಿರ್ಮಾಣವಾಗುವ ದೇವಾಲಯವು ಸರ್ವಧರ್ಮ ಸಮರಸತೆ ಮತ್ತು ಆಧ್ಯಾತ್ಮಿಕ ಏಕತೆಯ ಪ್ರತೀಕವಾಗಲಿದೆ ಎಂದು ತಿಳಿಸಿದರು.

ಸುಮಾರು 15 ಮಿಲಿಯನ್ ಡಾಲರ್ ವೆಚ್ಚದ ಯೋಜನೆಯಲ್ಲಿ 1,000 ಆಸನಗಳ ಸಭಾಂಗಣ, 370 ಕಾರುಗಳಿಗೆ ಪಾರ್ಕಿಂಗ್ ಹಾಗೂ 100 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಕಲ್ಪಿಸುವ ಯೋಜನೆಯಿದೆ. ಶ್ರೀ ಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪಿಸಿ ಅಮೆರಿಕದಲ್ಲಿಯೇ ವೇದ, ಆಗಮ ಮತ್ತು ಅರ್ಚಕ ಶಿಕ್ಷಣ ನೀಡುವ ಉದ್ದೇಶವಿದೆ. ಈ ಕೇಂದ್ರವು ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಲಿದೆ ಎಂದು ಶ್ರೀಗಳು ಹೇಳಿದರು.

ಭಾರತದ ಹ್ಯೂಸ್ಟನ್ ಕಾನ್ಸುಲ್ ಜನರಲ್ ಡಿ.ಸಿ. ಮಂಜುನಾಥ್, ಫೋರ್ಟ್ ಬೆಂಡ್ ಕೌಂಟಿ ಕಮಿಷನರ್ ಆ್ಯಂಡಿ ಮೇಯರ್ಸ್, ನ್ಯಾಯಾಧೀಶ ಡೇನಿಯಲ್ ವಾಂಗ್ ಹಾಗೂ ಟೆಕ್ಸಾಸ್‌ನ ಜಿಲ್ಲಾ ನ್ಯಾಯಾಧೀಶ ಸುರೇಂದ್ರನ್ ಪಟ್ಟೇಲ್, ವಿಎಚ್‌ಪಿ ಪ್ರತಿನಿಧಿ ಎನ್.ಎ. ಜೋಶಿಪುರ, ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗುರುವಂದನಾ ನೆರವೇರಿತು. ಉಜ್ವಲಾ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಬಿ.ಎನ್. ಮುರಳಿ ಸ್ವಾಗತಿಸಿದರು. ಕೀರ್ತಿ ನೀಲಮಣಿ ವಂದಿಸಿದರು.