ಮಾಗಡಿ: ರೈತರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ, ಒಬ್ಬ ರೈತನ ಜಮೀನಿನಲ್ಲಿ ವರ್ಷಕ್ಕೆ 15ರಿಂದ 20 ಲಕ್ಷ ದುಡಿಯುತ್ತಿದ್ದಾನೆ. ಬೆಂಗಳೂರಿನ ಐಟಿಬಿಟಿಯಲ್ಲಿ ಕೆಲಸ ಮಾಡುವವನಿಗೂ ಕೂಡ ಅಷ್ಟು ಸಂಬಳ ಬರೋದಿಲ್ಲ ಎಂದು ಬೆಟ್ಟಹಳ್ಳಿಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಮಾಗಡಿ: ರೈತರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ, ಒಬ್ಬ ರೈತನ ಜಮೀನಿನಲ್ಲಿ ವರ್ಷಕ್ಕೆ 15ರಿಂದ 20 ಲಕ್ಷ ದುಡಿಯುತ್ತಿದ್ದಾನೆ. ಬೆಂಗಳೂರಿನ ಐಟಿಬಿಟಿಯಲ್ಲಿ ಕೆಲಸ ಮಾಡುವವನಿಗೂ ಕೂಡ ಅಷ್ಟು ಸಂಬಳ ಬರೋದಿಲ್ಲ ಎಂದು ಬೆಟ್ಟಹಳ್ಳಿಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.ಪಟ್ಟಣದ ಬಿಜಿಎಸ್ ಕಾಲೇಜು ಆವರಣದಲ್ಲಿ ರಾಜ್ಯ ರೈತ ಸಂಘ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ರೈತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಜಮೀನು ಮಾರಾಟ ಮಾಡಬಾರದು. ಮುಂದೊಂದು ದಿನ ಕೃಷಿಗೆ ದೊಡ್ಡ ಸ್ಥಾನ ಸಿಗಲಿದೆ. ಕಂಪ್ಯೂಟರ್‌ನಿಂದ ಭತ್ತ ಬೆಳೆಯಲು ಸಾಧ್ಯವಿಲ್ಲ. ಭೂತಾಯಿಯನ್ನು ನಂಬಿದ ರೈತ ನೆಮ್ಮದಿಯಾಗಿ ಬದುಕುತ್ತಾನೆ. ರೈತರಿಗೆ ಗೌರವ ಸಿಗುವ ಕಾಲ ದೂರವಿಲ್ಲ ಎಂದು ತಿಳಿಸಿದರು.

ವಿಶ್ವ ಒಕ್ಕಲಿಗರ ಮಠಾಧ್ಯಕ್ಷರಾದ ನಿಶ್ಚಲನಂದ ಸ್ವಾಮೀಜಿ ಮಾತನಾಡಿ,1960ರಲ್ಲಿ ಭಾರತದಲ್ಲಿ ತೀವ್ರ ಬರಗಾಲ ಎದುರಾದಾಗ ಅಮೆರಿಕದಿಂದ ಗೋಧಿ ಆಮದು ಮಾಡಿಸಿಕೊಂಡಿದ್ದೆವು. ಈಗ ನಾಲ್ಕು ವರ್ಷಗಳಿಗಾಗುವಷ್ಟು ಆಹಾರ ದಾಸ್ತಾನು ಮಾಡಿಕೊಂಡಿದ್ದೇವೆ. ಇದು ರಾಜಕಾರಣಿಗಳ ಇಚ್ಛಾಶಕ್ತಿಯಿಂದ ಅಲ್ಲ, ರೈತರ ಬೆಳೆಯುವ ಬೆಳೆಯಿಂದ ಭಾರತ ಸಮೃದ್ಧಿಯಾಗಿದೆ. 1952 ರಲ್ಲಿ ಮಹಾತ್ಮ ಗಾಂಧೀಜಿ ಸ್ಮರಣಾರ್ಥ ಸಮೂಹ ಅಭಿವೃದ್ಧಿ ಯೋಜನೆಯನ್ನು ಜಾರಿ ಮಾಡಲಾಯಿತು. ಈಗ ರೈತರು ಆಧುನಿಕ ಪದ್ಧತಿಯಿಂದ ಇಡೀ ದೇಶಕ್ಕೆ ಆಹಾರ ಒದಗಿಸುತ್ತಿದ್ದಾರೆ. ಅದಕ್ಕಾಗಿಯೇ ನಾವು ರೈತರನ್ನು ದೇವರೆನ್ನಬೇಕು. ಕುವೆಂಪು ನೇಗಿಲಯೋಗಿ ಎಂದು ಕರೆದಿದ್ದಾರೆ. ಪ್ರೊ.ನಂಜುಂಡಸ್ವಾಮಿ ಪುಟ್ಟಣ್ಣಯ್ಯನವರು ರೈತರ ಪರ ಹೋರಾಟ ಮಾಡಿ ಈಗ ಅವರು ರೈತರ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರನ್ನು ನೆನಪಿಸಿಕೊಳ್ಳಬೇಕು ಕೃಷಿಯೇ ಭಾರತದ ಬೆನ್ನೆಲುಬು ಎಂದರು.

