ನಿರಂತರ ಮಳೆಗೆ ಕುಸಿದ ದೇವಸ್ಥಾನ ಗೋಪುರ

| Published : Aug 03 2024, 12:35 AM IST

ಸಾರಾಂಶ

ಚನ್ನಮ್ಮನ ಕಿತ್ತೂರು ಪಟ್ಟಣದ ಕೊಂಡವಾಡ ಚೌಕದಲ್ಲಿರುವ ಕರೆಮ್ಮದೇವಿ ದೇವಸ್ಥಾನದ ಗೋಪುರ ಮಳೆಗೆ ನೆನೆದು ನೆಲಕಚ್ಚಿರುವ ಘಟನೆ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಪಟ್ಟಣದ ಕೊಂಡವಾಡ ಚೌಕದಲ್ಲಿರುವ ಕರೆಮ್ಮದೇವಿ ದೇವಸ್ಥಾನದ ಗೋಪುರ ಮಳೆಗೆ ನೆನೆದು ನೆಲಕಚ್ಚಿರುವ ಘಟನೆ ಶುಕ್ರವಾರ ನಡೆದಿದೆ.

ದೇವಿಯ ಸಕಲ ಭಕ್ತರ ದೇಣಿಗೆಯಿಂದ 3 ವರ್ಷಗಳ ಹಿಂದೆ ಈ ದೇವಸ್ಥಾನ ನಿರ್ಮಾಣಗೊಂಡಿತ್ತು. ಆದರೆ, ಧಾರಾಕಾರ ಮಳೆಗೆ ನೆನೆದಿದ್ದ ಈ ಗೋಪುರ ಶುಕ್ರವಾರ ನೆಲಕಚ್ಚಿದ ಪರಿಣಾಮ ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ‌. ಗೋಪುರ ನೆಲಕಚ್ಚಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಭಾಗಿಯಾದರು.

ಪಟ್ಟಣದ ಐತಿಹಾಸಿಕ ಗಡಾದ ಮರಡಿಯಲ್ಲಿರುವ ಕಾವಲು ಗೋಪುರ ಸಹ ನಿರಂತರ ಮಳೆಯ ಪರಿಣಾಮ ಮೇಲ್ಭಾಗದಲ್ಲಿ ನೀರು ನಿಂತು ಕುಸಿದಿದೆ. ಈ ಹಿಂದೆ ಗಡಾದ ಮರಡಿಯ ಅಭಿವೃದ್ಧಿಗೆ ಪ್ರಾಧಿಕಾರದಡಿಯಲ್ಲಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು, ಆಗ ಕಾವಲು ಗೋಪುರವನ್ನು ಸಹ ಸಂರಕ್ಷಿಸಿ ಅಂದಗೊಳಿಸಲಾಗಿತ್ತು. ಆದರೆ, ಈಗ ಕಾವಲು ಗೋಪುರ ನೆಲಕಚ್ಚಿದ್ದು ಕಾಮಗಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸುತ್ತಿದೆ. ಈ ಐತಿಹಾಸಿಕ ಗಡಾದ ಮರಡಿಯ ಮೇಲೆ ಬೃಹತ್ ಗಾತ್ರದ ರಾಷ್ಟ್ರಧ್ವಜ ಹಾರಿಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆಗೆ ಕೆಲ ದಿನಗಳು ಮಾತ್ರ ಇದ್ದು, ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.