ಮಳೆ ನೀರು ಕೊಯ್ಲು ಬಳಕೆ ಅಗತ್ಯ: ಆಯುಕ್ತೆ ರೇಣುಕ

| Published : Jun 27 2024, 01:10 AM IST

ಸಾರಾಂಶ

ಮಳೆ ನೀರು ಸಂರಕ್ಷಣೆಗಾಗಿ ಮಹಾನಗರ ಪಾಲಿಕೆಯಿಂದ ಹಲವು ಯೋಜನೆ ರೂಪಿಸಿದ್ದು, ಹಂತಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು. ನಗರದ ಜಿಲ್ಲಾ ಸ್ಕೌಟ್ ಭವನದಲ್ಲಿ ಬುಧವಾರ ಪ್ರೇರಣಾ ಯುವ ಸಂಸ್ಥೆ, ಭಾರತ ವಿಕಾಸ ಪರಿಷದ್, ಹಾಗೂ ದಾವಣಗೆರೆ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಳೆ ನೀರು ಕೊಯ್ಲು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

- ಮನೆ ನಿರ್ಮಾಣಕ್ಕೆ ಲೈಸೆನ್ಸ್ ಕೊಡುವಾಗ ಮಳೆ ನೀರು ಕೊಯ್ಲು ಕಡ್ಡಾಯ - - - ಕನ್ನಡಪ್ರಭ ವಾರ್ತೆ ದಾವಣಗೆರೆಮಳೆ ನೀರು ಸಂರಕ್ಷಣೆಗಾಗಿ ಮಹಾನಗರ ಪಾಲಿಕೆಯಿಂದ ಹಲವು ಯೋಜನೆ ರೂಪಿಸಿದ್ದು, ಹಂತಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು. ನಗರದ ಜಿಲ್ಲಾ ಸ್ಕೌಟ್ ಭವನದಲ್ಲಿ ಬುಧವಾರ ಪ್ರೇರಣಾ ಯುವ ಸಂಸ್ಥೆ, ಭಾರತ ವಿಕಾಸ ಪರಿಷದ್, ಹಾಗೂ ದಾವಣಗೆರೆ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಳೆ ನೀರು ಕೊಯ್ಲು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ ಕೆಲಸಗಳ ಒತ್ತಡದ ಕಾರಣ, ಬೇಸಿಗೆಯಲ್ಲಿ ಜನರಿಗೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗಲಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಸೀಮಿತ ಸಂಪನ್ಮೂಲದಲ್ಲಿ ನೀರು ನಿರ್ವಹಣೆ ಕಷ್ಟವಾಗುತ್ತಿದೆ. ಮನೆ ನಿರ್ಮಾಣಕ್ಕೆ ಲೈಸೆನ್ಸ್ ಕೊಡುವಾಗ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿದ್ದರೂ, ಅದು ಪರಿಣಾಮಕಾರಿಯಾಗಿ ಪಾಲನೆ ಆಗುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ಮಳೆ ನೀರು ಕೊಯ್ಲು ಅತ್ಯವಶ್ಯಕವಾಗಿದ್ದು, ಅದನ್ನು ಹೆಚ್ಚೆಚ್ಚು ಪ್ರಚಾರ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಮಳೆ ನೀರು ಕೊಯ್ಲು ಬಗ್ಗೆ ಜಾಗೃತಿ ಮೂಡಿಸಿ, ಕಡ್ಡಾಯವಾಗಿ ಅನುಷ್ಠಾನಕ್ಕೆ ತರುತ್ತೇವೆ. ನಗರದ ಪ್ರಜ್ಞಾವಂತ ನಾಗರಿಕರು, ಸಂಘ-ಸಂಸ್ಥೆಗಳು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಮನೆಯ ಮೇಲ್ಛಾವಣಿ ಮೇಲೆ ಮಳೆ ನೀರು ಸಂಗ್ರಹಿಸುವ ಜೊತೆಗೆ ಪಾರ್ಕುಗಳಲ್ಲಿ ಇಂಗುಗುಂಡಿ ನಿರ್ಮಿಸುವ ಯೋಜನೆ ಇದೆ. ಈಗಾಗಲೇ ನಗರಕ್ಕೆ ಸಮೀಪವಿರುವ ಆವರಗೆರೆ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಹೊಸ ಕೆರೆಗಳ ನಿರ್ಮಾಣಕ್ಕೆ ನಗರದ ಸುತ್ತಮುತ್ತ ನಾಲ್ಕು ಜಾಗಗಳನ್ನು ಗುರುತಿಸಲಾಗಿದೆ. ಅರಸನಕಟ್ಟೆ ಬಳಿ ಒಂದೂವರೆ ಎಕರೆ, ಹರಿಹರದ ಬಳಿ 8 ಎಕರೆ ಹಾಗೂ ಬಾತಿ ಸಮೀಪ 30 ಎಕರೆ ಜಾಗದಲ್ಲಿ ಕೆರೆ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಪ್ರೇರಣಾ ಯುವ ಸಂಸ್ಥೆಯ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯರೂ ಆಗಿರುವ ಎಸ್.ಟಿ.ವೀರೇಶ್ ಮಾತನಾಡಿ, ಕಳೆದ ಎರಡು ಮೂರು ತಿಂಗಳಿನಿಂದಲೂ ನೀರಿಗೆ ಹಾಹಾಕಾರವಿರುವ ವಿಷಮ ಪರಿಸ್ಥಿತಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇವೆ. ಈಗಿನ ಮಳೆಗಾಲದ ಸಂದರ್ಭದಲ್ಲೂ ಕೆಲವೆಡೆ 15 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇದಕ್ಕಾಗಿ ಯಾರನ್ನೋ ದೂರಿ ಪ್ರಯೋಜನವಿಲ್ಲ. ಬದಲಾವಣೆ ಮೊದಲು ನಮ್ಮಿಂದಲೇ ಆಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿವರ್ತನಾ ವೇದಿಕೆಯ ಅಧ್ಯಕ್ಷೆ ಡಾ.ಶಾಂತಾ ಭಟ್ ವಹಿಸಿದ್ದರು. ಭಾರತ ವಿಕಾಸ ಪರಿಷತ್ ಅಧ್ಯಕ್ಷ ಎ.ಎಸ್.ವಿಜಯ ಕುಮಾರ, ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಮಳೆ ನೀರು ಕೊಯ್ದು ಸಲಹೆಗಾರ ವಿಜಯರಾಜ ಸಿಸೋದ್ಯಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.----26ಕೆಡಿವಿಜಿ40

ದಾವಣಗೆರೆಯಲ್ಲಿ ನಡೆದ ಮಳೆ ನೀರು ಕೊಯ್ಲು ಸಂವಾದ ಕಾರ್ಯಕ್ರಮವನ್ನು ಪಾಲಿಕೆ ಆಯುಕ್ತೆ ರೇಣುಕಾ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.