ಸಾರಾಂಶ
ಕನ್ನಡ ರಾಜ್ಯೋತ್ಸವ ಮತ್ತು ಗೆಳೆಯರ ಬಳಗ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ ಕಾರ್ಯಕ್ರಮವನ್ನು ಬಸವ ಕೇಂದ್ರದ ಡಾ.ಶ್ರೀ ಬಸವ ಮರುಳುಸಿದ್ದ ಸ್ವಾಮೀಜಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕನ್ನಡ ಭಾಷೆ ಉಳಿಯಬೇಕಾದರೆ ಅದನ್ನು ಬಳಸುವುದು ಹೆಚ್ಚಾಗಬೇಕು ಎಂದು ಬಸವ ಕೇಂದ್ರದ ಡಾ.ಶ್ರೀ ಬಸವ ಮರುಳುಸಿದ್ದ ಸ್ವಾಮೀಜಿ ಹೇಳಿದರು.ಕರ್ನಾಟಕ ರಾಜ್ಯ ಗೆಳೆಯರ ಬಳಗದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಮತ್ತು ಗೆಳೆಯರ ಬಳಗ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕಚಿಕ್ಕ ಶಬ್ದಗಳನ್ನು ಸಹಿತ ನಾವು ಆಂಗ್ಲಭಾಷೆಯಲ್ಲಿ ಹೇಳುವುದನ್ನು ಕಲಿತಿದ್ದೇವೆ. ಉದಾಹರಣೆಗೆ ವಾಟರ್, ಸ್ಪೂನ್ ಇಂತಹ ಶಬ್ದಗಳನ್ನು ಕನ್ನಡದಲ್ಲಿ ಸುಲಭವಾಗಿ ಬಳಸಬಹುದಾಗಿದೆ. ಆದರೂ ಕೂಡ ಪ್ರತಿಷ್ಠಿತೆಯ ಸಲುವಾಗಿ ಇಂಗ್ಲಿಷ್‍ನಲ್ಲಿ ಬಳಸುತ್ತೇವೆ. ಇದು ತಪ್ಪಬೇಕು. ಸಾಧ್ಯವಾದಷ್ಟು ಕನ್ನಡವನ್ನು ಪ್ರಜ್ಞಾಪೂರಕವಾಗಿ ಬಳಸಬೇಕು ಎಂದು ತಿಳಿಸಿದರು.ಕನ್ನಡ ಅನ್ನದ ಭಾಷೆಯಾಗಬೇಕು. ಕೇವಲ ನವಂಬರ್ ತಿಂಗಳಲ್ಲಿ ಹೋರಾಟ ಮಾಡಿದರೆ ಸಾಲದು, ನಮ್ಮ ಎಲ್ಲಾ ಕಚೇರಿಗಳು, ಬ್ಯಾಂಕ್‍ಗಳು, ಸರ್ಕಾರಿ ಕಚೇರಿಗಳು, ಹೀಗೆ ಎಲ್ಲಾ ಕಡೆಯೂ ಕನ್ನಡ ಬಳಕೆ ಕಡ್ಡಾಯ ಮಾಡಬೇಕು. ಈ ಎಲ್ಲಾ ಕಡೆಗಳಲ್ಲಿ ಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬೇರೆ ಭಾಷೆಗಳ ಮೇಲೆ ನಮ್ಮ ದ್ವೇಷ ಬೇಡ, ಆದರೆ ನಮ್ಮ ಭಾಷೆಯ ಬಗ್ಗೆ ಅಧಿಕಾರದ ಪ್ರೀತಿ ಇರಬೇಕು. ಸರ್ಕಾರಗಳು ಕೂಡ ಕನ್ನಡ ಭಾಷೆ ಉಳಿಯಲು ಶ್ರಮಿಸಬೇಕು. ಆಡಳಿತ ಭಾಷೆ ಕನ್ನಡವೇ ಆಗಬೇಕು ಎಂದು ಹಲವು ವರ್ಷಗಳು ಹೋರಾಟ ನಡೆದರೂ ಕೂಡ ಆ ಬಗ್ಗೆ ಸರ್ಕಾರ ಗಂಭೀರ ಚಿಂತನೆಯನ್ನು ಮಾಡಿಲ್ಲ, ಗೆಳೆಯರ ಬಳಗದಂತಹ ಕನ್ನಡ ಸಂಘಟನೆಗಳು, ಕನ್ನಡ ಭಾಷೆ ಕಡ್ಡಾಯಕ್ಕೆ ಹೋರಾಟ ನಡೆಸಬೇಕು ಎಂದರು.ಕಾರ್ಯಕ್ರಮದಲ್ಲಿ ಕ್ರಾಂತಿಭಗತ್ ಪತ್ರಿಕೆಯ ಸಂಪಾದಕ ನಾಗರಾಜ್ ಶೆಣೈ, ಸೈನಿಕ ಪ್ರಶಾಂತ್ ಟಿ.ವಿ, ಶಶಿಕುಮಾರ್ ಹಾಗೂ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ಕರಾಟೆಯಲ್ಲಿ ಬಂಗಾರ ಪದಕ ಪಡೆದ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಧರ್ಮಗುರು ರೆವರೆಂಡ್ ಡಾ.ಜೇಸುದಾಸ್, ಧರ್ಮಗುರು ಮೌಲಾನ ಶಾಹುಲ್ ಅಮಿದ್ ಸಾನ್ನಿಧ್ಯ ವಹಿಸಿದ್ದರು. ಗೆಳೆಯರ ಬಳಗದ ರಾಜ್ಯಾಧ್ಯಕ್ಷ ಎಂ.ಆರ್.ಅನಿಲ್‍ಕುಂಚಿ, ಜಿಲ್ಲಾಧ್ಯಕ್ಷ ಡಿ.ಪರಮೇಶ್ವರಪ್ಪ, ಲೇಖಕ ಯು.ಎನ್.ಸಂಗನಾಳ ಮಠ, ಚಂದ್ರಕಲಾ ಮಾ.ಇಟಗಿಮಠ, ಶುಭ ಪ್ರಕಾಶ್ ಕುಸ್ಕೂರು, ಮೋಹನ್‍ಕುಮಾರ್ ಎಸ್.ಡಿ., ಮಾತೆ ಅಕ್ಕಮಹಾದೇವಿ, ಎಸ್.ಪಿ.ಶೇಷಾದ್ರಿ ಸೇರಿ ಹಲವರಿದ್ದರು.