ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ ತ್ರಿಚಕ್ರ ವಾಹನ

| Published : Oct 07 2024, 01:35 AM IST

ಸಾರಾಂಶ

ಅಂಗವಿಕಲರ ಕೈ ಸೇರಿಬೇಕಾಗಿದ್ದ ತ್ರಿಚಕ್ರ ವಾಹನಗಳು ನಿರಾಸಕ್ತಿಯಿಂದ ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ. ವಾಹನ ಬಂದರೂ ಸಹ ಅಂಗವಿಕಲರ ಕೈ ಸೇರುತ್ತಿಲ್ಲ.

ಅಂಗವಿಕಲರಿಗೆ ಸೇರಬೇಕಾಗಿದ್ದ ವಾಹನ ವಿತರಣೆಗೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರಾಸಕ್ತಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಅಂಗವಿಕಲರ ಕೈ ಸೇರಿಬೇಕಾಗಿದ್ದ ತ್ರಿಚಕ್ರ ವಾಹನಗಳು ನಿರಾಸಕ್ತಿಯಿಂದ ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ. ವಾಹನ ಬಂದರೂ ಸಹ ಅಂಗವಿಕಲರ ಕೈ ಸೇರುತ್ತಿಲ್ಲ.

ದೇವರು ಕೊಟ್ಟರೂ ಪೂಜಾರಿ ವರ ಕೊಡಲ್ಲ ಎನ್ನುವಂತೆ ಜಿಲ್ಲೆಯಲ್ಲಿ ಅಂಗವಿಕಲರಿಗೆ ನೀಡಬೇಕಾದ ತ್ರಿಚಕ್ರ ವಾಹನಗಳ ವಿತರಣೆ ಮಾಡಲು ನಿರಾಸಕ್ತಿ ವಹಿಸಲಾಗಿದೆ. ಶಾಸಕರ ಸಮಯಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ವಿಕಲಚೇತನ ಹಾಗೂ ಹಿರಿಯ ನಾಗರಿಕರ ಇಲಾಖೆಯಿಂದ ಈ ಸಾಲಿನಲ್ಲಿ ನೀಡಬೇಕಾಗಿರುವ ವಾಹನಗಳು ಸಿದ್ದವಾಗಿ ನಾಲ್ಕು ತಿಂಗಳಾಗಿದೆ. ನಾಲ್ಕು ತಿಂಗಳ ಹಿಂದೆ ವಾಹನಗಳ ಬಿಡಿ ಭಾಗಗಳನ್ನು ಜೋಡಣೆ ಮಾಡಿ ಕೊಪ್ಪಳದ ಸುರಭಿ ವೃದ್ದಾಶ್ರಮದಲ್ಲಿಡಲಾಗಿದೆ. ಮಳೆ, ಬಿಸಿಲು, ಗಾಳಿಯಿಂದಾಗಿ ಇಟ್ಟಲ್ಲಿಯೇ ತ್ರಿಚಕ್ರವಾಹನಗಳು ತುಕ್ಕು ಹಿಡಿಯುತ್ತಿವೆ. ಒಂದೊಂದೆ ಯಂತ್ರಗಳು ಹಾಳಾಗುತ್ತಿವೆ. ಅವುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲು ನಿರಾಸಕ್ತಿ ಎದ್ದು ಕಾಣುತ್ತಿದೆ. ಸಕಾಲಕ್ಕೆ ವಾಹನಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡದಿದ್ದರೆ ಯಂತ್ರಗಳು ತುಕ್ಕು ಹಿಡಿಯುತ್ತವೆ. ನೀಡಿದರೂ ಅವುಗಳು ಉಪಯೋಗವಾಗುವುದಿಲ್ಲ. ಫಲಾನುಭವಿಗಳು ಪೂರ್ಣ ಪ್ರಮಾಣದ ಮಾಹಿತಿ ನೀಡಿರುತ್ತಾರೆ. ಅವರಿಗೆ ವಾಹನಗಳನ್ನು ನೀಡಬೇಕೆಂದು ವಿಕಲಚೇತನರು ಆಗ್ರಹಿಸಿದ್ದಾರೆ.

ಜಿಲ್ಲೆಯ ಆಯಾ ಕ್ಷೇತ್ರದ ಶಾಸಕರು ವಾಹನಗಳನ್ನು ಅಂಗವಿಕಲರಿಗೆ ವಿತರಿಸಬೇಕು. ಅವರು ದಿನಾಂಕ ನೀಡಿದರೆ ಅಂದು ವಾಹನ ವಿತರಣೆ ಜರುಗುತ್ತದೆ. ಜಿಲ್ಲೆಯ ಶಾಸಕರು ದಿನಾಂಕ ನೀಡದ ಕಾರಣ ವಾಹನ ವಿತರಣೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದ್ದು, ವಾಹನ ತುಕ್ಕು ಹಿಡಿದು ಮತ್ತೆ ರಿಪೇರಿಗೆ ಬರುವ ಮುನ್ನವೇ ವಿತರಣೆ ಆದರೆ ಸರ್ಕಾರದ ಯೋಜನೆ ಫಲಪ್ರದವಾಗುತ್ತದೆ. ಇಲ್ಲದಿದ್ದರೆ ಯೋಜನೆಯ ಲಾಭ ಸರಿಯಾಗಿ ಮುಟ್ಟುವುದಿಲ್ಲ.