ಜ್ಞಾನಿ, ಜಿಜ್ಞಾಸುವಿನ ಸಂಭಾಷಣೆಗಳೇ ಉಪನಿಷತ್ತು: ಲಕ್ಷ್ಮೀಶ ತೋಳ್ಪಾಡಿ

| Published : Dec 24 2024, 12:48 AM IST

ಸಾರಾಂಶ

ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಕಳದ ಹೋಟೆಲ್ ಪ್ರಕಾಶ್‌ನ ‘ಉತ್ಸವ’ ಸಭಾಂಗಣದಲ್ಲಿ ೨೦೨೪ರ ಹನ್ನೊಂದು ತಿಂಗಳಲ್ಲಿ ನಡೆದ ಉಪನಿಷತ್ತುಗಳ ಕುರಿತಾದ ಉಪನ್ಯಾಸಗಳ ಸಮಾರೋಪ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಜ್ಞಾನಿ ಮತ್ತು ಜಿಜ್ಞಾಸು ಹತ್ತಿರ ಕುಳಿತು ಬದುಕಿನ ನಿಗೂಢತೆಯ ಬಗ್ಗೆ ಮಾತನಾಡುವುದೇ ಉಪನಿಷತ್ತು. ಅಲ್ಲಿ ಮೂರನೆಯವರು ಬೇಕಾಗಿಲ್ಲ ಎಂದು ಖ್ಯಾತ ಚಿಂತಕ, ವಿದ್ವಾಂಸರೂ ಲಕ್ಷ್ಮೀಶ ತೋಳ್ಪಾಡಿ ಹೇಳಿಸಿದರು.

ಅವರು ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಕಳದ ಹೋಟೆಲ್ ಪ್ರಕಾಶ್‌ನ ‘ಉತ್ಸವ’ ಸಭಾಂಗಣದಲ್ಲಿ ೨೦೨೪ರ ಹನ್ನೊಂದು ತಿಂಗಳಲ್ಲಿ ನಡೆದ ಉಪನಿಷತ್ತುಗಳ ಕುರಿತಾದ ಉಪನ್ಯಾಸಗಳ ಸಮಾರೋಪ ಸಮಾರಂಭದ ಮುಖ್ಯ ಉಪನ್ಯಾಸಕಾರರಾಗಿ ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆ ಇಂದಿನ ಸಿರಿವಂತಿಕೆಯ ಸೌಲಭ್ಯಗಳಿಲ್ಲದ ಕಾಲದಲ್ಲಿಯೂ ಜೀವನವನ್ನು ಅರ್ಥಮಾಡಿಕೊಳ್ಳುವ ಬಗೆ ಮತ್ತು ಒಳಗಿನ ಒಂದು ಸಂವೇದನಾಶೀಲತೆಯ ರಹಸ್ಯ ಉಪನಿಷತ್ತಿನಲ್ಲಿ ಅಡಗಿದೆ ಎಂಬುದನ್ನು ಋಷಿಮುನಿಗಳು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಆದರೆ ಪ್ರಚಂಡವಾದ ಜೀವನ ಲಾಲಸೆ ನಮ್ಮನ್ನು ಆವರಿಸಿರುವುದರಿಂದ, ಮನುಷ್ಯನೂ ದೇವರ ಅಂಶವೇ ಆಗಿರುವುದು ಹೌದಾದರೂ ಈ ಸೂಕ್ಷ್ಮವನ್ನು ಅರಿತುಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೆ. ನಮ್ಮೊಳಗಿರುವ ದೇವರಿಗೆ ನಮಗೆ ನಾವೇ ಅನ್ಯಾಯ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕಾಗಿಯೇ ತೋರಿಕೆಯನ್ನು ತೊರೆದು ನಿನ್ನನ್ನು ನೀನು ತಿಳಿ ಅನ್ನುತ್ತದೆ ಉಪನಿಷತ್ತು ಎಂದರು.ಡಾ.ನಾ.ಮೊಗಸಾಲೆ, ಎಸ್. ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಏರ್‌ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್ ಅ.ಭಾ.ಸಾ.ಪ.ದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾರಾಯಣ ಶೇವಿರೆ, ಹರಿಹರಪುರ ಪ್ರಭೋದಿನಿ ಗುರುಕುಲದ ಸಂಚಾಲಕರಾದ ಕೃಷ್ಣ ಶಾಸ್ತ್ರಿ, ಆರೆಸ್ಸೆಸ್ ತಾಲೂಕು ಸಂಘಚಾಲಕರಾದ ರತ್ನಾಕರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು. ಶಾರ್ವರಿಯವರು ಪ್ರಾರ್ಥಿಸಿದರು. ಮಾಲತಿ ವಸಂತ ನಿರೂಪಿಸಿದರು. ಸುಧಾಕರ್ ಶ್ಯಾನುಭೋಗ್ ಅತಿಥಿಗಳನ್ನು ಪರಿಚಯಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಮಾಲತಿ ಜಿ. ಪ್ರಭು ವಂದಿಸಿದರು.