ಸಾರಾಂಶ
ಶಿರಸಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಕನ್ನಡ ಕ್ಷೇತ್ರದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಲೆ ಮತದಾರರು ಇಟ್ಟ ಭರವಸೆ ಹುಸಿಯಾಗದು. ಬಿಜೆಪಿಯಿಂದ ಅಭಿವೃದ್ಧಿ ಪರ್ವ ಕ್ಷೇತ್ರದಲ್ಲಿ ಆಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್‌ಡಿಎ ಮೈತ್ರಿಕೂಟದ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯುವುದರ ಜತೆಗೆ ಮುಂದಿನ ೫ ವರ್ಷ ವಿಕಸಿತ ಭಾರತ ನಿರ್ಮಾಣ ಮಾಡುವಲ್ಲಿ ಕಟಿಬದ್ಧವಾಗಿರುತ್ತದೆ. ನರೇಂದ್ರ ಮೋದಿ ಅವರನ್ನು ೩ನೇ ಬಾರಿಗೆ ಪ್ರಧಾನಮಂತ್ರಿ ಮಾಡಬೇಕೆಂಬ ಉದ್ದೇಶದಿಂದ ಉತ್ತರಕನ್ನಡದಲ್ಲಿಯೂ ದಾಖಲೆ ಮತಗಳ ಅಂತರದಿಂದ ಬಿಜೆಪಿ ಸಂಸದರು ಆಯ್ಕೆಯಾಗುವಲ್ಲಿ ಸಹಕಾರ ನೀಡಿದ್ದಾರೆ ಎಂದರು.ವಿರೋಧಿಗಳನ್ನು ವೈಯಕ್ತಿಕ ಕಾರಣ ಇಟ್ಟು ಕಾಗೇರಿ ಅವರನ್ನು ಟೀಕಿಸಿದರು. ಕೆಲವರು ಜಾತಿ, ಜಿಲ್ಲೆ ಒಡೆಯುವ ಕುಹಕ ಪ್ರಶ್ನೆ ಮಾಡಿದರು. ಆದರೆ ಜನತೆ ಕಾಗೇರಿ ಅವರ ಸಜ್ಜನಿಕೆ, ಸರಳತನ ನೋಡಿಯೇ ಆಯ್ಕೆ ಮಾಡಿದರು. ಕಾಗೇರಿ ವಿರೋಧಿಸುವವರಿಗೆ ಮತದಾರರು ಸ್ಪಷ್ಟ ಉತ್ತರ ನೀಡಿದ್ದಾರೆ ಎಂದರು.ಕೇರಳದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಒಂದು ಸ್ಥಾನ ಗೆದ್ದಿದ್ದು, ಕಾಂಗ್ರೆಸ್ ಕಳಪೆ ಮೂರನೆಯ ಸಾಧನೆ ಎಂದು ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ೯೯ ಸ್ಥಾನ ಗೆದ್ದ ಸ್ಥಾನ ಇಟ್ಟುಕೊಂಡು ವಿರೋಧಿ ಪಕ್ಷವಾಗಿ ದೇಶದ ಅಭಿವೃದ್ಧಿಗೆ ಸಹಕರಿಸಲಿ. ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಅಪಪ್ರಚಾರ ಮಾಡಿದ ಪರಿಣಾಮ ಬಿಜೆಪಿಗೆ ಕಡಿಮೆ ಸ್ಥಾನ ಗೆಲ್ಲುವಂತಾಯಿತು. ದನಕರುಗಳಿಗೆ ಮೇವು ಪೂರೈಕೆ, ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಕೇವಲ ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಯಲ್ಲಿ ಕಾಲಹರಣ ಮಾಡಿದೆ. ವಾಲ್ಮೀಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಸಚಿವರೊಬ್ಬರನ್ನು ತಲೆದಂಡ ಮಾಡಿದ್ದಾರೆ. ಈ ಹಗರಣದಲ್ಲಿರುವ ಎಲ್ಲರ ಮೇಲೆ ಕ್ರಮವಾಗಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸಹಕಾರ ಪ್ರಕೋಷ್ಠ ಆರ್.ವಿ. ಹೆಗಡೆ ಚಿಪಗಿ, ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಸಾಮಾಜಿಕ ಜಾಲತಾಣದ ರವಿಚಂದ್ರ ಶೆಟ್ಟಿ ಇದ್ದರು.
ಮಾನಸಿಕವಾಗಿ ಕಾಂಗ್ರೆಸ್‌ನಲ್ಲಿರುವ ಹೆಬ್ಬಾರ್ಬಿಜೆಪಿಯ ಶಾಸಕರಾದ ದಿನಕರ ಶೆಟ್ಟಿ, ವಿಠ್ಠಲ ಹಲಗೇಕರ ಹಾಗೂ ಮಿತ್ರಪಕ್ಷವಾದ ಜೆಡಿಎಸ್‌ನ ಮಾಜಿ ಶಾಸಕರು ಹಾಗೂ ಮುಖಂಡರು ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗೆ ಸಾಕಷ್ಟು ಶ್ರಮವಹಿಸಿದ್ದಾರೆ. ಬಿಜೆಪಿ ಚಿಹ್ನೆಯಿಂದ ಆಯ್ಕೆಯದ ಹೆಬ್ಬಾರ್ ತಾಂತ್ರಿಕವಾಗಿ ನಮ್ಮಲ್ಲಿದ್ದಾರೆ. ಮಾನಸಿಕವಾಗಿ ಕಾಂಗ್ರೆಸ್‌ನಲ್ಲಿದ್ದಾರೆ. ಅವರಿಗೆ ನಮ್ಮ ಪಕ್ಷದ ಕಷ್ಟಕ್ಕಿಂತ ಡಿ.ಕೆ. ಸುರೇಶ ಸೋಲು ಅವರಿಗೆ ಕನಿಕರ ಬಹಳಷ್ಟಿದ್ದಂತೆ ಕಾಣುತ್ತಿದೆ ಎಂದು ಸದಾನಂದ ಭಟ್ಟ ವಾಗ್ದಾಳಿ ನಡೆಸಿದರು.