ಸಾರಾಂಶ
ಜ್ಞಾನದ ದಾರಿಯನ್ನು ತೋರಿಸುವವನು, ಹೊಸ ವಿಷಯಗಳನ್ನು ಕಲಿಸುವವರು, ಅನುಮಾನಗಳನ್ನು ನಿವಾರಿಸುವವರು, ಜ್ಞಾನವನ್ನು ವಿಸ್ತರಿಸುವವರು ಗುರುಗಳಾಗುತ್ತಾರೆ.
ರಾಣಿಬೆನ್ನೂರು: ಕಣ್ಣಿಗೆ ಕಾಣದ ದೇವರು ಇಡೀ ಪ್ರಪಂಚದ ಸೃಷ್ಟಿಕರ್ತನಾದರೆ ಜ್ಞಾನ ಸಂಪತ್ತು ಹೊಂದಿರುವ ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತನಾಗಿ ಪ್ರಗತಿಗೆ ದಾರಿದೀಪವಾಗುತ್ತಾನೆ ಎಂದು ಅರಕೆರೆ ಸಿದ್ದಲಿಂಗ ಶಿವಯೋಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮಿಗಳು ನುಡಿದರು. ನಗರದ ಕೊಟ್ಟೂರೇಶ್ವರ ಮಠದಲ್ಲಿ ಗುರುವಾರ ಗುರುಪೂರ್ಣಿಮಾ ಅಂಗವಾಗಿ ಏರ್ಪಡಿಸಿದ್ದ ಶ್ರೀಗಳ ತುಲಾಭಾರ, ಪಾದಪೂಜೆ, ಅಂಬಾರಿ ಮಹೋತ್ಸವ, ರಕ್ತದಾನ ಶಿಬಿರ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗುರುಗಳು ಮಕ್ಕಳನ್ನು ಜ್ಞಾನ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರು ಎಂದರು.
ಜ್ಞಾನದ ದಾರಿಯನ್ನು ತೋರಿಸುವವನು, ಹೊಸ ವಿಷಯಗಳನ್ನು ಕಲಿಸುವವರು, ಅನುಮಾನಗಳನ್ನು ನಿವಾರಿಸುವವರು, ಜ್ಞಾನವನ್ನು ವಿಸ್ತರಿಸುವವರು ಗುರುಗಳಾಗುತ್ತಾರೆ. ಗುರುವಾದವರು ಜೀವನದ ಹಾದಿಯಲ್ಲಿ ಸರಿಯಾದ ಮಾರ್ಗವನ್ನು ತೋರಿಸುತ್ತಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮಾರ್ಗದರ್ಶನ ನೀಡುತ್ತಾರೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ. ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತಾರೆ ಎಂದರು.ಬೆಳಗಾವಿ ಕಾರಂಜಿ ಮಠದ ಡಾ. ಶಿವಯೋಗಿ ದೇವರು ಮಾತನಾಡಿ, ಕೇವಲ ಶಿಕ್ಷಣ ನೀಡಿದರಷ್ಟೇ ಗುರುಗಳಲ್ಲ. ಗುರುಗಳು ಶಿಷ್ಯರನ್ನು ಜ್ಞಾನಿಗಳನ್ನಾಗಿ, ಸಮಾಜಕ್ಕೆ ಉಪಯುಕ್ತರನ್ನಾಗಿ ಮಾಡುತ್ತಾರೆ. ದುಷ್ಟತನವನ್ನು ನಿವಾರಿಸುತ್ತಾರೆ. ಅಜ್ಞಾನ ಮತ್ತು ದುಷ್ಟತನವನ್ನು ತೊಡೆದು ಹಾಕಲು ಸಹಾಯ ಮಾಡುತ್ತಾರೆ. ಗುರುವು ನಿಜಕ್ಕೂ ದೇವರ ಸ್ವರೂಪನಾಗಿರುತ್ತಾನೆ. ಅವರು ನಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ನಾವು ಯಾವಾಗಲೂ ಅಂತಹ ಗುರುಗಳ ಬಗ್ಗೆ ಗೌರವ, ಅಭಿಮಾನ ಪೂಜ್ಯನೀಯ ಭಾವನೆ ತೋರಬೇಕು ಮತ್ತು ಭಕ್ತಿಯನ್ನು ಸಲ್ಲಿಸಬೇಕು ಎಂದರು.ಶಿಗ್ಗಾಂವಿ ಸಂಗನಬಸವ ಸ್ವಾಮಿಗಳು, ಗುಡ್ಡದ ಆನ್ವೇರಿಯ ಶಿವಯೋಗಿ ಶಿವಾಚಾರ್ಯರು, ಬಸವಾನಂದ ಶ್ರೀಗಳು ಆಶೀರ್ವಚನ ನೀಡಿದರು. ಆನಂದ್ ಪಾಟೀಲ, ಮಹಾಂತೇಶಸ್ವಾಮಿ ಚಿಕ್ಕಮಠ ಸಂಗೀತ ಕಾರ್ಯಕ್ರಮ ನೀಡಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ವಿಶ್ವಾರಾಧ್ಯ ಅಜ್ಜೇವಡಿಮಠ, ಶಾಂತಯ್ಯ ಶಾಸ್ತ್ರೀಗಳು, ಸರೋಜಾ ಅಜ್ಜೇವಡಿಮಠ, ಬಸವರಾಜ ಹುಚಗೊಂಡರ, ಅರವಿಂದ ಅಜ್ಜೇವಡಿಮಠ, ಪರಮೇಶ ಯಡಿಯಾಪುರ, ಪ್ರಭು ಹಂಸಸಾಗರ, ವಿಶ್ವನಾಥ ಕೋಡದ, ಮಹೇಶ ಶೆಟ್ಟರ, ಸತೀಶ ಅಜ್ಜೇವಡಿಮಠ, ಗಿರೀಶ ಮಾಗನೂರ, ಜಗದೀಶ ಕಳ್ಯಾಳ, ಜಾಹ್ನವಿ ಉಪ್ಪಿನ, ಚನ್ನಯ್ಯ, ಶಿವು, ಹಾಲಸ್ವಾಮಿ ಶಾಸ್ತ್ರಿಗಳು ಇದ್ದರು.ಇದಕ್ಕೂ ಪೂರ್ವದಲ್ಲಿ ಅರಕೆರೆ ಶಿವಲಿಂಗ ಸ್ವಾಮಿಗಳ ಅಂಬಾರಿ ಮಹೋತ್ಸವವು ಮಹಿಳೆಯರ ಪೂರ್ಣಕುಂಭದ ಮೆರವಣಿಗೆಯೊಂದಿಗೆ ನಗರದ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದಿಂದ ಹೊರಟು ಅಂತಿಮವಾಗಿ ಶ್ರೀಮಠಕ್ಕೆ ತಲುಪಿತು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 22 ಜನರು ರಕ್ತದಾನ ಮಾಡಿದರು.