ಕನ್ನಡಪ್ರಭ ವಾರ್ತೆ ವಿಜಯಪುರ
ನಡೆ-ನುಡಿ ಒಂದಾಗಿ ಬದುಕಿದವರು ಬಸವಾದಿ ಶರಣರು. ಅವರ ಚಿಂತನೆ ಸದಾ ಮಾನವ ಬದುಕಿಗೆ ಮೌಲಿಕವಾದದ್ದು. ಇಂದಿನ ಕೂಳುಬಾಕು ಸಂಸ್ಕೃತಿ ಮಧ್ಯದಲ್ಲಿ ಬದುಕು ಹಲವಾರು ಬದಲಾವಣೆ ಕಂಡು ಮೌಲಿಕತೆ ಕಳೆದುಕೊಳ್ಳುತ್ತಿದೆ ಎಂದು ಹೊನ್ನುಟಗಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಬಸವರಾಜ ಕುಂಬಾರ ತಿಳಿಸಿದರು.ನಗರದ ಆಶ್ರಮ ರಸ್ತೆಯಲ್ಲಿರುವ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ 554ನೇ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂಥ ಸಂದರ್ಭದಲ್ಲಿ ಶರಣರ ನಡೆ-ನುಡಿ, ಆದರ್ಶಗಳು ಶ್ರೇಷ್ಠವಾಗಿ ನಮಗೆ ಅನ್ವಯವಾಗುತ್ತವೆ. ಈ ಕಾರಣವೇ ಶರಣರ ಬದುಕು, ಉಪಮಾತೀತವಾದದ್ದು, ಅವರನ್ನು ಅನುಸರಿಸಿ ನಾವು ನಡೆಯುವ ಅಗತ್ಯವಿದೆ ಎಂದು ಹೇಳಿದರು.
ಶರಣರ ಚಿಂತನೆಗಳನ್ನು ಅವರ ಬದುಕಿನ ರೀತಿ ನೀತಿಗಳನ್ನು ಸಮಕಾಲೀನ ಬದುಕಿಗೆ ಆನ್ವಯವಾಗುವಂತೆ ಮಾತನಾಡಿ, ಮಂಕುತಿಮ್ಮನ ಕಗ್ಗದ ಅನೇಕ ನುಡಿಗಳನ್ನು, ಶರಣರ ವಚನಗಳನ್ನು ಉದಾಹರಣೆಯಾಗಿ ವಿವರಿಸಿದರು. ಜೀವನದಲ್ಲಿ ತಾಳ್ಮೆಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ಸಂಸ್ಕಾರ, ನೆಮ್ಮದಿ ನಮ್ಮ ಬದುಕಿಗೆ ಅಗತ್ಯವಾಗಿದೆ. ಇವುಗಳನ್ನು ಬಸವೇಶ್ವರ ವಚನಗಳನ್ನು ಓದುವ ಮೂಲಕ ನಾವು ಪಡೆಯಬಹುದಾಗಿದೆ ಎಂದವರು ತಿಳಿಸಿದರು.ಬಿಎಲ್.ಡಿ ಇ ಸಂಸ್ಥೆಯ ನಿವೃತ್ತ ಲೆಕ್ಕಾಧಿಕಾರಿ ಕೃಷ್ಣಪ್ಪ ನ್ಯಾಮಗೌಡ ಅಧ್ಯಕ್ಷತೆ ಅವರು ವಹಿಸಿ ಮಾತನಾಡಿ, ಶರಣರ ಚಿಂತನೆಗಳು ಸದಾ ಕಾಲ ಪ್ರಚಲಿತವಾಗಿರುತ್ತವೆ. ನಮ್ಮ ಬದುಕು ಸುಂದರವಾಗಿ, ಸುಗಮವಾಗಿ ಸಾಗಲು ಅವರ ಚಿಂತನೆಗಳು ನಮಗೆ ಮಾರ್ಗದರ್ಶನ ಮಾಡುತ್ತವೆ ಎಂದು ತಿಳಿಸಿದರು.
ಜಿ.ಎಸ್.ಟಿ ಹಾಗೂ ಆದಾಯ ತೆರಿಗೆ ಸಲಹೆಗಾರ ಅರುಣಕುಮಾರ ಬಿರಾದಾರ ಮಾತನಾಡಿ, ಶರಣರ ಚಿಂತನೆಗಳು ನಮ್ಮ ವ್ಯಕ್ತಿತ್ವವನ್ನು ಹಿರಿದಾಗಿ ಮಾಡುತ್ತವೆ. ನಾವು ತನು ಮನ ಧನದಿಂದ ಭಗವಂತನಿಗೆ ಸೇವೆ ಮಾಡುತ್ತಾ ಹೋದರೆ ಬದುಕಿನ ಶಕ್ತಿ ಹೆಚ್ಚಾಗುತ್ತದೆ. ಇವನಾರವ ಎಂದೆನಿಸದೆ ಇವ ನಮ್ಮವ ಎಂದು ಸಾಮರಸ್ಯದಿಂದ ಬದುಕುವ ಅಗತ್ಯತೆ ಇಂದು ಇದೆ ಎಂದು ತಿಳಿಸಿದರು.
ಬಸಲಿಂಗಪ್ಪ ಸಾರವಾಡ ಪ್ರಾರ್ಥಿಸಿದರು. ಸಾಹಿತಿ ಡಾ.ಮಲ್ಲಿಕಾರ್ಜುನ ಮೇತ್ರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ವಿಶ್ರಾಂತ ಪ್ರಾಚಾರ್ಯ ಎಂ.ಓ.ಶಿರೂರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅರ್ಚಕ ಮಲ್ಲಯ್ಯಸ್ವಾಮಿ ಹಿರೇಮಠ, ಬಿ.ಎನ್.ಬಿರಾದಾರ, ಅಶೋಕ ದೇಶಟ್ಟಿ, ಎಸ್.ಕೆ.ಬಿರಾದಾರ, ಎಂ.ಕೆ.ಬಿಸನಾಳ, ನಾನಾಗೌಡ ಪಾಟೀಲ, ಚಂದ್ರಶೇಖರ ಸರಸಂಬಿ, ಡಾ.ಆರ್.ಎನ್.ದಿಂಡೂರ, ವೀರಣ್ಣ ಹುಲಸೂರ, ಅಮರನಾಥ ಬಿರಾದಾರ, ಬಿ.ವಿ.ಪಾಟೀಲ, ಬಸವರಾಜ ಕಣಬೂರ, ಜಿ.ಬಿ.ಪಟ್ಟಣದ, ಲಕ್ಷ್ಮಣ ಮೇತ್ರಿ, ಅಶೋಕ ಬನ್ನಟ್ಟಿ, ಶ್ರೀಶೈಲ ಬೆಲ್ಲದ, ಪಾಯಣ್ಣ ಪಡಸಲಗಿ, ರಮೇಶ ಮರನೂರ, ಮಧು ಕಲಾದಗಿ ಉಪಸ್ಥಿತರಿದ್ದರು.