ಶೋಷಿತ ವರ್ಗಗಳಿಗೆ ಬೆನ್ನೆಲುಬಾಗಿ ನಿಂತ ಅರಸು: ತಹಸೀಲ್ದಾರ್ ಆರತಿ

| Published : Aug 21 2025, 01:00 AM IST

ಶೋಷಿತ ವರ್ಗಗಳಿಗೆ ಬೆನ್ನೆಲುಬಾಗಿ ನಿಂತ ಅರಸು: ತಹಸೀಲ್ದಾರ್ ಆರತಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂದಿನ ಸಮಯದಲ್ಲಿ ದೀನ ದಲಿತರಿಗೆ, ಶೋಷಿತ ವರ್ಗಗಳಿಗೆ ಬೆನ್ನೆಲುಬಾಗಿ ನಿಂತು ಮುಂದಿನ ಭವಿಷ್ಯ ಕಟ್ಟಿಕೊಟ್ಟರು. ಅವರ ಆಡಳಿತಾವಧಿಯಲ್ಲಿ ಸಮಾಜ ಸುಧಾರಣಾ ಕ್ರಮಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾದವು.

ಕನ್ನಡಪ್ರಭ ವಾರ್ತೆ ಗುಬ್ಬಿ

ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಿದ ಡಿ.ದೇವರಾಜ ಅರಸು ಅವರ ಶೈಕ್ಷಣಿಕ ಚಿಂತನೆ ಇಂದಿಗೂ ಅವಿಸ್ಮರಣೀಯ ಎಂದು ತಹಸೀಲ್ದಾರ್ ಆರತಿ.ಬಿ ತಿಳಿಸಿದರು.

ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ರಾಜ್ಯದ 22 ಮುಖ್ಯಮಂತ್ರಿಗಳ ಪೈಕಿ ಅರಸು ಅವರಿಗೆ ಮಾತ್ರ ದಿನಾಚರಣೆ ಅವಕಾಶ ಕಲ್ಪಿಸಲಾಗಿದೆ. ಅಂದಿನ ಸಮಯದಲ್ಲಿ ದೀನ ದಲಿತರಿಗೆ, ಶೋಷಿತ ವರ್ಗಗಳಿಗೆ ಬೆನ್ನೆಲುಬಾಗಿ ನಿಂತು ಮುಂದಿನ ಭವಿಷ್ಯ ಕಟ್ಟಿಕೊಟ್ಟರು. ಅವರ ಆಡಳಿತಾವಧಿಯಲ್ಲಿ ಸಮಾಜ ಸುಧಾರಣಾ ಕ್ರಮಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾದವು. ಈ ಹಿನ್ನೆಲೆ ಜಯಂತಿ ಆಚರಣೆ ಸರ್ಕಾರಿ ಕಾರ್ಯಕ್ರಮವಾಗಿ ನಡೆಯುತ್ತಿದೆ ಎಂದರು.

ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ, ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ನಿರ್ಮಿಸಿದ ವಸತಿ ಶಾಲೆಗಳ ಫಲ ಇಂದು ತಿಳಿಯುತ್ತಿದೆ. ಬಡವರ ಮಕ್ಕಳು ಸಮಾಜದಲ್ಲಿ ಗಣ್ಯ ಸ್ಥಾನ ಪಡೆಯುವಲ್ಲಿ ಅರಸು ಅವರ ವಸತಿ ಶಾಲೆಗಳು ಕಾರಣವಾಗಿದೆ. ಎಲ್ಲಾ ವರ್ಗದವರನ್ನು ಸಮಾನವಾಗಿ ಕಂಡು ಕೆಲ ಕಾಯಿದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಈ ಹಿನ್ನೆಲೆ ಹಿಂದುಳಿದ ವರ್ಗಗಳ ದೈವವಾಗಿ ಅರಸು ಮನದಲ್ಲಿದ್ದಾರೆ ಎಂದರು.

ಉಪನ್ಯಾಸಕ ಕೆ.ಲೋಕೇಶ್ ಮಾತನಾಡಿ, 1972 ರಲ್ಲಿ ಹಿಂದುಳಿದ ವರ್ಗಗಳ ಆಯೋಗ ಸ್ಥಾಪಿಸಿ, 1977 ರಲ್ಲಿ ಸಾಕಷ್ಟು ವಿರೋಧದ ನಡುವೆ ಹಿಂದುಳಿದ ವರ್ಗಗಳಿಗೆ ಶೇಕಡಾ 55 ರಷ್ಟು ಮೀಸಲಾತಿ ಜಾರಿಗೆ ತಂದರು. ಜೀತ ಪದ್ಧತಿ ನಿಷೇಧ ಶಾಸನ ಜಾರಿಗೆ ತಂದು ರಾಜ್ಯದ 45 ಸಾವಿರ ಮಂದಿಗೆ ಉತ್ತಮ ಬದುಕು ಕಟ್ಟಿಕೊಟ್ಟರು ಧೀಮಂತ ನಾಯಕ ಅರಸು ಎಂದರು.

ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಎಚ್.ಎಸ್.ಪವಿತ್ರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ಆಯಿಷಾ ತಾಸೀನ್, ಉಪಾಧ್ಯಕ್ಷೆ ಶ್ವೇತಾ, ಸದಸ್ಯ ಮಹಮದ್ ಸಾದಿಕ್, ಸವಿತಾ ಸಮಾಜ ತಾಲೂಕು ಅಧ್ಯಕ್ಷ ಪಾಪಣ್ಣ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುಪ್ರಸಾದ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ವಾಲ್ಮೀಕಿ ಸಮಾಜದ ಮುಖಂಡ ನರಸಿಂಹಮೂರ್ತಿ, ರಾಜು, ಕ್ಷತ್ರೀಯ ಸಮಾಜದ ಅಧ್ಯಕ್ಷ ಲಕ್ಷ್ಮೀಕಾಂತರಾಜೇ ಅರಸ್, ಉಪಾಧ್ಯಕ್ಷ ಜಿ.ಆರ್.ಶ್ರೀನಿವಾಸ್, ಪದಾಧಿಕಾರಿಗಳಾದ ಮಂಜುನಾಥ್ ಅರಸ್, ಪುರುಷೋತ್ತಮ್ ಅರಸ್, ಜಯರಾಮ್ ಅರಸ್ ಇತರರು ಇದ್ದರು.