ಪರಿಪೂರ್ಣ ಮಾನವನ್ನಾಗಿ ಮಾಡುವುದೇ ಶಿಕ್ಷಣದ ನಿಜ ಅರ್ಥ

| Published : Feb 14 2025, 12:34 AM IST

ಸಾರಾಂಶ

ವಿದ್ಯಾರ್ಥಿಗಳು ಎಷ್ಟೇ ಸಮಸ್ಯೆ, ಸವಾಲು ಬಂದರೂ ಅದನ್ನು ಮೆಟ್ಟಿನಿಂತು ಓದುವ ಕಡೆಗೆ ಗಮನ ಹರಿಸಿದರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ

ಗದಗ: ಶಿಕ್ಷಣ ಕೇವಲ ಓದು ಬರೆಯುವುದನ್ನು ಮಾತ್ರ ಕಲಿಸುವುದಿಲ್ಲ, ಬದಲಾಗಿ ವ್ಯಕ್ತಿಯಲ್ಲಿ ಜ್ಞಾನ ಮೂಡಿಸುವುದಲ್ಲದೇ ನಮ್ಮ ವರ್ತನೆ, ನಡುವಳಿಕೆ, ಕೌಶಲ್ಯ, ಬದುಕುವ ಕಲೆ, ಸಂಸ್ಕ್ರತಿ ವಿದ್ಯಾರ್ಥಿಗಳ ಮನದಲ್ಲಿ ಬಿತ್ತಿ ಪರಿಪೂರ್ಣ ಮಾನವರನ್ನಾಗಿ ಮಾಡುವುದೇ ಶಿಕ್ಷಣದ ನಿಜವಾದ ಅರ್ಥವಾಗಿದೆ ಎಂದು ಗದಗ ಡಿಎಸ್ಪಿ ಜೆ.ಎಚ್. ಇನಾಮದಾರ ಹೇಳಿದರು.

ಅವರು ತಾಲೂಕಿನ ಲಕ್ಕುಂಡಿ ಬಿ.ಎಚ್. ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅವರು ಇಂದಿನ ವಿದ್ಯಾರ್ಥಿಗಳು ಆಧುನಿಕ ಸೌಲಭ್ಯ ಬಳಸಿಕೊಂಡು ನಿಷ್ಠೆಯಿಂದ ಅಭ್ಯಾಸ ಮಾಡಿದರೆ ಉನ್ನತ ಹುದ್ದೆ ಅಲಂಕರಿಸಬಹುದಾಗಿದೆ ಎಂದರು.

ಜ.ತೋಂಟದಾರ್ಯ ಐಟಿಐ ಕಾಲೇಜ ಶಿರೋಳದ ಉಪನ್ಯಾಸಕ ವೀರನಗೌಡ ಮರಿಗೌಡ್ರ ಮಾತನಾಡಿ, ವಿದ್ಯಾರ್ಥಿಗಳು ಎಷ್ಟೇ ಸಮಸ್ಯೆ, ಸವಾಲು ಬಂದರೂ ಅದನ್ನು ಮೆಟ್ಟಿನಿಂತು ಓದುವ ಕಡೆಗೆ ಗಮನ ಹರಿಸಿದರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಜನತಾ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಐ.ಎನ್.ಕುಂಬಾರ ಮಾತನಾಡಿದರು. ನಿರ್ದೇಶಕ ವಿ.ವಿ. ಗಂಧದ ಮಾರ್ಚ-2024ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿದರು.

ಕೆ.ಎಂ. ಪಾಟೀಲ, ಟಿ.ಎನ್. ಅಂಬಕ್ಕಿ ಹಾಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾಲೇಜಿನ ಹಳೆಯ ವಿದ್ಯಾರ್ಥಿ ಮಂಜಪ್ಪ ಜಟ್ಟೇರ, ಮಾರುತಿ ಮೆತ್ತ್ಗಲ್, ಶರಣಬಸವ ಹರಿಜನ, ಪ್ರವೀಣ, ದ್ಯಾಮಣ್ಣ ಲಮಾಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಪ್ರಾಚಾರ್ಯ ಬಿ.ವಿ. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಸ್. ಚವಡಿ ಪಾರಿತೋಷಕ ವಿತರಿಸಿ ನಿರೂಪಿಸಿದರು. ಜೆ.ಎಸ್.ಮುಳಗುಂದಮಠ ನಿರೂಪಿಸಿದರು. ಜೆ.ಜಿ. ಮಕಾನದಾರ ವಂದಿಸಿದರು.