ಕನ್ನಡಪ್ರಭ ವಾರ್ತೆ ಶಿರಸಿ

ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜವು ಸತತ ಹೋರಾಟದ ಫಲವಾಗಿದೆ ಎಂದು ಎಸಿ ಚಂದ್ರಶೇಖರ್ ಆರ್.ಜಿ. ಹೇಳಿದರು.

ನಗರದ ಶ್ರೀ ಮಾರಿಕಾಂಬಾ ಕ್ರಿಡಾಂಗಣದಲ್ಲಿ ಶನಿವಾರ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು

ಈ ಸುದೀರ್ಘ ಹೋರಾಟದ ಪಯಣದಲ್ಲಿ ಮಹಾತ್ಮಾ ಗಾಂಧಿ, ನೇತಾಜಿ ಸುಭಾಷಚಂದ್ರ ಬೋಸ್, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಂತಹ ಸಹಸ್ರಾರು ಉತ್ಸಾಹಿಗಳ ಕ್ರಾಂತಿಕಾರಿಗಳ ಧೈರ್ಯದಿಂದ, ರಾಣಿಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ, ಸಂಗೊಳ್ಳಿ ರಾಯಣ್ಣ ಮೊದಲಾದ ಅನೇಕ ವೀರರ ಅಚಲ ಶೌರ್ಯದ ಪ್ರತೀಕವಾಗಿ ನಮಗೆ ಸ್ವಾತಂತ್ರ ಬಂದಿದೆ ಎಂದರು.

ರೈತರ ಬದುಕು ಇನ್ನಷ್ಟು ಬಲಿಷ್ಠಗೊಳ್ಳಬೇಕು, ಪರಿಸರ ಸಂರಕ್ಷಿಸಬೇಕು ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕಿನಲ್ಲಿ ಸುಧಾರಣೆ ಕಂಡಾಗ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ ಎಂದರು.


ನಂತರ ಶಾಸಕ ಭೀಮಣ್ಣ ನಾಯ್ಕ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಭಾರತವು ಇಂದು ವಿಶ್ವಮಟ್ಟದ ಎಲ್ಲಾ ರಂಗಗಳಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿಪಥದತ್ತ ಮುನ್ನಡೆಯುತ್ತಿದೆ ಎಂದರೆ ಸ್ವಾತಂತ್ರ್ಯ ಹೋರಾಟಕ್ಕಾಗಿ ನಮ್ಮಅನೇಕ ಮಹನೀಯರು ತ್ಯಾಗ, ಬಲಿದಾನ ಮಾಡಿದ ಫಲವಾಗಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪರೇಡ್ ಮಾಡುವ ಮೂಲಕ ಧ್ವಜವಂದನೆ ಸಲ್ಲಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಹಿರಿಯ ನಾಗರಿಕರು, ಡಿವೈಎಸ್ಪಿ ಗೀತಾ ಪಾಟೀಲ್, ತಾಪಂ ಇಓ ಚನ್ನಬಸಪ್ಪ ಎಚ್., ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ನಗರಸಭೆ ಮಾಜಿ ಸದಸ್ಯ ಖಾದರ್ ಆನವಟ್ಟಿ, ಡಿಡಿಪಿಐ ಡಿ.ಆರ್. ನಾಯ್ಕ್, ಕಿರಣ್ ಕುಮಾರ್ ನಾಯ್ಕ್, ಕುಮಾರ್ ಶೆಟ್ಟಿ, ಅರಣ್ಯ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಪಟ್ಟರಾಜ ಗೌಡ ಸ್ವಾಗತಿಸಿದರು. ಎನ್.ಪಿ. ಭಗವತ್ ನಿರೂಪಿಸಿದರು. ಬಿಇಓ ಎಂ.ಎಚ್. ನಾಯ್ಕ್ ವಂದಿಸಿದರು.