ಕೋರ್ಟ್‌ ಆವರಣಕ್ಕೆ ಬಂದ ಸಾರಿಗೆ ಬಸ್‌

| Published : Sep 12 2024, 01:46 AM IST

ಸಾರಾಂಶ

ಗಾದಿಗನೂರು ಗ್ರಾಮದಲ್ಲಿ 2002ರಲ್ಲಿ ಹೊಸಪೇಟೆ ಡಿಪೋಗೆ ಸೇರಿದ ಬಸ್‌ ಇಬ್ಬರು ಯುವಕರ ಮೇಲೆ ಹರಿದಿತ್ತು.

ಹೊಸಪೇಟೆ; ಅಪಘಾತದಲ್ಲಿ ಮರಣ ಹೊಂದಿದ ಯುವಕನ ಕುಟುಂಬಕ್ಕೆ ನ್ಯಾಯಾಲಯ ಆದೇಶ ನೀಡಿದರೂ ಪರಿಹಾರ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಸ್ಥಳೀಯ ಡಿಪೋಗೆ ಸೇರಿದ ಬಸ್‌ ಅನ್ನೇ ಕೋರ್ಟ್‌ ಅಮಿನ್‌ ನೇತೃತ್ವದಲ್ಲಿ ಬುಧವಾರ ಜಫ್ತಿ ಮಾಡಲಾಗಿದೆ.

ನಗರದಿಂದ ವಿಜಯಪುರಕ್ಕೆ ಹೊರಟಿದ್ದ ಹೊಸಪೇಟೆ ಡಿಪೋಗೆ ಸೇರಿದ (ಕೆಎ-35 ಎಫ್‌- 334) ಬಸ್‌ ಅನ್ನು ಜಫ್ತಿ ಮಾಡಲಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬಳಿಕ ನಿಲ್ದಾಣದಿಂದ ಕೋರ್ಟ್‌ ಆವರಣದ ವರೆಗೆ ಬಸ್‌ ಚಾಲಕ ಚಾಲನೆ ಮಾಡಿಕೊಂಡು ಬಂದರು. ಬಸ್‌ ನ್ಯಾಯಾಲಯದ ಆವರಣದೊಳಗೆ ಬರುವುದನ್ನು ಕಂಡು ವಕೀಲರು ಹಾಗೂ ಕಕ್ಷಿದಾರರು ಕುತೂಹಲಭರಿತರಾಗಿ ನೋಡಿದರು.

ಪ್ರಕರಣದ ಹಿನ್ನೆಲೆ:

ತಾಲೂಕಿನ ಗಾದಿಗನೂರು ಗ್ರಾಮದಲ್ಲಿ 2002ರಲ್ಲಿ ಹೊಸಪೇಟೆ ಡಿಪೋಗೆ ಸೇರಿದ ಬಸ್‌ ಇಬ್ಬರು ಯುವಕರ ಮೇಲೆ ಹರಿದಿತ್ತು. ಈ ಘಟನೆಯಲ್ಲಿ ವೆಂಕಟೇಶ್ (22) ಎಂಬ ಯುವಕ ಕೂಡ ಪ್ರಾಣ ಕಳೆದುಕೊಂಡಿದ್ದರು. ಈ ಯುವಕನ ತಾಯಿ ರೇಣುಕಮ್ಮ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯ ಫೆ. 27ರಂದು ₹24 ಲಕ್ಷ ಪರಿಹಾರ ಮೊತ್ತ ಪಾವತಿಸಲು ಸೂಚಿಸಿತ್ತು.

ಈ ಆದೇಶ ಪಾಲನೆಯಲ್ಲಿ ಹೊಸಪೇಟೆ ಬಸ್‌ ಡಿಪೋ ವಿಫಲವಾಗಿದೆ ಎಂದು ಸಂತ್ರಸ್ತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಡಿಪೋಗೆ ಸೇರಿದ ಯಾವುದಾದರೂ ಬಸ್‌ ಜಫ್ತಿ ಮಾಡಲು ನ್ಯಾಯಾಲಯ ಸೂಚಿಸಿತ್ತು. ಕೋರ್ಟ್‌ ಅಮಿನ್‌ ಹಾಗೂ ಯುವಕನ ಸಹೋದರ ಮಲ್ಲಿಕಾರ್ಜುನ ಮತ್ತು ವಕೀಲ ಎಚ್‌. ಗೋರಂಟ್ಲ ಅವರು ಬಸ್‌ ಅನ್ನು ಜಫ್ತಿ ಮಾಡಿ ನ್ಯಾಯಾಲಯಕ್ಕೆ ತಂದಿದ್ದಾರೆ. ಈ ಕುರಿತ ಪ್ರಕರಣ ಸೆ. 13ರಂದು ನಿಗದಿಯಾಗಿದೆ. ಈಗ ಬಸ್‌ ಅನ್ನು ಕೋರ್ಟ್‌ ಆವರಣದಿಂದ ಬಿಡಿಸಿಕೊಳ್ಳಲು ಡಿಪೋ ಅಧಿಕಾರಿಗಳು ಹಣ ಜೋಡಣೆಗೆ ತಡಬಡಾಯಿಸುತ್ತಿದ್ದಾರೆ.

ಹೊಸಪೇಟೆಯ ಕೋರ್ಟ್‌ ಆವರಣದಲ್ಲಿರುವ ಜಫ್ತಿ ಮಾಡಲಾಗಿರುವ ಸಾರಿಗೆ ಬಸ್‌.