ತ್ರಿವಿಧ ದಾಸೋಹಿ, ರಾಜ್ಯಾದ್ಯಂತ ಸುಕ್ಷೇತ್ರಗಳು, ಆಂಧ್ರಪ್ರದೇಶದ ಶ್ರೀಶೈಲಂ, ಮಹಾರಾಷ್ಟ್ರದ ಫಂಡರಪೂರ ಸೇರಿದಂತೆ ವರ್ಷದಲ್ಲಿ ವಿವಿಧೆಡೆ ೧೮೭ ಅನ್ನದಾಸೋಹ ನಡೆಸುತ್ತಿದ್ದ, ಅನ್ನದಾನೇಶ್ವರ ಎಂದೇ ನಾಮಾಂಕಿತರಾಗಿದ್ದ, ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ-೨೦೨೪ರ ಪ್ರಶಸ್ತಿ ಪುರಸ್ಕೃತರಾದ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ಅನ್ನದಾನೇಶ್ವರ ಶ್ರೀ (೭೬) ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಲಿಂಗೈಕ್ಯರಾದರು.
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿತ್ರಿವಿಧ ದಾಸೋಹಿ, ರಾಜ್ಯಾದ್ಯಂತ ಸುಕ್ಷೇತ್ರಗಳು, ಆಂಧ್ರಪ್ರದೇಶದ ಶ್ರೀಶೈಲಂ, ಮಹಾರಾಷ್ಟ್ರದ ಪಂಡರಪೂರ ಸೇರಿದಂತೆ ವರ್ಷದಲ್ಲಿ ವಿವಿಧೆಡೆ ೧೮೭ ಅನ್ನದಾಸೋಹ ನಡೆಸುತ್ತಿದ್ದ, ಅನ್ನದಾನೇಶ್ವರ ಎಂದೇ ನಾಮಾಂಕಿತರಾಗಿದ್ದ, ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ-೨೦೨೪ರ ಪ್ರಶಸ್ತಿ ಪುರಸ್ಕೃತರಾದ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಮಠದ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ದಾನೇಶ್ವರಶ್ರೀ (೭೬) ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಲಿಂಗೈಕ್ಯರಾದರು.
ಹಲವು ದಿನಗಳಿಂದ (ಜಲೋದರ ರೋಗ) ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ದಾನೇಶ್ವರ ಶ್ರೀಗಳಿಗೆ ಹುಬ್ಬಳ್ಳಿ ಹಾಗೂ ಬೆಳಗಾವಿಯ ಖಾಸಗಿ ಆಸ್ಪತ್ರೆಗಳಲ್ಲಿ ೧೫ ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಸಮಸ್ಯೆ ಉಲ್ಬಣಗೊಂಡಾಗ ಬೆಳಗಾವಿ ಕೆಎಲ್‌ಇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ನಾಲ್ಕು ದಿನಗಳಿಂದ ದಾಖಲಾಗಿದ್ದ ಶ್ರೀಗಳು, ಗುರುವಾರ ರಾತ್ರಿ 11.30ಕ್ಕೆ ವಿಧಿವಶರಾದರು. ಬೆಳಗಾವಿಯಿಂದ ಶ್ರೀಗಳ ಪಾರ್ಥಿವ ಶರೀರವನ್ನು ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮಕ್ಕೆ ಒಯ್ದು ಭಕ್ತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಶುಕ್ರವಾರ ರಾತ್ರಿ 10ಕ್ಕೆ ಬಂಡಿಗಣಿ ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಶನಿವಾರ ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ವಿಧಿವಿಧಾನ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ.