ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ತ್ರಿಭಾಷಾ ಸೂತ್ರವನ್ನು ಪ್ರತಿಯೊಬ್ಬ ಕನ್ನಡಿಗನೂ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ ಹೇಳಿದರು.ಪಟ್ಟಣದ ಆರ್.ಡಿ.ಎಸ್ ಕಾಲೇಜು ಆವರಣದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೊದಲಿಗೆ ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜಿಲ್ಲಾ ಸಮ್ಮೇಳನ ಸಮ್ಮೇಳನಾಧ್ಯಕ್ಷನಾಗಿರುವುದು ನನ್ನ ಭಾಗ್ಯ. ವಿದ್ಯಾರ್ಥಿ ಜೀವನದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಶಿಕ್ಷಕನಾಗಿ ಗುರುವಿನ ಸ್ಥಾನಕ್ಕೆ ಚ್ಯುತಿ ಬಾರದಂತೆ 1998ರಲ್ಲಿ ಕಸಾಪ ತಾಲೂಕಾಧ್ಯಕ್ಷರಾಗಿ ₹150 ಅನುದಾನದಲ್ಲಿ ಸಮ್ಮೇಳನ ಮಾಡುವುದರ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ಹೇಳಿದರು.
ಗೋಕಾಕ-ಮೂಡಲಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಸ್ತಾಪಿಸಿದ್ದಾರೆ. ಜಿಲ್ಲೆಯಲ್ಲಿ ಆಗುವ ಆ ಕಾರ್ಯಕ್ರಮವನ್ನು ಅವಳಿ ತಾಲೂಕಿನಲ್ಲಿ ನಡೆಯಲಿ ಎಂದು ಆಶಿಸಿದರು.ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಪಟ್ಟಣ, ತಾಲೂಕಿನ ಪೂಜ್ಯರು ಹಾಗೂ ಕಸಾಪ ಸಹಕಾರದೊಂದಿಗೆ ಸಮ್ಮೇಳನವನ್ನು ಯಶಸ್ವಿಗೊಳಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಕನ್ನಡಾಭಿಮಾನಿಗಳು ಮುತವರ್ಜಿ ವಹಿಸಿದ್ದಾರೆ ಎಂದು ಪ್ರಶಂಸಿಸಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ 8 ಜ್ಞಾನಪೀಠ ಪ್ರಶಸ್ತಿ ದೊರಕಿದ್ದು, ಅಲ್ಲದೆ, ಕನ್ನಡಕ್ಕೆ ಇರುವ ಕೀರ್ತಿ ಬೇರೆ ಭಾಷೆಗೆ ಇಲ್ಲ. ಈ ಭಾಗದ ಪಾರಿಜಾತ ಇಡೀ ಸಾಹಿತ್ಯ ಕ್ಷೇತ್ರಕ್ಕೆ ಒಂದು ಮುನ್ನಡಿ ಬರೆದಿದೆ. ವೀರ, ಧೀರರು, ಮಹಾಕವಿಗಳು ಹುಟ್ಟಿದ ಕನ್ನಡಾಂಬೆಯ ನಾಡು ಇದ್ದಾಗಿದ್ದು, ಕನ್ನಡ ನಾಡು ನುಡಿ ಉಳಿವಿಗಾಗಿ ಕಸಾಪ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.ಈ ವೇಳೆ ಮುನ್ಯಾಳ- ಬಾಗೋಜಿಕೊಪ್ಪದ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲ್ಕರ, ನಿವೃತ್ತ ಪ್ರಾಚಾರ್ಯ ಎಸ್.ಎಂ. ಕಮದಾಳ, ಬಿ.ವೈ. ಶಿವಾಪೂರ, ವಿ.ಎಸ್. ಹಂಚಿನಾಳ, ಆರ್.ಟಿ. ಲಂಕೆಪ್ಪನವರ, ಆರ್.ಎಸ್. ಅಳಗುಂಡಿ, ಎಸ್.ಐ. ಭಾಗೋಜಿ, ಭಾರತಿ ಮದಭಾವಿ ಹಾಗೂ ಅನೇಕ ಉಪಸ್ಥಿತರಿದ್ದರು.