ಸಾರಾಂಶ
ಇಳಕಲ್ಲ : ಈ ಗ್ರಾಮದ ಶಾಲೆಗೆ ಮಕ್ಕಳು ಹೋಗಬೇಕೆಂದರೆ ಭಾರೀ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾದ ಪರಿಸ್ಥಿತಿ ಇದೆ. ಮಾತ್ರವಲ್ಲ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋಗಬೇಕಾದ ಅನಿವಾರ್ಯತೆ ಇದೆ. ಕಾರಣ ಗ್ರಾಮದ ಪಕ್ಕವೇ ಹರಿದುಹೋಗಿರುವ ಹಿರೇ ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ, ಅದು ಎರಡೂ ವರ್ಷಗಳಾದರೂ ಕಾಮಗಾರಿ ಮುಗಿದಿಲ್ಲ. ಹೀಗಾಗಿ ಮಕ್ಕಳು ಹಳ್ಳವನ್ನು ದಾಟಿಕೊಂಡೇ ಶಾಲೆಗೆ ಹೋಗಬೇಕಿದೆ.
ಇಂತಹ ಸಂದಿಗ್ದ ಪರಿಸ್ಥಿತಿ ಇದ್ದರೂ ಯಾವೊಬ್ಬ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸದಿರುವುದು ಮಾತ್ರ ಮುಗ್ದ ಮಕ್ಕಳ ಶಿಕ್ಷಣಕ್ಕೆ ಮಾರಕವಾಗಿದೆ. ಇಳಕಲ್ಲ ತಾಲೂಕಿನ ದೊಡ್ಡ ಗ್ರಾಮವಾದ ಕರಡಿ ಗ್ರಾಮದಲ್ಲಿ ಇಂತಹ ಪರಿಸ್ಥಿತಿ ಉದ್ಭವವಾಗಿದೆ. ಕರಡಿ ಗ್ರಾಮದ ಹೊರವಲಯದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಕರಡಿ ಗ್ರಾಮದ ಮಕ್ಕಳು ಈ ಶಾಲೆಗೆ ಹೋಗಬೇಕೆಂದರೆ ಗ್ರಾಮದ ಪಕ್ಕವೇ ಹರಿದುಹೋಗಿರುವ ಹಿರೇಹಳ್ಳವನ್ನು ದಾಟಿಕೊಂಡೇ ಹೋಗಬೇಕು.
2 ವರ್ಷಗಳಿಂದ ನಡೆಯುತ್ತಿದೆ ಕಾಮಗಾರಿ:
ಹಿರೇಹಳ್ಳಕ್ಕೆ ಮೇಲ್ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. ಈ ಕಾಮಗಾರಿಯನ್ನು ಪಡೆದ ಗುತ್ತಿಗೆದಾರರು ಕಳೆದ ಎರಡು ವರ್ಷಗಳಿಂದ ಮಾಡುತ್ತಿದ್ದಾರೆ. ಆದರೆ, ಅನುದಾನ ಕೊರತೆಯಿಂದಾಗಿ ಅದನ್ನು ಸಂಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮೇಲ್ಸೇತುವೆ ಪಕ್ಕದಲ್ಲಿ ಅದು ಹಿರೇಹಳ್ಳದಲ್ಲಿಯೇ ಕಾಲುದಾರಿ ಮಾಡಿ, ಆ ಹಳ್ಳದಲ್ಲಿಯೇ ಹಾದು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ.
ಅದೂ ಅಲ್ಲದೆ, ಈ ಬಾರಿ ಹೆಚ್ಚು ಮಳೆಯಾಗಿದ್ದರಿಂದ ಹಳ್ಳ ಕೂಡ ಭಾರೀ ಪ್ರಮಾಣದಲ್ಲಿ ತುಂಬಿ ಹರಿದಿದೆ. ಈಗಲೂ ಕೂಡ ಹಳ್ಳದಲ್ಲಿ ನೀರು ಹರಿಯುತ್ತಿದೆ. ಆದರೆ, ಅಪಾಯಮಟ್ಟದಲ್ಲಿ ನೀರು ಇಲ್ಲವಾದರೂ ಮಕ್ಕಳು ಸರಾಗವಾಗಿ ಶಾಲೆಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಇಷ್ಟಕ್ಕೆಲ್ಲ ಕಾರಣವೇ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತ ಮಾಡಿರುವುದು.