ಶ್ರೀಗಳ ಅಂತ್ಯಕ್ರಿಯೆಗೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದಲ್ಲಿ ಬಾಗಲಕೋಟೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆ 4 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತಿಮ ದರ್ಶನಕ್ಕೆ ಲಕ್ಷಾಂತರ ಜನರು ಸೇರುವ ಸಾಧ್ಯತೆ ಇದ್ದು, ಒಂದೂವರೆ ಸಾವಿರದಷ್ಟು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಅಂಬ್ಯುಲೆನ್ಸ್ ಸೇವೆ:ಶ್ರೀಗಳ ಅಗಲಿಕೆಗೆ ದುಃಖ ತಡೆಯಲಾಗದೆ ನೆರೆದಿರುವ ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದು, ನಿತ್ರಾಣಗೊಂಡು ಕೆಲ ಭಕ್ತರು ಕುಸಿದು ಬೀಳುತ್ತಿರುವುದರಿಂದ ಮಠದ ಆವರಣದಲ್ಲಿ ಆಂಬ್ಯುಲೆನ್ಸ್ ಮೂಲಕ ಕೆಲವರನ್ನು ಆಸ್ಪತ್ರೆಗೆ ರವಾನಿಸಲಾಯಿತು.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ೧೯.೦೯.೧೯೫೦ ರಲ್ಲಿ ಜನಿಸಿದ ದಾನೇಶ್ವರ ಶ್ರೀ ಬಂಡಿಗಣಿ ಗ್ರಾಮದಲ್ಲಿ ಬಸವ-ಗೋಪಾಲಮಠ ಸ್ಥಾಪಿಸಿ, ಬಬಲಾದಿ ಸದಾಶಿವ ಅಜ್ಜನ ಪರಂಪರೆಯಲ್ಲಿ ಶ್ರೀಮಠ ಮುನ್ನಡೆಸುತ್ತಿದ್ದರು. ಬಸವ ತತ್ವ ಪರಂಪರೆ ಮೂಲಕ ಅನ್ನ, ಅಕ್ಷರ ಹಾಗೂ ಜ್ಞಾನದ ಮೂಲಕ ಅನ್ನದಾಸೋಹಕ್ಕೆ ಆದ್ಯತೆ ನೀಡಿದ ಶ್ರೇಯಸ್ಸು ದಾನೇಶ್ವರ ಶ್ರೀಗಳದ್ದಾಗಿತ್ತು. ಪ್ರತಿ ವರ್ಷ ನೂರಾರು ಸಾಮೂಹಿಕ ವಿವಾಹಗಳೊಂದಿಗೆ, ಜೋಗಮ್ಮಗಳಿಗೆ ಅಡಗಲಿ ತುಂಬುವುದು, ಬಾಣಂತಿಯವರಿಗೆ ಸೀಮಂತ, ಪಾರಾಯಣ ಮತ್ತು ವಸ್ತ್ರದಾನ ಶಿಬಿರದಂತಹ ಕಾರ್ಯಕ್ರಮಗಳ ಮೂಲಕ ಕಟ್ಟಕಡೆಯ ಕುಟುಂಬಕ್ಕೂ ಸಹಕಾರಿಯಾಗಿದ್ದರು.
ಶ್ರೀಗಳನ್ನು ಹೊಗಳಿದ್ದ ಸಿಎಂ: ಅಕ್ಟೋಬರ್ ೧೩ರಂದು ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಸಮಾವೇಶ ನಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರು ಶ್ರೀಗಳ ವಯಸ್ಸು ಕೇಳಿ ಇದೀಗ ನಿಮಗೆ ೭೫ ಅಲ್ವಾ. ರಾಜ್ಯವಲ್ಲದೆ ಹೊರರಾಜ್ಯಗಳಲ್ಲೂ ಅನ್ನದಾನ ಮಾಡಿದ್ದೀರಿ ಎಂದು ಹಾಡಿ ಹೊಗಳಿ, ನೀವು ನೂರು ವರ್ಷಕ್ಕೂ ಅಧಿಕ ಕಾಲ ಬಾಳಿ ದಾಸೋಹರತ್ನರಾಗೇ ಇರಿ ಎಂದು ವೇದಿಕೆಯಲ್ಲಿ ಹಾರೈಸಿದ್ದರು.ಸಂತಾಪ : ಶ್ರೀಗಳ ನಿಧನಕ್ಕೆ ಆಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಮಾಜಿ ಸಚಿವ ಎಸ್.ಆರ್. ಪಾಟೀಲ, ಮಾಜಿ ಸಚಿವೆ ಡಾ.ಉಮಾಶ್ರೀ, ಶಾಸಕರಾದ ಜಗದೀಶ ಗುಡಗುಂಟಿ, ಸಿದ್ದು ಸವದಿ, ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.