ಇದು ಬಸಿನೀರು ಸಮಸ್ಯೆಯಿಂದ ಬಳಲುವ ಗ್ರಾಮ ವಿಚಿತ್ರ ಎಂದರೇ ಈ ಊರಲ್ಲಿ ಶುದ್ದ ಕುಡಿಯುವ ನೀರು ಸಿಗದೇ ಸಾಮಾನ್ಯ ಜನರು ಸಂಕಷ್ಟ ಸಿಲುಕಿದ್ದಾರೆ ಶುದ್ದ ಕುಡಿಯುವ ನೀರು ಪಡೆಯಲು ತಾಲೂಕಿನ ನೀರಲಕೇರಿ ಗ್ರಾಮಸ್ಥರು ಅನ್ಯ ಗ್ರಾಮಗಳಿಗೆ ತೆರಳುವ ದುಸ್ಥಿತಿ ನಿರ್ಮಾಣಗೊಂಡಿದೆ.

ಗುರುರಾಜ ಗೌಡೂರು

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಇದು ಬಸಿನೀರು ಸಮಸ್ಯೆಯಿಂದ ಬಳಲುವ ಗ್ರಾಮ ವಿಚಿತ್ರ ಎಂದರೇ ಈ ಊರಲ್ಲಿ ಶುದ್ದ ಕುಡಿಯುವ ನೀರು ಸಿಗದೇ ಸಾಮಾನ್ಯ ಜನರು ಸಂಕಷ್ಟ ಸಿಲುಕಿದ್ದಾರೆ ಶುದ್ದ ಕುಡಿಯುವ ನೀರು ಪಡೆಯಲು ತಾಲೂಕಿನ ನೀರಲಕೇರಿ ಗ್ರಾಮಸ್ಥರು ಅನ್ಯ ಗ್ರಾಮಗಳಿಗೆ ತೆರಳುವ ದುಸ್ಥಿತಿ ನಿರ್ಮಾಣಗೊಂಡಿದೆ.

ನೀರಲಕೇರಿ ಗ್ರಾಮದ ಬಸಿನೀರು ಸಮಸ್ಯೆಯಿಂದ ಬಳಲುತ್ತಿದೆ. ಇಂತಹ ಗ್ರಾಮದಲ್ಲಿ ವಾಸ ಮಾಡುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಶುದ್ದ ಕುಡಿಯುವ ನೀರು ಕುಡಿಯುವ ಜನರು ಹೈಡ್ರೋಸೆಲ್, ಆನೆಕಾಲು, ಮಲೆರೀಯಾ, ಡೆಂಘಿ ಸೇರಿದಂತೆ ಸಾಂಕ್ರಾಮಿಕ ರೋಗಗಳು ಬಳಲುತ್ತಿದ್ದಾರೆ. ಗ್ರಾಮದಲ್ಲಿ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲು ಗ್ರಾಮದ ಗ್ರಂಥಾಲಯದ ಪಕ್ಕದಲ್ಲಿ ಅಂದಾಜು 10 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಶುದ್ದ ಕುಡಿಯುವ ನೀರಿನ ಘಟಕ ಆರಂಭದಲ್ಲಿ ಉತ್ತಮ ಚಾಲನೆಯಲ್ಲಿ ಇತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಪದೇ ಪದೇ ದುರಸ್ಥಿಗೀಡಾಗುತ್ತಿದೆ. ಇದರಿಂದ ಗ್ರಾಮ ಪಂಚಾಯಿತಿ ಆಡಳಿತ ಯಾವುದೇ ಕ್ರಮ ವಹಿಸಲಿಲ್ಲ. ಬರಗಾಲದಂತಹ ಭೀಕರ ಸ್ಥಿತಿಯಲ್ಲೂ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದರ ಮಧ್ಯೆ ನೀರಲಕೇರಿಯಲ್ಲಿ 2023-24ನೇ ಸಾಲಿನಲ್ಲಿ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನಯಡಿ 12.50 ಲಕ್ಷ ರು.ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಯೋಜನೆಯ ಕಾಮಗಾರಿ ಪೂರ್ಣಗೊಳಿಸದೇ ಕೆಆರ್‌ಡಿಎಲ್ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದೆ. ಕಾಮಗಾರಿ ಪರಿಶೀಲಿಸಿ ಹಸ್ತಾಂತರ ಮಾಡಿಕೊಳ್ಳಬೇಕಿದ್ದ ಗ್ರಾಮ ಪಂಚಾಯಿತಿ ಆಡಳಿತ ಕಣ್ಮುಚ್ಚಿ ಹಸ್ತಾಂತರ ಮಾಡಿಕೊಂಡಿದ್ದರ ಪರಿಣಾಮ ಇಂದು ನೀರಲಕೇರಿಗೆ ಶುದ್ದ ಕುಡಿಯುವ ನೀರು ಮರಿಚೀಕೆಯಾಗಿದೆ.

