ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2005-06ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದರು.
ಕುಷ್ಟಗಿ: ಗುರುಗಳ ಸೇವೆ, ತ್ಯಾಗ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2005-06ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದರು.
ಚಂದ್ರಶೇಖರ ದೇವರು ಹಾಗೂ ನಿವೃತ್ತ ಶಿಕ್ಷಕರು ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕರು ಹಾಗೂ ಸೇವೆಯಲ್ಲಿರುವ ಶಿಕ್ಷಕರನ್ನು ಗೌರವಿಸಲಾಯಿತು.ಗುರುಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು. ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದೆ ಎಂದು ಚಂದ್ರಶೇಖರ ದೇವರು ಹಿರೇಮಠ ಹೇಳಿದರು.
ಸನ್ಮಾನಿತ ಗುರುಗಳು ಮಾತನಾಡಿ, ನಮ್ಮ ಕೈನಲ್ಲಿ ಕಲಿತಿರುವ ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ನಿಜವಾದ ಗೌರವವಾಗಿದೆ. ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ನಾಗರಿಕರಾಗಿ ಬೆಳೆಯುವುದೇ ನಮ್ಮ ಆಶಯ. ಇಂತಹ ಕಾರ್ಯಕ್ರಮಗಳು ಗುರು-ಶಿಷ್ಯರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದರು.ಹಳೆಯ ವಿದ್ಯಾರ್ಥಿಗಳಾದ ನಾಗರಾಜ ಚವ್ಹಾಣ, ಶರಬಣ್ಣ ಆಲ್ವಿ, ವನಜಾಶ್ರೀ ಮಳಿಮಠ ಇತರರು ಮಾತನಾಡಿದರು. ಗುರುಗಳು ನಮಗೆ ಪಾಠ ಮಾತ್ರವಲ್ಲ, ಜೀವನ ಮೌಲ್ಯಗಳನ್ನು ಕಲಿಸಿದ್ದಾರೆ. ಗುರುಗಳ ಮಾರ್ಗದರ್ಶನದಿಂದ ಯಶಸ್ಸು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಗಂಗಪ್ಪ ನಿರಲಕೇರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಆದಪ್ಪ ಸಾಲವಾಡಗಿ, ಹನುಮಂತಪ್ಪ ಪೂಜಾರ, ಶಿವಾನಂದ ಹೂಗಾರ, ಚಂದ್ರಶೇಖರ ಕಿರಗಿ, ಚಿದಾನಂದ ಕಸ್ತೂರಿ, ಲಕ್ಷ್ಮಣ ಬಾಗೇವಾಡಿ, ಕೃಷ್ಣಾ ಗೋಡಬೋಲೆ, ಕಸ್ತೂರಿ ಕಂಪಾಪುರಮಠ, ಬಸನಗೌಡ ಪಾಟೀಲ, ಪುಷ್ಪಾವತಿ ಹಿರೇಮಠ, ರತ್ನಾ ಕುಲಕರ್ಣಿ, ಅಂಬಿಕಾ ಹೊಸಮನಿ, ವಿಮಲಾ ನಿಡಶೇಸಿ, ನಾಗರಾಜ ನಿಡಗುಂದಿ, ವಸಂತಕುಮಾರ ಮಾಳಗಿ, ವೀರೇಶ ಕರಡಕಲ್, ಹೇಮಾವತಿ ಗೋಪಾಲನಾಯಕ ಇದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಅಗಲಿದ ಶಿಕ್ಷಕರಿಗೆ ಭಾವಪೂರ್ಣ ನುಡಿನಮನ ಸಲ್ಲಿಸಿದರು.