ರಾಮನಗರ: ಕಲಾವಿದರು ಇರುವ ವಿಚಾರಗಳನ್ನೇ ಹೇಳಿ ಅಥವಾ ತೋರಿಸಿ ಆ ಮೂಲಕ ಪ್ರೇಕ್ಷಕರಲ್ಲಿ ನೋವು ಸಂಕಟಗಳನ್ನು ತುಂಬುವ ಅವಶ್ಯಕತೆ ಇಲ್ಲ. ನಾಟಕದ ಪರಿಭಾಷೆ ಬದಲಾಗಬೇಕಿದೆ ಎಂದು ಹಿರಿಯ ರಂಗಕರ್ಮಿ ಎಕ್ಬಾಲ್ ಅಹಮದ್ ಹೇಳಿದರು

ರಾಮನಗರ: ಕಲಾವಿದರು ಇರುವ ವಿಚಾರಗಳನ್ನೇ ಹೇಳಿ ಅಥವಾ ತೋರಿಸಿ ಆ ಮೂಲಕ ಪ್ರೇಕ್ಷಕರಲ್ಲಿ ನೋವು ಸಂಕಟಗಳನ್ನು ತುಂಬುವ ಅವಶ್ಯಕತೆ ಇಲ್ಲ. ನಾಟಕದ ಪರಿಭಾಷೆ ಬದಲಾಗಬೇಕಿದೆ ಎಂದು ಹಿರಿಯ ರಂಗಕರ್ಮಿ ಎಕ್ಬಾಲ್ ಅಹಮದ್ ಹೇಳಿದರು.

ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಮುದ್ದುಶ್ರೀ ದಿಬ್ಬದಲ್ಲಿ ನೂತನವಾಗಿ ನಿರ್ಮಿಸಿರುವ ರಂಗಮಂದಿರ ಉದ್ಘಾಟಿಸಿ ಮಾತನಾಡಿದ ಅ‍ವರು, ನಿರ್ದೇಶಕರ ನಾಟಕಗಳು ಇಂದು ನಿರ್ಮಾಣವಾಗುತ್ತಿವೆ. ಆದರೆ, ನಾಟಕಗಳು ಕಲಾವಿದರ ನಾಟಕಗಳಾಗಬೇಕಾಗಿದೆ. ಸಂಪೂರ್ಣವಾಗಿ ಕಲಾವಿದರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿದಾಗ ಮಾತ್ರ ನಿಜವಾದ ನಾಟಕದ ಆಶಯಗಳು ಈಡೇರಿದಂತಾಗುತ್ತದೆ. ಆ ದಿಕ್ಕಿನಲ್ಲಿ ಇಂದಿನ ರಂಗಪ್ರಕ್ರಿಯೆಗಳು ತಮ್ಮ ದಿಕ್ಕನ್ನು ಬದಲಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಇಫ್ರೋ ಜಾನಪದ ಮಹಾವಿದ್ಯಾಲಯದ ಸರ್ಟಿಫಿಕೇಟ್‌ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಸಮರ್ಥವಾದ ಒಂದು ಪ್ರೇಕ್ಷಕಪ್ರಿಯ ನಾಟಕ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ವಿ. ಬಾಬು ಮಾತನಾಡಿ, ಕೇವಲ ಸೋಷಿಯಲ್ ಮೀಡಿಯಾದಲ್ಲಿ ಕಳೆದು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಸ್ತುತ್ಯಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಫ್ರೋ ಜನಪದ ಮಹಾವಿದ್ಯಾಲಯದ ನಿರ್ದೇಶಕ ಡಾ ಎಂ.ಬೈರೇಗೌಡ ಮಾತನಾಡಿ, ಮಕ್ಕಳ ಮನೋಭಿತ್ತಿಯ ಮೇಲೆ ಚಿತ್ತಾರ ಮೂಡಿಸುವ ಕಾರ್ಯ ನಡೆದಿದೆ. ಜಿಲ್ಲಾ ಕೇಂದ್ರದಲ್ಲಿ ಒಂದು ವ್ಯವಸ್ಥಿತ ರಂಗಮಂದಿರದ ಕೊರತೆಯಿದ್ದು ಅದನ್ನು ತುಂಬಿಸುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಘಟನೆ ಎಂದು ಹೇಳಿದರು.

ಚನ್ನಪಟ್ಟಣ ಬಾಲಕಿಯರ ಸರ್ಕಾರಿ ಪದವೀಪೂರ್ವ ಕಾಲೇಜು ಪ್ರಾoಶುಪಾಲರಾದ ಎಸ್.ಉಮಾ ಮಾತನಾಡಿ, ನಮ್ಮ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಟ್ರಸ್ಟ್ ಕಾರ್ಯ ಮೆಚ್ಚುವಂತಹದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಮಾತನಾಡಿ, ರಾಮನಗರದಲ್ಲಿ ವ್ಯವಸ್ಥಿತ ರಂಗಮಂದಿರ ನಿರ್ಮಾಣದ ಹಾದಿಯಲ್ಲಿ ಕಾರ್ಯಪ್ರವೃತ್ತ ಆಗಿದೆ. ಮುದ್ದುಶ್ರೀ ದಿಬ್ಬದ ಈ ರಂಗಮಂದಿರದಲ್ಲಿ ಇಲಾಖೆಯು ಪ್ರತೀ ತಿಂಗಳು ಒಂದು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಂಗಮಂದಿರಕ್ಕೆ ಅಗತ್ಯವಾದ ಸ್ಕ್ರೀನ್ ಹೊಲಿದು ಅಳವಡಿಸಿದ ಟೈಲರ್ ರವಿ, ರೇಣುಕಾ ಹೋಟೆಲ್ ಮಾಲೀಕರಾದ ರೇಣುಕಮ್ಮ, ಪಾಪಣ್ಣ ಮಿಲಿಟರಿ ಹೋಟೆಲಿನ ಪಾಪಣ್ಣ ಅವರನ್ನು ಸನ್ಮಾನಿಸಲಾಯಿತು. ನಾಟಕ ನಿರ್ದೇಶಕ ಎಂ.ಸಿ.ನಾಗರಾಜು, ಇಫ್ರೋ ಜಾನಪದ ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ ವ.ನಂ.ಶಿವರಾಮು ಉಪಸ್ಥಿತರಿದ್ದರು.

29ಕೆಆರ್ ಎಂಎನ್ 3.ಜೆಪಿಜಿ

ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಮುದ್ದುಶ್ರೀ ದಿಬ್ಬದಲ್ಲಿ ನೂತನವಾಗಿ ನಿರ್ಮಿಸಿರುವ ರಂಗಮಂದಿರದ ಉದ್ಗಾಟನಾ ಸಮಾರಂಭದಲ್ಲಿ ಅತಿಥಿಗಳು ಹಾಗೂ ಕಲಾವಿದರು ಇರುವುದು.