ಹಾಲು ಉತ್ಪಾದಕರ ಅಭಿವೃದ್ಧಿಗೆ ಒಕ್ಕೂಟ ಬದ್ಧ

| Published : Dec 15 2023, 01:31 AM IST

ಸಾರಾಂಶ

ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವತೋಮುಖ ಅಭಿವೃದ್ಧಿಗೆ ಧಾರವಾಡ ಹಾಲು ಒಕ್ಕೂಟ ಬದ್ಧವಾಗಿದೆ ಎಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವ್ಹಿ. ಮುಗದ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವತೋಮುಖ ಅಭಿವೃದ್ಧಿಗೆ ಧಾರವಾಡ ಹಾಲು ಒಕ್ಕೂಟ ಬದ್ಧವಾಗಿದೆ ಎಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವ್ಹಿ. ಮುಗದ ಹೇಳಿದರು.

ಧಾರವಾಡದ ಲಕ್ಕಮನಹಳ್ಳಿಯ ಧಾರವಾಡ ಸಹಕಾರ ಹಾಲು ಒಕ್ಕೂಟದ ನಂದಿನಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಧಾರವಾಡ ಜಿಲ್ಲಾ ಸಹಕಾರಿ ಯೂನಿಯನ್, ಧಾರವಾಡ ಸಹಕಾರ ಹಾಲು ಒಕ್ಕೂಟ, ಧಾರವಾಡ ಮತ್ತು ಸಹಕಾರ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಧಾರವಾಡ, ಅಳ್ನಾವರ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳ ವಿಶೇಷ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕರು ತಮ್ಮ ಕರ್ತವ್ಯ ಜವಾಬ್ದಾರಿಗಳನ್ನರಿತು ಕಾರ್ಯನಿರ್ವಹಿಸಲು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್‌ದ ನಿರ್ದೇಶಕ ಸದಾಶಿವಗೌಡ ಅ. ಪಾಟೀಲ ಮಾತನಾಡಿ, ತಾವು ಸಂಘಗಳ ಅಭಿವೃದ್ಧಿಗಾಗಿ ಶ್ರಮಿಸಿದಲ್ಲಿ ತಮ್ಮ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಸಹಕಾರ ಸಂಘಗಳ ಅಭಿವೃದ್ಧಿಗೆ ಕಾರಣಿಕರ್ತರಾದಲ್ಲಿ ಒಕ್ಕೂಟ ತಮ್ಮ ಅಭಿವೃದ್ಧಿಗೆ ಸದಾ ಬದ್ಧವಾಗಿರುತ್ತದೆ ಎಂದು ಹೇಳಿದರು.

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ತೇಜೋಮೂರ್ತಿ ಆರ್. ಮಾತನಾಡಿ, ಎಲ್ಲ ಸಹಕಾರ ಸಂಘಗಳು ಪ್ರತಿ ವರ್ಷ ಲೆಕ್ಕ ತಪಾಸಣೆಯನ್ನು ಮಾಡಿಸಿಕೊಂಡು ಸರಿಯಾಗಿ ಲೆಕ್ಕ ಪತ್ರ ಇಡುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಎಸ್.ಎನ್. ರಾಯನಾಳ ಮಾತನಾಡಿ, ಹಾಲು ಉತ್ಪಾದಕರು ಅನಭವಿಸುತ್ತಿರುವ ಸಮಸ್ಯೆಗಳ ಕುರಿತು ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗಿದೆ. ತರಬೇತಿಯ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.

ಅಲ್ಲದೇ ಇತ್ತೀಚೆಗೆ ಸಹಕಾರ ಸಂಘಗಳ ಕಾಯ್ದೆ ಹಾಗೂ ನಿಯಮಗಳು ಸಾಕಷ್ಟು ಬದಲಾವಣೆಯಾಗುತ್ತಿರುವುದರಿಂದ ಇಂತಹ ತರಬೇತಿಗಳು ಅವಶ್ಯಕವಾಗಿರುತ್ತದೆ. ಇನ್ನೂ ಹೆಚ್ಚಿನ ತರಬೇತಿಗಳು ತಮಗೆ ಬೇಕಾದಲ್ಲಿ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್‌ ಹೆಚ್ಚಿನ ರೀತಿಯ ತರಬೇತಿ ನೀಡಲು ಸದಾಸಿದ್ಧ ಎಂದರು.

ಕಾರ್ಯಕ್ರಮದಲ್ಲಿ ಯೂನಿಯನ್‌ ನಿರ್ದೇಶಕರಾದ ಚಂಬಣ್ಣ ಹಾಳದೋಟರ, ಆರ್. ನವಲಗುಂದ, ರಾಮಣ್ಣ ಕನಾಜಿ ಒಕ್ಕೂಟದ ವ್ಯವಸ್ಥಾಪಕರಾದ ಡಾ. ವೀರೇಶ ತರಲಿ ಹಾಗೂ ಒಕ್ಕೂಟದ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಮಾ ಸೌಲಭ್ಯದ ಚೆಕ್ಕುಗಳನ್ನು ವಿತರಿಸಲಾಯಿತು. ಶಬರಿ ಹುಲಗೂರ ಪ್ರಾರ್ಥಿಸಿದರು. ಯೂನಿಯನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಮಂಗಳಗೌಡ ದಾನಪ್ಪಗೌಡ್ರ ವಂದಿಸಿದರು.