ಸಾರಾಂಶ
ಉಡುಪಿ ಕಡಿಯಾಳಿಯಲ್ಲಿ ಭಾರತ್ ವಿಕಾಸ್ ಪರಿಷತ್ತು ಆಶ್ರಯದಲ್ಲಿ ನಡೆದ ಭಾರತೀಯ ನ್ಯಾಯಾಂಗ ವ್ಯವಸ್ಥೆ ಕುರಿತಾಗಿ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಸರ್ಕಾರದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಸಂವಿಧಾನದ ಆಶಯದಂತೆ ನಡೆಯಬೇಕೇ ಹೊರತು ಇದರಲ್ಲಿ ಯಾವುದು ಮೇಲೆ ಯಾವುದು ಕೆಳಗೆ ಅನ್ನುವ ಪ್ರಶ್ನೆ ಉದ್ಬವಿಸುವುದೇ ಇಲ್ಲ. ಪ್ರಜಾಪ್ರಭುತ್ವದ ಯಶಸ್ಸು ಈ ಮೂರು ಅಂಗಗಳ ಜವಾಬ್ದಾರಿಯುತ ಕಾರ್ಯಶೀಲತೆಯ ಮೇಲೆ ನಿಂತಿದೆ ಎಂದು ಎಂಜಿಎಂ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.ಅವರು ಉಡುಪಿ ಕಡಿಯಾಳಿಯಲ್ಲಿ ಭಾರತ್ ವಿಕಾಸ್ ಪರಿಷತ್ತು ಆಶ್ರಯದಲ್ಲಿ ನಡೆದ ಭಾರತೀಯ ನ್ಯಾಯಾಂಗ ವ್ಯವಸ್ಥೆ ಕುರಿತಾಗಿ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನದ ಉದ್ದೇಶ ಜನರ ಆಶೇೂತ್ತರಗಳಿಗೆ ಸ್ಪಂದಿಸುವ ತರದಲ್ಲಿ ಈ ಮೂರು ಸಂಸ್ಥೆಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದೇ ಆಗಿರುತ್ತದೆ. ಪರಸ್ಪರ ವಿರುದ್ಧ ಹೇಳಿಕೆಗಳನ್ನು ಜವಾಬ್ದಾರಿ ಸ್ಥಾನದಲ್ಲಿ ಕುಳಿತವರು ನೀಡಲೇಬಾರದು. ನ್ಯಾಯಾಂಗದ ಸ್ವಾಯತ್ತತೆಯನ್ನು ಕಾಪಾಡುವುದು ಶಾಸಕಾಂಗ ಮತ್ತು ಕಾರ್ಯಾಂಗದದ ಜವಾಬ್ದಾರಿಯೂ ಹೌದು. ಪ್ರಾಮಾಣಿಕತೆಯಿಂದ ನಿಷ್ಪಕ್ಷಪಾತ ನ್ಯಾಯ ಪ್ರದಾನಿಸುವುದು ನ್ಯಾಯಾಂಗದ ಪ್ರಮುಖ ಕರ್ತವ್ಯವೂ ಹೌದು ಎಂದರು.ಅಧ್ಯಕ್ಷತೆಯನ್ನು ಭಾರತ್ ವಿಕಾಸ್ ಪರಿಷತ್ತು ಅಧ್ಯಕ್ಷ ಕೃಷ್ಣದಾಸ್ ಸಿ.ಪಿ. ವಹಿಸಿದ್ದರು. ಕಾರ್ಯದರ್ಶಿ ಸುಬ್ರಾಯ ಶೆಣೈ ಸ್ವಾಗತಿಸಿದರು. ಪರಿಷತ್ತು ಹಿರಿಯ ಸದಸ್ಯ ಸಂಚಾಲಕ ವಸಂತ ಭಟ್ಟರು ಕಾರ್ಯಕ್ರಮ ಸಂಯೇೂಜಿಸಿದ್ದರು.