ಕನ್ನಡಪ್ರಭ ವಾರ್ತೆ ಸವದತ್ತಿ

ಪಟ್ಟಣದ ಗ್ರಾಮದೇವಿ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಸಾಗುತ್ತಿದ್ದು, ಅದಕ್ಕೆ ಪಟ್ಟಣದ ಗುರು ಹಿರಿಯರಲ್ಲಿರುವ ಒಗ್ಗಟ್ಟೆ ಸಾಕ್ಷಿಯಾಗಿದೆ ಎಂದು ನಯಾನಗರದ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಗ್ರಾಮದೇವಿಯ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ನಡೆಯುತ್ತಿರುವ ಧಾರ್ಮಿಕ ಸಭೆ ಮತ್ತು ಸಾರ್ವಜನಿಕ ಸಭೆಯ ೮ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಗತ್ತಿನ ೧೯೨ ದೇಶಗಳಲ್ಲಿ ಭಾರತದ ಸಂಸ್ಕೃತಿಯು ಮೇಲುಗೈ ಸಾಧಿಸುತ್ತಿದ್ದು, ನಮ್ಮ ಸಂಸ್ಕೃತಿಯನ್ನು ನಾವು ಅಳವಡಿಸಿಕೊಂಡು ಮುಂದೆ ಸಾಗಬೇಕಿದೆ. ಮಾನವ ಜನ್ಮಕ್ಕೆ ಸುಖ ನೆಮ್ಮದಿ ಬೇಕಿದ್ದರೆ ನಾವೆಲ್ಲರೂ ಧರ್ಮದ ತಳಹದಿಯಲ್ಲಿ ಮುನ್ನಡೆಯಬೇಕೆಂದರು.ಶೃತಿ ವಿಶ್ವಾಸ ವೈದ್ಯ ಮಾತನಾಡಿ, ಪಟ್ಟಣದ ಗ್ರಾಮದೇವಿ ಜಾತ್ರೆ ಕೇವಲ ಜಾತ್ರೆಯಾಗಿರದೆ ಪ್ರತಿಯೊಬ್ಬರಲ್ಲಿ ಸಾಮರಸ್ಯ ಭಾವನೆ ಮೂಡಿಸುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ನಮ್ಮೂರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆದು ಬಂದಿದ್ದು, ಮುಂದಿನ ಪೀಳಿಗೆಗೆ ಈ ಜಾತ್ರೆ ಮಾದರಿಯಾಗಲಿದೆ ಎಂದು ಹೇಳಿದರು.ರತ್ನ ಆನಂದ ಮಾಮನಿ ಮಾತನಾಡಿ, ಗ್ರಾಮ ದೇವಿಯ ಜಾತ್ರೆಯನ್ನು ನೆರವೇರಿಸುವುದು ಅಷ್ಟು ಸುಲಭವಲ್ಲ. ಪಟ್ಟಣದ ಪ್ರತಿಯೊಬ್ಬರು ಸಂಪೂರ್ಣ ಸಹಕಾರದಿಂದ ಶ್ರಮವಹಿಸಿ ದುಡಿದಿರುವುದರಿಂದಲೇ ಈ ಜಾತ್ರೆ ಯಶಸ್ವಿಯತ್ತ ಸಾಗಿದೆ. ಈ ಜಾತ್ರೆಯಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದ್ದು, ಮಹಿಳೆಯರಿಗೂ ಒಂದು ವೇದಿಕೆ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸುವರ್ಣತಾಯಿ ಮಾತನಾಡಿ, ಮಾನವ ಜನ್ಮ ಅರಿವಿನ ಜನ್ಮವಾಗಿದ್ದು, ಇದನ್ನು ಅನರ್ಥ ಮಾಡಿಕೊಳ್ಳದೆ ಸಾರ್ಥಕ ಬದುಕನ್ನು ಬದುಕಬೇಕು ಎಂದರು.ಹೂಲಿಯ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿರಕೋಳದ ಗುರುಸಿದ್ದೇಶ್ವರ ಸ್ವಾಮೀಜಿ, ಉಪ್ಪಿನ ಬೆಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ, ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಅಲ್ಲದೇ, ಉಗರಗೋಳದ ೯ನೇ ತರಗತಿ ವಿದ್ಯಾರ್ಥಿನಿ ಸರಸ್ವತಿ ಗೌಡಪ್ಪ ಪಡಸುಣಗಿ ವೇದಿಕೆಯ ಮೇಲೆ ಒಂದು ಕ್ವಿಂಟಲ್ ಜೋಳದ ಚೀಲ ಎತ್ತಿಕೊಂಡು ದೀಡ ನಮಸ್ಕಾರದ ಪ್ರದರ್ಶನಗೈದು ಎಲ್ಲರಿಂದ ಮೆಚ್ಚುಗೆಗೆ ಪಾತ್ರಳಾದಳು. ಈ ವಿದ್ಯಾರ್ಥಿನಿಯನ್ನು ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಅಪ್ಜಲ್ ಬಾಗೋಜಿಕೊಪ್ಪ, ನ್ಯಾಯಾಧೀಶ ಅಲ್ತಾಪ ಖನಗಾಂವಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಸಚಿವೆ ಜಯಶ್ರೀ ಶಿಂತ್ರಿ, ಪುರಸಭೆ ಮಾಜಿ ಅಧ್ಯಕ್ಷೆ ಚಿನ್ನಮ್ಮ ಹುಚ್ಚಣ್ಣವರ, ಪಿಎಸ್‌ಐ ಭಾರತಿ ರಾಯನಗೌಡರ, ಸುನಿತಾ ಗೊರವನಕೊಳ್ಳ, ಯುನಸ್ ಗಾಡದ, ಸತೀಶ ಹಂಪಣ್ಣವರ, ಮಾರುತಿ ಹಿರೇಕೆಂಚಮ್ಮನವರ, ಯಲ್ಲಪ್ಪ ಜಂಬೂದೀಪ, ಮಡಿವಾಳಪ್ಪ ಪೆಂಟೇದ, ಶ್ರೀಕಾಂತ ಅಂಗಡಿ, ಬಸವರಾಜ ಮಜ್ಜಗಿ, ರಿಯಾಜ ಗೊರವನಕೊಳ್ಳ, ಪ್ರವೀಣ.ಎಸ್ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಸಮ್ಮಾ ಬ್ಯಾಹಟ್ಟಿ ಸ್ವಾಗತಿಸಿದರು. ಸೀಮಾ ವನಕಿ ನಿರೂಪಿಸಿದರು. ಶಿವಾನಂದ ತಾರಿಹಾಳ ವಂದಿಸಿದರು.