ತುಳಜಾಭವಾನಿ ಮಂದಿರ ಮರಾಠರ ಸಂಘಟಿತ ಶಕ್ತಿಗೆ ಸಾಕ್ಷಿ

| Published : Feb 26 2024, 01:30 AM IST / Updated: Feb 26 2024, 01:31 AM IST

ಸಾರಾಂಶ

ಶಿಕಾರಿಪುರ ಪಟ್ಟಣದ ಹೃದಯಭಾಗದಲ್ಲಿ ಶ್ರೀ ತುಳಜಾಭವಾನಿ ಮಂದಿರ ನಿರ್ಮಿಸಿರುವುದು ಸಮಾಜದ ಸಂಘಟಿತ ಶಕ್ತಿಗೆ ಸಾಕ್ಷಿಯಾಗಿದೆ. ದೇವರು ಎಲ್ಲರಿಗೂ ಮಂಗಲ ಕರುಣಿಸಲಿ. ಶ್ರೀಮಠದ ಆವರಣದಲ್ಲಿ ಶ್ರೀ ಭವಾನಿ ಶಂಕರ, ಬೃಹತ್ ನಾಗರಕಟ್ಟೆ ನಿರ್ಮಿಸಿದ್ದು ಭಕ್ತರಿಗೆ ಅನುಕೂಲ ಕಲ್ಪಿಸಿದಂತಾಗಿದೆ. ಶಿವಾಜಿ ಮಹಾರಾಜರಲ್ಲಿ ಇದ್ದ ಶಕ್ತಿ ತೋರಿಸಿ, ಹಿಂದೂವೀ ಸ್ವರಾಜ್ಯ ನಿರ್ಮಾಣಕ್ಕೆ ಪ್ರೇರೇಪಿಸಿದ ತುಳಜಾಭವಾನಿ ದೇವಸ್ಥಾನ ಇಲ್ಲಿನ ಭಕ್ತರಿಗೂ ಆದರ್ಶ ಜೀವನ ಕಲ್ಪಿಸುವಂತಾಗಲಿ ಎಂದು ಬೆಂಗಳೂರು ಗೋಸಾಯಿ ಮಠ, ಭವಾನಿ ಪೀಠದ ಶ್ರೀ ವೇದಾಂತಚಾರ್ಯ ಶ್ರೀ ಮಂಜುನಾಥ ಸ್ವಾಮೀಜಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಶಿಕಾರಿಪುರ ಪಟ್ಟಣದ ಹೃದಯಭಾಗದಲ್ಲಿ ಶ್ರೀ ತುಳಜಾಭವಾನಿ ಮಂದಿರ ನಿರ್ಮಿಸಿರುವುದು ಸಮಾಜದ ಸಂಘಟಿತ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಬೆಂಗಳೂರು ಗೋಸಾಯಿ ಮಠ, ಭವಾನಿ ಪೀಠದ ಶ್ರೀ ವೇದಾಂತಚಾರ್ಯ ಶ್ರೀ ಮಂಜುನಾಥ ಸ್ವಾಮೀಜಿ ನುಡಿದರು.

ಪಟ್ಟಣದ ಶಿವಗಿರಿ ಮರಾಠ ಸಮಾಜ ವತಿಯಿಂದ ನಿರ್ಮಿಸಲಾದ ಶ್ರೀ ತುಳಜಾಭವಾನಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇವರು ಎಲ್ಲರಿಗೂ ಮಂಗಲ ಕರುಣಿಸಲಿ. ಶ್ರೀಮಠದ ಆವರಣದಲ್ಲಿ ಶ್ರೀ ಭವಾನಿ ಶಂಕರ, ಬೃಹತ್ ನಾಗರಕಟ್ಟೆ ನಿರ್ಮಿಸಿದ್ದು ಭಕ್ತರಿಗೆ ಅನುಕೂಲ ಕಲ್ಪಿಸಿದಂತಾಗಿದೆ. ಶಿವಾಜಿ ಮಹಾರಾಜರಲ್ಲಿ ಇದ್ದ ಶಕ್ತಿ ತೋರಿಸಿ, ಹಿಂದೂವೀ ಸ್ವರಾಜ್ಯ ನಿರ್ಮಾಣಕ್ಕೆ ಪ್ರೇರೇಪಿಸಿದ ತುಳಜಾಭವಾನಿ ದೇವಸ್ಥಾನ ಇಲ್ಲಿನ ಭಕ್ತರಿಗೂ ಆದರ್ಶ ಜೀವನ ಕಲ್ಪಿಸುವಂತಾಗಲಿ ಎಂದು ಹಾರೈಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶ್ರೀ ತುಳಜಾಭವಾನಿ ಭವ್ಯ ದೇವಸ್ಥಾನ ಈ ಭಾಗದ ಸಾವಿರಾರು ಭಕ್ತರಿಗೆ ಅನುಕೂಲ ಕಲ್ಪಿಸುತ್ತದೆ. ಮಹಾರಾಷ್ಟ್ರದ ತುಳಜಾಪುರಕ್ಕೆ ಹೋಗಲು ಅಸಾಧ್ಯವಾದ ಭಕ್ತರಿಗೆ ಇಲ್ಲಿಯೇ ದೇವಿ ದರ್ಶನ ಲಭಿಸಲಿದೆ. ದೇವಸ್ಥಾನ ಆವರಣದಲ್ಲಿ ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ, ದೇವಸ್ಥಾನ ನಿರ್ಮಾಣಕ್ಕಾಗಿ ಬಿ.ಎಸ್.ಯಡಿಯೂರಪ್ಪ ₹1 ಕೋಟಿಗೂ ಹೆಚ್ಚು ಅನುದಾನ ನೀಡಿದ್ದು, ಅದರ ಸದ್ಭಳಕೆ ಖುಷಿಯ ಸಂಗತಿ. ಶಿವಾಜಿಯಲ್ಲಿ ಇದ್ದ ಆದರ್ಶ ಗುಣಗಳು ಇಲ್ಲಿನ ಯುವಕರೂ ಅಳವಡಿಸಿಕೊಂಡರೆ ಸುಭದ್ರ ದೇಶ ಕಟ್ಟಬಹುದು ಎಂದರು.

