ಶರೀರ ಭಗವಂತ ನೀಡಿದ ದೇವಸ್ಥಾನ: ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು

| Published : Jul 06 2025, 11:48 PM IST

ಶರೀರ ಭಗವಂತ ನೀಡಿದ ದೇವಸ್ಥಾನ: ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮದ ಆಚರಣೆ ಪಾಲನೆ ಮಾಡಿದಾಗ ಅದು ಅರ್ಥಪೂರ್ಣವಾಗುತ್ತದೆ. ಶರೀರ ಭಗವಂತ ನೀಡಿದ ದೇವಸ್ಥಾನವಾಗಿದ್ದು, ಇದರಲ್ಲಿ ಭಗವಂತ ವಾಸ ಮಾಡುತ್ತಾನೆ.

ರಾಣಿಬೆನ್ನೂರು: ಉಪ ಪಂಗಡಗಳು ವೃತ್ತಿಯಿಂದ ಬಂದಿದ್ದು ವೀರಶೈವ ಲಿಂಗಾಯತ ಒಂದೇ ಜಾತಿ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು. ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದ ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಆಷಾಢ ಮಾಸದ ಇಷ್ಟಲಿಂಗ ಪೂಜಾ ಮತ್ತು ಜನಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧರ್ಮದ ಆಚರಣೆ ಪಾಲನೆ ಮಾಡಿದಾಗ ಅದು ಅರ್ಥಪೂರ್ಣವಾಗುತ್ತದೆ. ಶರೀರ ಭಗವಂತ ನೀಡಿದ ದೇವಸ್ಥಾನವಾಗಿದ್ದು, ಇದರಲ್ಲಿ ಭಗವಂತ ವಾಸ ಮಾಡುತ್ತಾನೆ. ಭಗವಂತ ಶರೀರದಿಂದ ಹೋದಾಗ ಅದು ನಿರ್ಜೀವವಾಗುತ್ತದೆ. ಶರೀರ ಬಾಡಿಗೆ ಮನೆಯಿದ್ದಂತೆ. ಅದರಲ್ಲಿ ಸದಾಚಾರ, ಸದ್ವಿನಿಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಶರೀರ ಶುದ್ಧಿಗೆ ಲಿಂಗಪೂಜೆ ಸಲ್ಲಿಸಿ ಉತ್ತಮ ಆಚಾರಗಳ ಪಾಲನೆ ಮಾಡಬೇಕು. ಆಚರಣೆಗಳ ಪಾಲನೆ ವಿಷಯ ಕುರಿತು ಗುರುಗಳಲ್ಲಿ ದಿಟ್ಟತನ ಇರಬೇಕು. ಲಿಂಗಾಯತ ಜಾತಿಯಲ್ಲಿ ಜನ್ಮ ತಾಳಿದರೆ ಸಾಲದು, ಆಚರಣೆಯಿಂದ ಲಿಂಗಾಯತರಾಗಬೇಕು. ಗರ್ಭಧಾರಣೆಯಿಂದಲೇ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಪ್ರತಿದಿನ ಲಿಂಗ ಪೂಜೆ ಮಾಡುವವರಿಗೆ ನೇತ್ರ ದೋಷವಾಗುವುದಿಲ್ಲ. ಮೊಬೈಲ್‌ಗೆ ನೀಡುವ ಮಹತ್ವವನ್ನು ಧರ್ಮಾಚರಣೆಗೆ ಕೊಡಬೇಕು ಎಂದರು. ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿ, ಲಿಂಗ ಧರಿಸುವವರು ಲಿಂಗಾಯತರು. ಆದರೆ ಇತ್ತೀಚಿನ ದಿನಗಳಲ್ಲಿ ಲಿಂಗ ಜಗಲಿ ಮೇಲೆ ಇಡುವ ಯುವ ಜನರು ಹೆಚ್ಚಾಗಿದ್ದಾರೆ. ಆಷಾಢ ಮಾಸದಲ್ಲಿ ಉಜ್ಜಯಿನಿ ಶ್ರೀಗಳು ಧರ್ಮ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು. ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾಯರು ನೇತೃತ್ವ ವಹಿಸಿದ್ದರು. ದಿಂಡದಹಳ್ಳಿ ಮಠದ ಪಶುಪತಿ ಶಿವಾನಂದ ಶಿವಾಚಾರ್ಯರು, ಮಣಕೂರು ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಉಪಸ್ಥಿತರಿದ್ದರು.

ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ಸುನಂದಮ್ಮ ತಿಳವಳ್ಳಿ, ಗುರುರಾಜ ತಿಳವಳ್ಳಿ, ಜಯಶ್ರೀ ತಿಳವಳ್ಳಿ, ಮಲ್ಲಿಕಾರ್ಜುನ ಅಂಗಡಿ, ಹಾಲೇಶ ಗವಳಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಎಫ್.ಕೆ. ಭಸ್ಮಾಂಗಿಮಠ, ವಾಗೀಶ ಮಳೇಮಠ, ಕಸ್ತೂರಿ ಪಾಟೀಲ, ಹಾಲಸಿದ್ಧೇಶ್ವರಶಾಸ್ತ್ರಿ, ನೆಗಳೂರಮಠ, ಮೃತ್ಯುಂಜಯ ಪಾಟೀಲ, ಮಾಗನೂರಮಠ, ಅಜ್ಜೇವಡಿಮಠ ಸೇರಿದಂತೆ ಅಪಾರ ಭಕ್ತರು ಇದ್ದರು.