ಹಾನಗಲ್ಲ: ಕಾಯಕ ದಾಸೋಹದ ಮೂಲಕ ಸುಖಿ ಜೀವನದ ಸಂದೇಶಗಳನ್ನು ಸರಳ ಸೂತ್ರಗಳಲ್ಲಿ ನೀಡಿದ ವಚನಕಾರರು ಕನ್ನಡ ಸಾಹಿತ್ಯ ಹಾಗೂ ಕನ್ನಡಿಗರ ಸಂಸ್ಕೃತಿಯ ಶ್ರೇಷ್ಠತೆಯನ್ನು ಮರೆದಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಉಪಾಧ್ಯಕ್ಷ ಅಶೋಕ ದಾಸರ ತಿಳಿಸಿದರು. ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಹಾಗೂ ನಗರ ಘಟಕ, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕಾಯಕ ಯೋಗಿ ನುಲಿಯ ಚಂದಯ್ಯನವರು ಬಸವಣ್ಣನವರ ಆಪ್ತರಲ್ಲಿ ಆಪ್ತರಾಗಿ ಮಹಾಶಿವಶರಣರಾಗಿದ್ದರು. ಬಸವಣ್ಣನವರ ಕಾಯಕ ನಿಷ್ಠೆ, ನಿಷ್ಠುರತೆ, ಸಮಾಜಮುಖಿ ಚಿಂತನೆಗಳಿಗೆ ಪ್ರಭಾವಿತರಾಗಿದ್ದರು. ಹಗ್ಗ ಹೊಸೆಯುವ ಕಾಯಕದ ನುಲಿಯ ಚಂದಯ್ಯನವರು ಸಮಾಜವನ್ನೂ ಕೂಡ ಹಗ್ಗದಂತೆ ಒಟ್ಟಾಗಿ ಗಟ್ಟಿಯಾಗಿಡುವ ಶರಣ ಸೂತ್ರಗಳನ್ನು ಅಳವಡಿಸಿಕೊಂಡು ಶರಣ ಧರ್ಮವನ್ನು ಪರಿಪಾಲಿಸಿದ ಶರಣ ಶ್ರೇಷ್ಠರಾಗಿದ್ದರು. ಅವರಲ್ಲಿ ಕಾಯಕದ ಏಕಾಗ್ರತೆ, ದಾಸೋಹದಲ್ಲಿ ಶ್ರದ್ಧೆ ಅತ್ಯಂತ ಮಹತ್ವದ ಗುಣಗಳಾಗಿದ್ದವು. ಶರಣ ಚಳುವಳಿಯ ನಂತರ ಉಳವಿ ಚನ್ನಬಸವೇಶ್ವರರಲ್ಲಿ ತಮ್ಮ ಸೇವೆ ಸಲ್ಲಿಸಿದವರಾಗಿದ್ದಾರೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕಲಾವಿದ ರಾಮಣ್ಣ ಸುಗಂಧಿ, ಈಗ ಶರಣರ ಚಿಂತನೆಗಳು ಹೆಚ್ಚು ರೂಢಿಯಲ್ಲಿ ಬರುತ್ತಿವೆ. ಶಾಲೆ ಕಾಲೇಜು, ಸಭೆ ಸಮಾರಂಭಗಳಲ್ಲಿ ವಚನಗಳ ಸಾರ ಸಂಗ್ರಹ ಚಿಂತನೆಗಳು ಕೇಳುತ್ತಿವೆ. ನಾನು ಒಬ್ಬ ವೇಷಭೂಷಣ ಕಲಾವಿದನಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಶರಣರ ವೇಷಭೂಷಣಕ್ಕೆ ಬೇಡಿಕೆ ಇದೆ. ಸಣ್ಣ ಮಕ್ಕಳು, ಹಿರಿಯರು, ಮಹಿಳೆಯರು ಶರಣರ ವೇಷಭೂಷಣ ಧರಿಸಿ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರುವುದು ಶರಣ ಚಿಂತನೆಗಳು ಜನಮಾನಸದಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವುದರ ಸಂಕೇತ ಎಂದರು.ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಅಕ್ಕಮ್ಮ ಶೆಟ್ಟರ ಅಧ್ಯಕ್ಷತೆವಹಿಸಿ ಮಾತನಾಡಿ, ಕಲ್ಯಾಣದ ಕ್ರಾಂತಿ ಇಡೀ ಜಗತ್ತಿಗೆ ಒಂದು ಜಾಗೃತಿ ಸಂದೇಶ. ಸತ್ಯದ ನಡೆಯಲ್ಲಿ ಶಿವನ ಓಲೈಕೆ ಇದೆ. ಎಲ್ಲವನ್ನೂ ಸಮಾಜಮುಖಯಾಗಿ ನೋಡುವ ವ್ಯಕ್ತಿತ್ವ ಎಲ್ಲರದಾಗಬೇಕು. ವಚನಗಳು ಎಲ್ಲ ಕಾಲಕ್ಕೂ ಸಲ್ಲುವ ಜೀವನ ಸಂದೇಶಗಳು ಎಂದರು. ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರವಿಬಾಬು ಪೂಜಾರ, ತಾಲೂಕು ಅಧ್ಯಕ್ಷ ಎಸ್.ಕೆ. ಕಲ್ಲನಗೌಡರ, ಕದಳಿ ತಾಲೂಕು ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಶೋಭಾ ಪಾಟೀಲ, ಬಸವರಾಜ ಬಳ್ಳಾರಿ, ರೇಖಾ ಶೆಟ್ಟರ, ಸುವರ್ಣ ಹಿರೇಗೌಡರ, ನಿರ್ಮಲಾ ಮಹಾರಾಜಪೇಟೆ, ಸುಜಾತಾ ನಂದೀಶೆಟ್ಟರ, ದ್ರಾಕ್ಷಾಯಿಣಿ ಗಾಣಿಗೇರ, ಜ್ಯೋತಿ ಮತ್ತಿಹಳ್ಳಿ, ಸುಮಂಗಲ ಕಟ್ಟಿಮಠ, ನೀಲಮ್ಮ ಜಾಡರ, ರೂಪಾ ಸಾಂಬ್ರಾಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾಯಕ ದಾಸೋಹದ ಮೂಲಕ ಸಂದೇಶ ನೀಡಿದ ವಚನಕಾರರು-ಅಶೋಕ ದಾಸರ
ಕಾಯಕ ದಾಸೋಹದ ಮೂಲಕ ಸುಖಿ ಜೀವನದ ಸಂದೇಶಗಳನ್ನು ಸರಳ ಸೂತ್ರಗಳಲ್ಲಿ ನೀಡಿದ ವಚನಕಾರರು ಕನ್ನಡ ಸಾಹಿತ್ಯ ಹಾಗೂ ಕನ್ನಡಿಗರ ಸಂಸ್ಕೃತಿಯ ಶ್ರೇಷ್ಠತೆಯನ್ನು ಮರೆದಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಉಪಾಧ್ಯಕ್ಷ ಅಶೋಕ ದಾಸರ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.