ರೋಗ-ರುಜನಗಳಿಗೆ ಅಶುದ್ದ ನೀರು ಕಾರಣ ಎಂದು ಅರಿತ ನೀರಲಕೇರಿ ಗ್ರಾಮಸ್ಥರು 3 ಕಿ.ಮೀ ದೂರದ ಈಚನಾಳ, 5 ಕಿ.ಮೀ ದೂರದ ಆನಾಹೊಸೂರು ಗ್ರಾಮಕ್ಕೆ ತೆರಳಿ ಅಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳಿಂದ ನೀರು ತೆಗೆದುಕೊಂಡು ಬರುತ್ತಾರೆ. ಸಾಮಾನ್ಯ ಜನರಿಗೆ ಬೇರೆ ಗ್ರಾಮಗಳಿಗೆ ತೆರಳುವುದು ಅಸಾಧ್ಯವಾಗಿದ್ದು, ಅಶುದ್ದ ನೀರು ಸೇವನೆ ಮಾಡಿ ರೋಗ-ರುಜಗಳಿಂದ ಬಳಲುತ್ತಿದ್ದಾರೆ.

ಗ್ರಾಮದಲ್ಲಿ ಕೆಟ್ಟು ಹೋದ ಅಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಮಾಡುವಂತೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಸಂಬಂಧಿಸಿದ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ಪತ್ರಗಳ ಮೂಲಕ ಮನವಿ ಮಾಡಿದರೂ ಪಂಚಾಯಿತಿ ಆಡಳಿಯ ಕೈಚೆಲ್ಲಿ ಕುಳಿತಿದೆ ಎಂದು ಗ್ರಾಮಸ್ಥರ ದೂರಿದ್ದಾರೆ.

ನೀರಲಕೇರಿ ಗ್ರಾಮದ ಹಳೆಯ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿ ಮಾಡಲು ಕ್ರಮ ವಹಿಸಲಾಗಿದೆ. ಪಂಪು ದುರಸ್ಥಿಗೆ ತೊಂದರೆಯಾಗಿದೆ. ಇನ್ನೂ ಹೊಸ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವೇ ಸರಿಯಾಗಿ ಮಾಡಿಲ್ಲ ಎಂದು ನೀರಲಕೇರಿ ಪಿಡಿಓ ಅಮರಗುಂಡಮ್ಮ ಹೇಳಿದರು.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಮರಿಚೀಕೆಯಾಗಿದೆ. ಎರಡೂ ಘಟಕಗಳು ಇದ್ದರೂ ಜನರಿಗೆ ಉಪಯೋಗ ಇಲ್ಲದಂತಾಗಿದೆ. ಶುದ್ಧ ಕುಡಿಯುವ ನೀರು ಪಡೆಯಲು ಅನ್ಯ ಗ್ರಾಮಗಳಿಗೆ ತೆರಳುವ ದುಸ್ಥಿತಿ ಇದೆ. ಪಂಚಾಯಿತಿ ಆಡಳಿತ ಸಂಪೂರ್ಣ ನಿದ್ರೆಗೆ ಜಾರಿದೆ ಎಂದು ನೀರಲಕೇರಿ ಗ್ರಾಮಸ್ಥ ಬಸವಲಿಂಗಪ್ಪ ಹೇಳಿದರು.