ಸಾರಾಂಶ
ಧರ್ಮಸ್ಥಳ, ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ: ಧರ್ಮಸ್ಥಳದಲ್ಲಿ ಜೈನ ಯತಿಗಳ ಎಚ್ಚರಿಕೆಕನ್ನಡಪ್ರಭ ವಾರ್ತೆ ಬೆಳ್ತಂಗಡಿಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರಲ್ಲದೆ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಆದರೆ ಎಲ್ಲರೂ ಸಂಯಮದಿಂದ ಇರಬೇಕು. ಸತ್ಯ ಬಿಟ್ಟು ನಾನು ಎಂದು ಹೋಗಿಲ್ಲ, ಹೋಗುವುದೂ ಇಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳ ಕ್ಷೇತ್ರದಲ್ಲಿ ಶುಕ್ರವಾರ ಎಲ್ಲ ಜೈನ ಮಠಗಳ ಭಟ್ಟಾರಕರ ನೇತೃತ್ವದಲ್ಲಿ ಆಯೋಜಿಸಿದ ಧರ್ಮ ಸಂರಕ್ಷಣಾ ಸಮಾವೇಶದ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿದರು. ಇಗಿನ ಬೆಳವಣಿಗೆಗಳಿಂದ ಧರ್ಮಸ್ಥಳದ ಭಕ್ತರು, ಅಭಿಮಾನಿಗಳು ತುಂಬಾ ವೇದನೆ ಪಡುತ್ತಿದ್ದಾರೆ. ಜನರು ತಮಗೆ ನೆಮ್ಮದಿ ಇಲ್ಲ ಎಂದು ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಶಾಂತತೆಯಿಂದ ತಾಳ್ಮೆಯಿಂದಿರಿ ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ. ಎಸ್ಐಟಿ ತನಿಖೆ ಆಗುತ್ತಿರುವುದರಿಂದ ಈ ಬಗ್ಗೆ ಸದ್ಯ ಹೆಚ್ಚು ಮಾತನಾಡಲಾರೆ ಎಂದರು.ಭಟ್ಟಾಚಾರ್ಯವರ್ಯರು ಕ್ಷೇತ್ರಕ್ಕೆ ಬಂದಿರುವುದರಿಂದ ದೊಡ್ಡ ವಿಚಾರ. ಇವತ್ತು ಕ್ಷೇತ್ರಕ್ಕೆ ಕಳೆ ಬಂದಿದೆ. ಎಲ್ಲಾ ಜೈನ ಸ್ವಾಮೀಜಿಯವರೂ ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ. ಭಾದ್ರಪದ ಮಾಸದಲ್ಲಿ ದಶಲಕ್ಷಣ ಪರ್ವ ಆಚರಣೆಯ ಶುಭಾವಸರದಲ್ಲಿ ಎಲ್ಲಾ ಮಠಾಧೀಶರ ದರ್ಶನ ಭಾಗ್ಯ ಲಭಿಸಿರುವುದು ಅತೀವ ಸಂತಸವಾಗಿದೆ ಎಂದು ಹೆಗ್ಗಡೆ ನುಡಿದರು.ಎಲ್ಲ ಭಟ್ಟಾರಕರು ತಮಗೆ ಹಾಗೂ ಧರ್ಮಸ್ಥಳಕ್ಕೆ ಬೆಂಬಲ ನೀಡಿ, ನಿಮ್ಮ ಜೊತೆ ಸದಾ ಇದ್ದೇವೆ ಎಂದು ಭರವಸೆ ನೀಡಿರುವುದು ನಮಗೆ ಹೆಚ್ಚಿನ ಉತ್ಸಾಹ ಮತ್ತು ಪ್ರೇರಣೆ ನೀಡಿದೆ ಎಂದು ಹೆಗ್ಗಡೆ ಸಂತಸ ವ್ಯಕ್ತಪಡಿಸಿದರು.ಶಾಂತತೆಯನ್ನು ಎಲ್ಲರೂ ಕಾಪಾಡಬೇಕು, ತಾಳ್ಮೆಯಿಂದ ಇರಬೇಕು. ವಿವೇಕಾನಂದರು ದಶ ಲಕ್ಷಣದ ಎಲ್ಲಾ ಗುಣಗಳನ್ನು ಪಾಲಿಸಿದ್ದಾರೆ. ಸತ್ಯ ಅನ್ನುವುದು ಒಂದೇ. ಎಲ್ಲರೂ ಕೂಡ ದಶ ಧರ್ಮಗಳನ್ನು ಪಾಲಿಸಲೇಬೇಕು. ತಮಿಳುನಾಡಿನಿಂದಲೂ ಸ್ವಾಮೀಜಿಗಳು ಬಂದಿದ್ದಾರೆ. ಅವರು ಕೈ ಸನ್ನೆ ಕೊಟ್ಟರೆ ಸಾಕು, ಸಾವಿರಾರು ಜನ ಸೇರುತ್ತಾರೆ ಎಂದ ಹೆಗ್ಗಡೆ ಅವರು ಎಲ್ಲರಿಗೂ ಧನ್ಯವಾದವಿತ್ತರು.ತಮಿಳುನಾಡು ಅರಹಂತಗಿರಿ ಜೈನ ಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಸತ್ಯ ಮತ್ತು ಅಹಿಂಸಾ ಪರಿಪಾಲಕರಾದ ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ತೊಂದರೆ ಕೊಟ್ಟವರನ್ನು ನಾವು ಬಿಡುವುದಿಲ್ಲ ಎಂದರು.ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರ ಧರ್ಮಸ್ಥಳದ ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿ ಬಾರದು. ರಾಮಚಂದ್ರ, ಸೀತೆಯ ಹಾಗೆ ಮಹಾಪುರುಷರಿಗೂ ಕಷ್ಟ, ಅಪವಾದ ಬರುತ್ತದೆ. ಹಾಗೆ ಧರ್ಮಸ್ಥಳಕ್ಕೆ ಬಂದ ಸಣ್ಣ ಕಳಂಕ ದೋಷ ಅಲ್ಲ. ಇಂದು ಸಣ್ಣ ಕಳಂಕವೂ ನಿವಾರಣೆಯಾಗಿದೆ ಎಂದು ನುಡಿದರು.
ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ ಎಲ್ಲಾ ಭಟ್ಟಾರಕರೂ ವಿಧಾನಸಭೆ ಎದುರು ಪ್ರತಿಭಟನೆ ಹಾಗೂ ಉಗ್ರ ಹೋರಾಟ ನಡೆಸುವುದಾಗಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಹೆಗ್ಗಡೆಯವರ ಜೊತೆ ನಾವು ಸದಾ ಇದ್ದೇವೆ. ಜೈನಧರ್ಮೀಯರಾದ ಹೆಗ್ಗಡೆ ಸರ್ವಧರ್ಮೀಯರನ್ನೂ ಸಮಾನ ಪ್ರೀತಿ-ವಿಶ್ವಾಸದಿಂದ ನೋಡುತ್ತಾರೆ, ಗೌರವಿಸುತ್ತಾರೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ಅಭಿನಂದನಾ ಭಾಷಣ ಮಾಡಿದ ಹಿರಿಯ ಸಾಹಿತಿ ನಾಡೋಜಾ ಹಂಪನಾ (ಹಂಪ ನಾಗರಾಜಯ್ಯ) ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಇಂದ್ರಿಯ ನಿಗ್ರಹ, ತಾಳ್ಮೆ, ಸಂಯಮ, ಗಾಭೀರ್ಯ, ಸ್ಥಿತಪ್ರಜ್ಞ ಶಕ್ತಿಯ ಪ್ರತಿಭೆ ವರ್ಣಿಸಲಸದಳವಾಗಿದೆ. ಕಲುಷಿತ ವಾತಾವರಣದಿಂದ ಯುವಜನರ ಮನಸ್ಸು ಹಾಳಾಗಿದೆ. ಭಿನ್ನಾಭಿಪ್ರಾಯ ಬಂದಾಗ ಅದನ್ನು ಪರಿಹರಿಸುವ ಜವಾಬ್ದಾರಿ ಹಿರಿಯರಿಗಿದೆ. ಸತ್ಯದ ಸ್ವರೂಪ ಅವರಿಗೆ ತಿಳಿಸಬೇಕು. ಏನೇ ಆಗಲಿ ಷಡ್ಯಂತ್ರದಿಂದ ಆದ ಸಣ್ಣ ಕಳಂಕ ನಿವಾರಣೆಯಾಗಿದೆ ಎಂದರು.ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹೆಗ್ಗಡೆಯವರು ಮಾನವ ಅಲ್ಲ, ದೇವಮಾನವ ಎಂದು ಬಣ್ಣಿಸಿದರು.ಶ್ರವಣಬೆಳಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜೈನಧರ್ಮ ಮತ್ತು ಹಿಂದೂ ಧರ್ಮ ಸಮಗ್ರ ಸಮಾಜದ ಸಂಪರ್ಕ ಸೇತುವಾಗಿದೆ. ಹಿಂದೂಗಳನ್ನು ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.ಹೊಂಬುಜ ಜೈನಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ದೂರುದಾರನ ಸುಳ್ಳು ಮಾತು ಕೇಳಿ ತೆಗೆಸಿದ ಹೊಂಡಗಳಲ್ಲಿ ಗಿಡಗಳನ್ನಾದರೂ ನೆಡಬೇಕು ಎಂದು ಸಲಹೆ ನೀಡಿದರು.ಸೋಂದಾ ಮಠದ ಭಟ್ಟಾಕಳಂಕ ಸ್ವಾಮೀಜಿ ಮಾತನಾಡಿ, ಸತ್ಯವು ಸದಾ ಪರಿಶುದ್ಧವಾಗಿರುತ್ತದೆ. ಜೈನರು ಹಾಗೂ ಜೈನಧರ್ಮದ ಬಗ್ಯೆ ಎಂದೂ ಅವಹೇಳನ ಸಲ್ಲದು ಎಂದರು.ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳದ ಬಗ್ಗೆ ಅಸೂಯೆಯಿಂದ ಅಪಪ್ರಚಾರ ಮಾಡುವವರು ಮಾನಸಿಕ ಭಯೋತ್ಪಾದಕರು ಎಂದು ಬಣ್ಣಿಸಿದರು.ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜಸ್ಥಾನದ ತಿಜಾರ ಮಠದ ಸೌರಭಸೇನ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಶುಭ ಹಾರೈಸಿದರು.ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್, ಮತ್ತು ಸೋನಿಯಾ ವರ್ಮ ಉಪಸ್ಥಿತರಿದ್ದರು.