ಸಾರಾಂಶ
ಹೊಸಪೇಟೆ ನಗರದ ಹೃದಯ ಭಾಗದಲ್ಲಿರುವ ಈ ಧ್ವಜಸ್ತಂಭ 405 ಅಡಿ ಎತ್ತರದಲ್ಲಿದೆ. ದೇಶದ ವಾಘಾ ಗಡಿಯಲ್ಲಿ 418 ಅಡಿ ಎತ್ತರದ ಧ್ವಜ ಸ್ತಂಭ ಇದ್ದು, ಬೆಳಗಾವಿಯಲ್ಲಿ 360 ಅಡಿ ಎತ್ತರದ ಧ್ವಜ ಸ್ತಂಭ ಇದೆ.
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಡಾ. ಪುನೀತ್ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ದೇಶದ ಎರಡನೇ ಅತಿ ಎತ್ತರದ ಧ್ವಜ ಸ್ತಂಭ (405 ಅಡಿ)ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಧ್ವಜಾರೋಹಣ ನೆರವೇರಿಸಿದರು.
ನಗರದ ಹೃದಯ ಭಾಗದಲ್ಲಿರುವ ಈ ಧ್ವಜಸ್ತಂಭ 405 ಅಡಿ ಎತ್ತರದಲ್ಲಿದೆ. ದೇಶದ ವಾಘಾ ಗಡಿಯಲ್ಲಿ 418 ಅಡಿ ಎತ್ತರದ ಧ್ವಜ ಸ್ತಂಭ ಇದ್ದು, ಬೆಳಗಾವಿಯಲ್ಲಿ 360 ಅಡಿ ಎತ್ತರದ ಧ್ವಜ ಸ್ತಂಭ ಇದೆ. ವಾಘಾ ಗಡಿಯ ಧ್ವಜಸ್ತಂಭ ಸ್ಥಾಪನೆಗೂ ಮುನ್ನ ಹೊಸಪೇಟೆಯ ಧ್ವಜ ಸ್ತಂಭವೇ ದೇಶದ ಅತಿ ಎತ್ತರದ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಧ್ವಜಸ್ತಂಭವನ್ನು ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಮಾಜಿ ಸಚಿವ ಆನಂದ ಸಿಂಗ್ ಸ್ಥಾಪನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.ಹೊಸಪೇಟೆಯ ಜೋಳದರಾಶಿ ಗುಡ್ಡದ ಮೇಲೆ 100 ಅಡಿ ಎತ್ತರದ ಧ್ವಜಸ್ತಂಭ, ನಗರದ ಪುನೀತ್ ರಾಜ್‌ಕುಮಾರ ವೃತ್ತದಲ್ಲಿ 150 ಅಡಿ ಎತ್ತರದ ಧ್ವಜ ಸ್ತಂಭ ಕೂಡ ಸ್ಥಾಪನೆ ಮಾಡಲಾಗಿದೆ. ಈ ಧ್ವಜಸ್ತಂಭಗಳಲ್ಲೂ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಪುನೀತ್ ರಾಜ್‌ಕುಮಾರ ವೃತ್ತದಲ್ಲಿರುವ ಧ್ವಜಸ್ತಂಭದಲ್ಲಿ ಭಾರೀ ದೊಡ್ಡ ಗಾತ್ರದ ಧ್ವಜ ಹಾರಾಟ ನಡೆಸಿತು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಧ್ವಜವನ್ನು ಕಂಡು ದೇಶಭಕ್ತಿ ಮೆರೆದರು.