ತಾಲೂಕಿನ ಅತಿ ದೊಡ್ಡ ಗ್ರಾಮವಾದ ಕರಡಿ ಗ್ರಾಮದಲ್ಲಿ ಈ ರೀತಿ ಅಭಿವೃದ್ಧಿ ಕಾಮಗಾರಿಗೆ ನಿಂತಿರುವುದಕ್ಕೆ ಗ್ರಾಮಸ್ಥರು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ನೋಡಿದರೆ ಗ್ರಾಮದ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಭಾವ ಎದ್ದು ಕಾಣುತ್ತದೆ ಎಂದು ಹೇಳುತ್ತಿದ್ದಾರೆ. ಹಿರೇಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ, ಎರಡು ವರ್ಷಗಳಾಗುತ್ತಾ ಬಂದರೂ ಇನ್ನೂ ಕೂಡ ಸೇತುವೆ ಕಾರ್ಯ ಮುಗಿಯುತ್ತಿಲ್ಲ ಎಂದು ನೋವು ಕೂಡ ತೋಡಿಕೊಳ್ಳುತ್ತಿದ್ದಾರೆ.
ಇದೇ ಮಾರ್ಗವಾಗಿ ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳು ಹಳ್ಳ ದಾಟಲು ಹರಸಾಹಸ ಪಡುವಂತಾಗಿದೆ. ಮಕ್ಕಳ ಗೋಳು ಯಾರಿಗು ಕಾಣುತ್ತಿಲ್ಲವೇ? ಅಥವಾ ಗೊತ್ತಿದ್ದರೂ ಈ ಕುರಿತು ತಾಲೂಕು ಮತ್ತು ಜಿಲ್ಲಾಡಳಿತ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ. ಮಕ್ಕಳು ಕೂಡ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಾ ಹಳ್ಳ ದಾಟುತ್ತಿದ್ದಾರೆ. ಇದೆ ಮಾರ್ಗವಾಗಿ ಹೋಗುವ ವಿದ್ಯಾರ್ಥಿಗಳು ಕೆಲವೊಮ್ಮೆ ಬಿದ್ದು ಪೆಟ್ಟು ಮಾಡಿಕೊಂಡಿರುವ ಘಟನೆಗಳು ನಡೆದಿವೆ.
ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ:
ಕರಡಿ ಗ್ರಾಮಕ್ಕೆ ಮುಖ್ಯ ರಸ್ತೆ ಎಂದರೆ ಹಿರೇಹಳ್ಳದ ಮಾರ್ಗವಾಗಿಯೇ ಹೋಗಬೇಕು. ಇಳಕಲ್ಲ ಮತ್ತು ಹುನಗುಂದದಿಂದ ಕರಡಿ ಗ್ರಾಮಕ್ಕೆ ಇದೆ ಮಾರ್ಗವೇ ಗ್ರಾಮಸ್ಥರಿಗೆ ಹತ್ತಿರವಾಗುತ್ತದೆ. ಆದರೆ, ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಬೈಕ್‌ಗಳು, ವಾಹನಗಳು, ಅಷ್ಟೇ ಏಕೆ ಬಸ್ಸುಗಳು ಕೂಡ ಹಳ್ಳದಲ್ಲಿಯೇ ಮಾರ್ಗ ಮಾಡಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಒದಗಿಬಂದಿದೆ.
ಇವೆಲ್ಲದರ ನಡುವೆ ಹುನಗುಂದ ಮತ್ತು ಇಳಕಲ್ಲ ಪಟ್ಟಣಗಳಿಗೆ ಕರಡಿ ಗ್ರಾಮದ ಜನರು ಹೋಗಬೇಕಾದರೆ ಸುತ್ತು ಹಾಕಿಕೊಂಡು ಹೋಗಬೇಕು. ಈ ಹಳ್ಳದ ಮಾರ್ಗವಾಗಿ ಹೋದರೆ ಹತ್ತಿರವಾಗುತ್ತದೆ. ಹೀಗಾಗಿ ಸುತ್ತು ಹಾಕಿ ಹೋಗುವ ಬದಲು ಇದೆ ಮಾರ್ಗ ಸಮೀಪವಾಗುತ್ತದೆ. ಆದ್ದರಿಂದ ಈ ಮಾರ್ಗದ ಸೇತುವೆಯನ್ನು ಬೇಗನೆ ಪೂರ್ಣಗೊಳಿಸಿ, ಗ್ರಾಮಸ್ಥರಿಗೆ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದೂ ಅವರು ಆಗ್ರಹಿಸುತ್ತಿದ್ದಾರೆ.