ಶ್ರೀ ತುಳುಜಾಭವಾನಿ ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ್ ಜಗತಾಪ್ ಮಾತನಾಡಿ, ಇದೇ ತಿಂಗಳ 18 ರಂದು ಶ್ರೀ ಭವಾನಿಶಂಕರ ದೇವಸ್ಥಾನ ಉದ್ಘಾಟನೆಗೊಂಡಿದೆ, 23ರಂದು ನಾಗರಕಟ್ಟೆ ಅನಾವರಣ, ಫೆ.14ರಿಂದ 24 ರವರೆಗೆ ನಿತ್ಯಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ನಿತ್ಯ ಅನ್ನದಾನ ಕಾರ್ಯಕ್ರಮ ಸಂಪನ್ನಗೊಂಡಿದೆ. ಈ ದಿಸೆಯಲ್ಲಿ ಶ್ರಮಿಸಿದ ಸಮಾಜದ ಎಲ್ಲರಿಗೂ ಸಹಕಾರ ನೀಡಿರುವ ದಾನಿಗಳಿಗೂ ಭಕ್ತರಿಗೂ ಧನ್ಯವಾದ ಎಂದು ತಿಳಿಸಿದರು.

ಶಿವಗಿರಿ ಮಹಾಸಂಸ್ಥಾನ ಮಠದ ಶ್ರೀ ದಯಾನಂದ ಗಿರಿ ಸ್ವಾಮೀಜಿ,ಹಾರನಹಳ್ಳಿ ಶನೇಶ್ವರ ಕ್ಷೇತ್ರದ ಶ್ರೀ ಹನುಮಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮರಾಠ ಸಮಾಜದ ಅಧ್ಯಕ್ಷ ಚಂದ್ರೋಜಿರಾವ್ ಮೋಹಿತೆ, ಶಿವಗಿರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರೋಜಿರಾವ್ ಪಾಟ್ವಾಳ್, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರ್ಜುನರಾವ್ ಮಟ್ಟಿಮನೆ ಸಿಂಧೆ, ಶಿವಗಿರಿ ಸಹಕಾರ ಸಂಘದ ಅಧ್ಯಕ್ಷ ದಾನೋಜಿರಾವ್ ಸೇರಿದಂತೆ ಸಮಾಜದ ಎಲ್ಲ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮ:

ಕಾರ್ಯಕ್ರಮ ಅಂಗವಾಗಿ ಪ್ರಾತಃ ಕಾಲ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದಿಂದ ನೂತನ ದೇವಸ್ಥಾನದವರೆಗೆ ಸಮಾಜದ ಮಹಿಳೆಯರಿಂದ 111 ಪೂರ್ಣಕುಂಭ ಮೆರವಣಿಗೆ ನಡೆಯಿತು. ಪ್ರತಿಷ್ಠಾ ಕಲಾತತ್ವ ಹವನ, ಶಿಭರ ಪ್ರತಿಷ್ಠೆ, ಧ್ವಜಕಂಭ ಪ್ರತಿಷ್ಠ, 108 ಕುಂಬಾಭಿಷೇಕ, ಕಳಸಾರೋಹಣ, ದೇವರ ಪ್ರಾಣಪ್ರತಿಷ್ಠಾಪನೆ ನಡೆಯಿತು.

- - - -25ಕೆ.ಎಸ್.ಕೆಪಿ3:

ಶಿಕಾರಿಪುರದ ನೂತನ ಶ್ರೀ ತುಳಜಾಭವಾನಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಜ್ಜಯನಿ ಸದ್ಧರ್ಮ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು.