ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ನಮ್ಮ ಧರ್ಮ ಗುಣವನ್ನು ಆಧರಿಸಿಸುವ ಕಾರ್ಯ ಮಾಡುತ್ತದೆ. ಆ ಗುಣಕ್ಕೆ ಸನಾತನ ಧರ್ಮವೆಂದು ಕರೆಯಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಹೇಳಿದರು.ಪಟ್ಟಣದ ಹಿಂದೂ ಮಹಾ ಗಣಪತಿ ಮಹಾ ಮಂಡಳಿ ಏರ್ಪಡಿಸಿದ್ದ ಭವ್ಯ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಹಿಂದೂ ಸಂಸ್ಕೃತಿಯನ್ನು ನಾಶ ಮಾಡುವ ಹುನ್ನಾರ ನಡೆದಿವೆ. ಹಿಂದೂ ಶಬ್ದ ಕೇಳಿದರೆ ಕೆಲವರಿಗೆ ವಾಂತಿಯಾಗುತ್ತದೆ. ನಮ್ಮ ಸಂಸ್ಕೃತಿ ಬೆಳೆಸಲು ತಾಳಿಕೋಟೆಯಲ್ಲಿ ೧೨ ವರ್ಷದಿಂದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ೧೮೯೦ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶೋತ್ಸವವನ್ನು ಎಲ್ಲರೂ ಆಚರಿಸುವ ಮೂಲಕ ಎಲ್ಲರನ್ನು ಒಂದುಗೂಡಿಸುವ ಕಾರ್ಯಕ್ಕೆ ಬಾಲಗಂಗಾದರ ತಿಲಕರು ಮುಂದಾಗಿದ್ದರು. ಧರ್ಮ ನನ್ನದು ನಾನು ಕೈಕೊಂಡ ಸತ್ಯವನ್ನು ನಿಮ್ಮಲ್ಲಿ ಕಂಡುಕೊಳ್ಳಿ ಎಂಬ ವಿಚಾರ ಅವರದ್ದಾಗಿತ್ತು. ಮಹಾತ್ಮ ಗಾಂಧಿ ಹಿಂದೂ ಮುಸ್ಲಿಂರ ಏಕತೆಗಾಗಿ ಶ್ರಮಿಸಿದರು ಎಂದು ತಿಳಿಸಿದರು.
ತಿಲಕರು ಹಿಂದೂಗಳಿಗೆ ಸಂಘಟನೆಯ ಕೊರತೆ ಇದೆ ಎಂಬುದನ್ನು ಗಮನಿಸಿ ಸಾರ್ವಜನಿಕ ಗಣೇಶೋತ್ಸವದಲ್ಲಿ ನಾವೆಲ್ಲರೂ ಒಂದು, ನಾವೇಲ್ಲರೂ ಹಿಂದೂ ಎಂಬ ಭಾವನೆ ಮುಡಿಸಲು ಈ ಹಬ್ಬ ಆಚರಣೆಗೆ ತಂದರು. ಹಿಂದೂಗಳು ಒಗ್ಗಟ್ಟಾಗದಿದ್ದರೆ ದೇಶ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಜಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ಜಾತಿಗಳು ಮುಂದೆ ಕ್ರಿಶ್ಚಿಯನ್ ಎಂಬುದನ್ನು ನಮೂದಿಸಲಾಗಿದೆ ಎಂದು ತಿಳಿ ಹೇಳಿದ ಅವರು ಯಾವ ಜಾತಿಗಳು ಅವುಗಳ ಹೆಸರು ಮೊದಲು ಹೇಗೆ ಬಂದಿತೆಂದು ವಿವರಿಸಿದರು. ಬಸವಣ್ಣನವರು ಹೇಳಿದಂತೆ ತತ್ವ ನೀತಿಗಳ ಕುರಿತು ವಿಚಾರ ಮಾಡಬೇಕಿದೆ. ಕನಕದಾಸರು, ಸರ್ವಜ್ಞರು, ಜಾತಿ ಜಾತಿ ಎಂಬುದು ಸರಿ ಅಲ್ಲವೆಂದು ತಿಳಿಸಿದ್ದಾರೆ. ಜಾತಿಯತೆ ಎನ್ನುವದನ್ನು ಕಿತ್ತೂ ಹಾಕಬೇಕು ಇಲ್ಲದಿದ್ದರೆ ಭಾರತವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಹಿಂದೂ ಸಮಾಜ ಸಂಘಟಿಸುವ ಕಾರ್ಯವಾಗಬೇಕಿದೆ. ಮೈಮರೆತರೆ ವಿನಾಶಕ್ಕೆ ಕಾರಣರಾಗುತ್ತೇವೆ. ಸರ್ಕಾರ ಡಿಜೆಗೆ ನಿಷೇಧ ಹೇರಿದೆ, ಉತ್ಸವದಲ್ಲಿ ಪೆಟ್ರೋಲ್ ಬಾಂಬ್ ಎಸೆಯಲಾಗುತ್ತದೆ. ಇವೆಲ್ಲ ಅರ್ಥ ಮಾಡಿಕೊಂಡು ಜಾತಿಯತೆ ಇಲ್ಲದಂತೆ ಮಾಡಿಕೊಳ್ಳಿ. ನಾವೆಲ್ಲ ಹಿಂದು, ಜೈಭೀಮ, ಜೈಶ್ರೀರಾಮ, ಹರಹರ ಮಹಾದೇವ ಎಂಬ ಒಗ್ಗೂಡಿದ ಘರ್ಜನೆಯೊಂದಿಗೆ ಸಿ.ಟಿ.ರವಿ ಅವರು ಹೇಳಿದರು.
ಕೆಸರಟ್ಟಿಯ ಸೋಮಲಿಂಗ ಮಹಾಸ್ವಾಮಿಗಳು ಪ್ರಾಸ್ಥಾವಿಕ ಮಾತನಾಡಿದರು. ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಗೌರವಾಧ್ಯಕ್ಷ ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ.ವ್ಹಿ.ಎಸ್.ಕಾರ್ಚಿ, ಉಪಾಧ್ಯಕ್ಷ ಶಿವಾಜಿ ಸೂರ್ಯವಂಶಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಬಿಜೆಪಿ ಮುಖಂಡ ಉಮೇಶ ಕಾರ್ಜೋಳ, ಶ್ರೀಗುರು ಕಾಮರ, ನೀಲಮ್ಮ ಪಾಟೀಲ, ಹಾಗೂ ಗಣ್ಯರು ಇದ್ದರು.ಗಣೇಶ ಮಹಾಮೂರ್ತಿಗೆ ಪುಷ್ಪಾರ್ಚನೆಯೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ದಿನಕರ ಜೋಶಿ ವಂದೆ ಮಾತರಂ ಗೀತೆ ನಡೆಸಿಕೊಟ್ಟರು.
ವೇ.ಸಂತೋಷಬಟ್ ಜೋಶಿ ಸ್ವಾಗತಿಸಿದರು. ತೇಜಸ್ವೀನಿ ಡಿಸಲೆ ನಿರೂಪಿಸಿದರು. ರಾಘವೇಂದ್ರ ವಿಜಾಪೂರ ವಂದಿಸಿದರು.