ಸರ್ಕಾರದ ಸಂಪನ್ಮೂಲದ ಬಳಕೆ ಹೇರಳವಾಗಿದೆ: ಸಿ.ಸಿ. ಪಾಟೀಲ

| Published : Nov 24 2024, 01:50 AM IST

ಸಾರಾಂಶ

ಉಪ ಚುನಾವಣೆಯಲ್ಲಿ ಬಹುತೇಕ ಜನರು ಆಡಳಿತ ಪಕ್ಷದ ಪರವಾಗಿಯೇ ಇರುತ್ತಾರೆ‌. ಸಚಿವರು, ಶಾಸಕರು, ಸಂಪನ್ಮೂಲ ಹೇರಳವಾಗಿ ಬಳಕೆಯಾಗುತ್ತದೆ. ಜನರ ಈ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಬಹುತೇಕ ಜನರು ಆಡಳಿತ ಪಕ್ಷದ ಪರವಾಗಿಯೇ ಇರುತ್ತಾರೆ‌. ಸಚಿವರು, ಶಾಸಕರು, ಸಂಪನ್ಮೂಲ ಹೇರಳವಾಗಿ ಬಳಕೆಯಾಗುತ್ತದೆ. ಜನರ ಈ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಅವರು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಉಪಚುನಾವಣೆಯಲ್ಲಿ ನಾನು ಸುಮಾರು 15 ದಿನಗಳ ಕಾಲ ಕೆಲಸ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದಲ್ಲಿ ₹5 ಲಕ್ಷ ರೂಪಾಯಿಯ 15,000 ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ‌. ಒಂದು ಮನೆಗೆ 4 ಮತ ಬಂದರೂ ಸುಮಾರು 60 ಸಾವಿರ ಮತಗಳು ಬರಬೇಕಿತ್ತು. ಬಡವರಿಗೆ ಗೋವುಗಳನ್ನು ಕೊಡಿಸಿದ್ದಾರೆ. ಆಸ್ಪತ್ರೆ ‌ಕಟ್ಟಿಸಿದ್ದಾರೆ. ಅಭಿವೃದ್ಧಿ ಅಂದರೆ ಶಿಗ್ಗಾಂವಿ ಕ್ಷೇತ್ರಕ್ಕೆ ಹೋಗಿ ನೋಡಬೇಕು. ಈಗ ಯಾಸಿರ್ ಖಾನ್ ಪಠಾಣ ಆಯ್ಕೆಯಾಗಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರು ಮಾಡಲು ಕ್ಷೇತ್ರದಲ್ಲಿ ಏನೂ ಉಳಿದಿಲ್ಲ ಎಂದರು.

ಕ್ಷೇತ್ರದ ಹಣೆಬರಹವೂ ಇರುತ್ತದೆ. ಇವರಿಂದ ಕ್ಷೇತ್ರದ ಪುಣ್ಯ ಹೆಚ್ಚಾಗಿದೆ ಎಂದು ಭಾವಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರಬಹುದು. ಜನರ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನತೆಯೇ ಜನಾರ್ದನ ಎಂದು ನಂಬಿದ್ದೇವೆ. ನಾವು ಹಿಂದೆ 17 ಜನ ಶಾಸಕರನ್ನು ರಾಜೀನಾಮೆ ಕೊಡಿಸಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೆವು. ಯಾವುದೇ ಚುನಾವಣೆಯನ್ನು ಯಾವುದೇ ರಾಜಕಾರಣಿ ನಿರ್ಲಕ್ಷ್ಯ ಮಾಡುವುದಿಲ್ಲ. ಕೆಲವು ಸಾರಿ ನಾವು ತಪ್ಪು ಮಾಡದಿದ್ದರೂ ಸೋಲುತ್ತೇವೆ. ಕೆಲವರು ತಪ್ಪು ಮಾಡಿದರೂ ಗೆಲ್ಲುತ್ತಾರೆ. ತೀರ್ಪನ್ನು ಒಪ್ಪಿಕೊಳ್ಳಬೇಕು. ಒಪ್ಪಿಕೊಂಡಿದ್ದೇವೆ ಎಂದರು.

ಇನ್ನು ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ದೊಡ್ಡ ಪ್ರಮಾಣದ ಜನ ಬೆಂಬಲ ದೊರೆತಿದೆ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದರು.ಚುನಾವಣೆಗೂ ವಕ್ಫ್ ಹೋರಾಟಕ್ಕೂ ಸಂಬಂಧವಿಲ್ಲ: ಜೋಶಿ

ಹುಬ್ಬಳ್ಳಿ:

ಉಪ ಚುನಾವಣೆ ಫಲಿತಾಂಶಕ್ಕೂ ವಕ್ಫ್ ವಿವಾದಕ್ಕೂ ಸಂಬಂಧವಿಲ್ಲ. ಅದೇ ಸ್ಪಿರಿಟ್‌ನಲ್ಲೇ ವಕ್ಫ್ ವಿರುದ್ಧದ ಹೋರಾಟ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಶನಿವಾರ ಸಂಜೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ವಕ್ಫ್ ಭೂ ಕಬಳಿಕೆ ವಿರುದ್ಧ ಹೋರಾಟ ಮುಂದುವರೆಸಲಿದೆ ಎಂದು ಸ್ಪಷ್ಟಪಡಿಸಿದರು.

ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನ ತಮ್ಮ ಪರವಾಗಿದ್ದಾರೆ ಎಂದು ಭಾವಿಸಿ ಕಾಂಗ್ರೆಸ್ ಸರ್ಕಾರ ಮತ್ತೆ ವಕ್ಫ್ ಮುನ್ನಲೆಗೆ ತಂದರೆ ಮುಂದೆ ಜನರೇ ಇವರಿಗೆ ಬುದ್ಧಿ ಕಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಮುಂದೆ ಮತ್ತೆ ವಕ್ಫ್ ಆಸ್ತಿ ಮಾಡಲು ಉದ್ದೇಶಿಸಿದೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ವಕ್ಫ್‌ ವಿಷಯದಲ್ಲಿ ಅನ್ಯಾಯ ನಡೆಯುತ್ತಲೇ ಇದೆ. ಈಗೇನೋ ಮೂರು ಕ್ಷೇತ್ರಗಳನ್ನು ಗೆದ್ದಿರಬಹುದು. ಆದರೆ, ಯಾವತ್ತೂ ಇದೇ ಪ್ರಭಾವ ಇರುತ್ತದೆ ಎಂದಲ್ಲ. ವಕ್ಫ್ ವಿಚಾರದಲ್ಲಿ ಹುಚ್ಚುತನ ಮಾಡುವುದನ್ನು ಕಾಂಗ್ರೆಸ್ಸಿಗರು ಬಂದ್ ಮಾಡಲಿ ಎಂದು ಸಚಿವ ಪ್ರಹ್ಲಾದ ಜೋಶಿ ಕಿವಿಮಾತು ಹೇಳಿದರು.