ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ: ಶಿವರಾಜ್ ಶಿವಪುರ

| Published : Oct 18 2024, 12:09 AM IST

ಸಾರಾಂಶ

ಕಂಪ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಶಿವರಾಜ್ ಶಿವಪುರ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಗಳನ್ನು ಸಮರ್ಪಿಸಿದರು.

ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ತಹಸೀಲ್ದಾರ್ ಶಿವರಾಜ್ ಶಿವಪುರ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಗಳನ್ನು ಸಮರ್ಪಿಸಿ ಮಾತನಾಡಿ, ರಾಮಾಯಣ ಮಹಾಕಾವ್ಯವನ್ನು ರಚಿಸಿದವರು ಮಹರ್ಷಿ ವಾಲ್ಮೀಕಿಯವರು. ಅವರು ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿ ಕವಿತ್ವ ಭಾವನೆ ಇತ್ತು. ರಾಮಾಯಣ ಎಂಬ ಮಹಾಕಾವ್ಯವು ಇವರ ಕವಿತ್ವ ಭಾವನೆಯ ಕೊಡುಗೆಯಾಗಿದೆ. ಭ್ರಾತೃತ್ವ ಭಾವನೆ, ರಾಜನೀತಿ, ಮನೋಧರ್ಮ, ಮಾನವೀಯ ಮೌಲ್ಯ, ಪ್ರಜಾಪ್ರಭುತ್ವವನ್ನು ರಾಮಾಯಣ ಮಹಾಕಾವ್ಯವು ಜಗತ್ತಿಗೆ ಪರಿಚಯಿಸಿದೆ. ರಾಮಾಯಣ ಮಹಾಕಾವ್ಯವನ್ನು ಓದುವ ಮೂಲಕ ವಾಲ್ಮೀಕಿ ಅವರು ಹೇಳಿಕೊಟ್ಟ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು.

ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ಬಿ. ನಾರಾಯಣಪ್ಪ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ. ವಾಲ್ಮೀಕಿ ರಾಮಾಯಣ ದೇಶ-ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ ಎಂದರು.

ಗ್ರೇಡ್ 2 ತಹಸೀಲ್ದಾರ್ ರೇಣುಕಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆರ್.ಕೆ. ಶ್ರೀಕುಮಾರ್, ಎಡಿ ಕೆ.ಎಸ್. ಮಲ್ಲನಗೌಡ, ಉಪ ತಹಸೀಲ್ದಾರ್ ರವೀಂದ್ರ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ, ನಿಲಯ ಪಾಲಕರಾದ ಗುರುರಾಜ್, ವಿರೂಪಾಕ್ಷಿ, ಎಪಿಎಂಸಿ ಅಧ್ಯಕ್ಷ ಗೌಡರ ಅಂಜಿನಪ್ಪ, ಪುರಸಭೆ ಸದಸ್ಯ ರಾಮಾಂಜಿನೇಯಲು, ಮುಖಂಡರಾದ ಡಾ. ವೆಂಕಟೇಶ್ ಭರಮಕ್ಕನವರ್, ನೀರಗಂಟಿ ವೀರೇಶ್, ಕೆ. ಅಂಬಣ್ಣ, ವಾಲ್ಮೀಕಿ ಈರಣ್ಣ, ಯು. ಈರಣ್ಣ, ಮರಿಯಪ್ಪ ನಾಯಕ, ವೆಂಕಟೇಶ್, ಈರಣ್ಣ ಹಾಗೂ ಮತ್ತಿತರರು ಇದ್ದರು.