ಆದಿಚುಂಚನಗಿರಿ ವಿಜಯನಗರ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಸರ್ಕಾರ ರೈತರ ಪರ ನಿಲ್ಲಬೇಕು. ರೈತನಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರಸ್ತೆಗೆ ತಾನು ಬೆಳೆದ ಬೆಳೆಯನ್ನು ಚೆಲುವ ಪರಿಸ್ಥಿತಿ ಬಂದಿದೆ. ಇಂತಹ ಸಮಯದಲ್ಲಿ ಶಾಸಕರು, ಸಚಿವರು ಸರ್ಕಾರದ ಪರ ನಿಂತು ರೈತರಿಗೆ ಬೆಂಬಲ ಬೆಲೆ ಕೊಡಿಸಬೇಕು ಎಂದರು.

ಜಡೆದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ವ್ಯಾಸ ಸಂಶೋಧಕ ಡಾ. ಮುನಿರಾಜಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ರೈತರನ್ನು ಕುರಿತು ಮಾತನಾಡಿದರು.

ರೈತ ದಿನಾಚರಣೆಯಲ್ಲಿ ತಹಸೀಲ್ದಾರ್ ಶರತ್ ಕುಮಾರ್, ಪ್ರಗತಿಪರ ರೈತರಾದ ಚಿಕ್ಕಣ್ಣ, ಶಿವಲಿಂಗಯ್ಯ, ಅಂಜಿನಪ್ಪ, ಶಿವಲಿಂಗಯ್ಯ, ಕೆಂಪೇಗೌಡ, ರಾಮಣ್ಣ, ಶೇಖರ್, ನಂಜೇಗೌಡ, ನಾರಾಯಣಪ್ಪ, ಭೈರಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್, ಎಂಆರ್‌ಆರ್‌ ಆಸ್ಪತ್ರೆ ಎಂಡಿ ಡಾ.ಚೇತನ್, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಭಾಷ್, ಗ್ರಾಪಂ ಮಾಜಿ ಸದಸ್ಯ ಧನಂಜಯ, ರೈತ ಸಂಘದ ಅಧ್ಯಕ್ಷ ಗೋವಿಂದರಾಜು, ಬಿಜಿಎಸ್ ಕಾಲೇಜು ಪ್ರಾಂಶುಪಾಲರಾದ ಉಮೇಶ್, ಯುವ ರೈತವಸಂಘ ಜಿಲ್ಲಾಧ್ಯಕ್ಷ ರವಿಕುಮಾರ್, ಯುವ ತಾಲೂಕು ಅಧ್ಯಕ್ಷ ಮುನಿರಾಜು, ಗೌರವಧ್ಯಕ್ಷ ಚನ್ನರಾಯಪ್ಪ, ಶಿವರುದ್ರಯ್ಯ ಇತರರಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿಯ ಬಿಜಿಎಸ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ 11ನೇ ವರ್ಷದ ರೈತ ದಿನಾಚರಣೆ ಹಾಗೂ ರೈತರಿಗೆ ಸನ್ಮಾನ ಸಮಾರಂಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸ್ವಾಮೀಜಿಗಳು ಸನ್ಮಾನಿಸಿದರು.