ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಜೂನಿಯರ್‌ ವಿಷ್ಣುವರ್ಧನ್‌ ಅಕ್ಷೇಪಾ ಮಂಜುನಾಥ್‌ ತಂಡ ನಡೆಸಿಕೊಟ್ಟ ವಿಶೇಷ ನೃತ್ಯ ಕಾರ್ಯಕ್ರಮ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಗಾನ-ನಂದನ, ಶ್ರೀ ಅನಂತೇಶ್ವರ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ನಾದಬ್ರಹ್ಮ ಸಭಾಂಗಣದಲ್ಲಿ ಮರೆಯದ ಮಾಣಿಕ್ಯ- ಡಾ. ವಿಷ್ಣುವರ್ಧನ್‌ ಗೀತೆಗಳ ಗಾಯನೋತ್ಸವ ಬುಧವಾರ ನಡೆಯಿತು. ವಿಷ್ಣು ಅಭಿನಯದ ಚಿತ್ರಗೀತೆಗಳ ಗಾಯನ ಹಾಗೂ ನೃತ್ಯ ಸಮ್ಮಿಲನ ಸಭಿಕರಿಗೆ ಮೋಡಿ ಮಾಡಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸಿ ಮಾತನಾಡಿ, ಮೈಸೂರಿನವರೇ ಆದ ವಿಷ್ಣುವರ್ಧನ್‌ ಅವರು ಭೈರಪ್ಪ ಅವರ ಕಾದಂಬರಿ ಆಧರಿತ ವಂಶವೃಕ್ಷ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕವೇ ಮುಂದೆ ಭರವಸೆಯ ನಾಯಕನಾಗುವ ಲಕ್ಷಣಗಳನ್ನು ತೋರಿಸಿದ್ದರು. ಅದರಂತೆ ಪುಟ್ಟಣ ಕಣಗಾಲ್‌ ನಿರ್ದೇಶನದ ಅವರ ಮೊದಲ ಚಿತ್ರ ನಾಗರಹಾವು ಸೂಪರ್‌ ಹಿಟ್‌ ಆಯಿತು. ಮುಂದೆ ಪುಟ್ಟಣ್ಣನವರು ಮತ್ತೊಂದು ಚಿತ್ರ ನಿರ್ದೇಶಿಸುವ ಆಸೆ ಇದ್ದರೂ ಕಥೆ ಸಿಗಲಿಲ್ಲ ಎಂದರು.

ವಿಷ್ಣುವರ್ಧನ್‌ ಅವರೊಬ್ಬ ಸುರಧ್ರೂಪಿ ನಟ. ಇದನ್ನು ಪಂಚಭಾಷೆ ತಾರೆ ಮಾಧವಿ ಅವರೇ ಹೇಳಿದ್ದಾರೆ ಎಂದು ಅವರು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ಹಾಗೂ ಶ್ರೀ ಅನಂತೇಶ್ವರ ಟ್ರಸ್ಟ್‌ ಅಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ವಿಷ್ಣುವರ್ಧನ್‌ ಅವರು ಮೈಸೂರಿನಲ್ಲಿಯೇ ಹುಟ್ಟಿ, ಮೈಸೂರಿನಲ್ಲಿಯೇ ನಿಧನರಾದರು. ಕೊನೆಗೆ ಸ್ಮಾರಕವೂ ಮೈಸೂರಿನಲ್ಲಿಯೇ ಆಯಿತು. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗಬೇಕು ಎಂಬ ಬೇಡಿಕೆ ಈಗ ಈಡೇರಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕವಿ ಜಯಪ್ಪ ಹೊನ್ನಾಳಿ ಮಾತನಾಡಿ, ಕನ್ನಡದಲ್ಲಿ ಡಾ.ರಾಜ್‌ಕುಮಾರ್‌ ಸೂರ್ಯನಂತೆ ಪ್ರಖರ ಬೆಳಕಾಗಿದ್ದರೆ ವಿಷ್ಣುವರ್ಧನ್‌ ಅವರು ತಂಪಾದ ಚಂದ್ರನಂತಿದ್ದರು ಎಂದು ಬಣ್ಣಿಸಿದರ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಅಲೆಯನ್ಸ್‌ ಕ್ಲಬ್‌ ಆಫ್‌ಮೈಸೂರು ಜಿಲ್ಲಾ ರಾಜ್ಯಪಾಲ ಎಸ್‌. ವೆಂಕಟೇಶ್‌, ಸಂಸ್ಕೃತಿ ಚಿಂತಕ ಕೆ. ರಘುರಾಂ ವಾಜಪೇಯಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ರಂಗಕರ್ಮಿ ರಾಜಶೇಖರ ಕದಂಬ. ಗಾನ-ವಂದನ ಅಧ್ಯಕ್ಷ ಎನ್. ಬೆಟ್ಟೇಗೌಡ ಮುಖ್ಯಅತಿಥಿಗಳಾಗಿದ್ದರು.

ಗಾಯಕರಾದ ಎನ್. ಬೆಟ್ಟೇಗೌಡ, ಡಾ.ವೈ.ಡಿ. ರಾಜಣ್ಣ, ಡಾ.ಎ.ಎಸ್‌. ಪೂರ್ಣಿಮಾ, ಡಾ. ಶ್ರೀಲತಾ ಮನೋಹರ್‌, ಸಿ.ಎಸ್‌. ವಾಣಿ, ವೇದಶ್ರೀ ಗಾಯನ ಪ್ರಸ್ತುತಪಡಿಸಿದರು. ನಾದಬ್ರಹ್ಮಸಭಾದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಾಗಿ ಪ್ರೋತ್ಸಾಹಿಸುವ ಸುಂದರಮೂರ್ತಿ ದಂಪತಿ ಹಾಗೂ ಜೂನಿಯರ್‌ ವಿಷ್ಣುವರ್ಧನ್‌ ರಮೇಶ್‌ ಅವರನ್ನು ಸನ್ಮಾನಿಸಲಾಯಿತು. ಸುಮಾ ರಾಜಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

---

ಜೂ.ವಿಷ್ಣುವರ್ಧನ್‌ ತಂಡದಿಂದ ನೃತ್ಯ

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಜೂನಿಯರ್‌ ವಿಷ್ಣುವರ್ಧನ್‌ ಅಕ್ಷೇಪಾ ಮಂಜುನಾಥ್‌ ತಂಡ ನಡೆಸಿಕೊಟ್ಟ ವಿಶೇಷ ನೃತ್ಯ ಕಾರ್ಯಕ್ರಮ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

--ಬೈರಿ ಅವರಿಂದ ಗಾಯನ

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷರಾಗಿ ಕಳೆದ ಒಂದೂವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ನೂರಾರು ಗಾಯಕರು, ವಾದ್ಯ ಸಂಗೀತಗಾರರಿಗೆ ವೇದಿಕೆ ಒದಗಿಸಿಕೊಟ್ಟಿರುವ ನಾಗರಾಜ ವಿ. ಬೈರಿ ಅವರು ಕಳ್ಳಕುಳ್ಳ ಚಿತ್ರದ ನಾ ಹಾಡಲು ನೀವು ಹಾಡಬೇಕು... ಗೀತೆಯನ್ನು ಪ್ರಸ್ತುತಪಡಿಸುವ ಮೂಲಕ ಸಭಿಕರ ಸಿಳ್ಳೆ, ಚಪ್ಪಾಳೆಗಳಿಗೆ ಪಾತ್ರರಾದರು.