ಪ್ರದರ್ಶನಕ್ಕಾಗಿ ಅಲ್ಲದೇ ಉದಾಹರಣೆಗಾಗಿ, ಅನುಕರಣೀಯವಾಗಿ ಈ ಸ್ಪರ್ಧೆ ನಡೆದಿದೆ. ವಂದೇಮಾತರಂ ಮಹಿಮೆಯನ್ನು ವರ್ಣಿಸುವ ಇಂಥ ಕಾರ್ಯಕ್ರಮಗಳು ಬಲವಾದ ಸಂದೇಶ ನೀಡಲಿದೆ.

ಕುಮಟಾ: ವಂದೇ ಮಾತರಂ ಗೀತೆ ಕೇವಲ ಕವಿತ್ವದ ಸಾಕಾರವಲ್ಲ, ದೇಶಭಕ್ತಿಯ ಗಂಗೆಯನ್ನು ಚಿಮ್ಮಿಸಿದ ದರ್ಶನ. ಸತ್ಯ ಮತ್ತು ಅಂತಸ್ಸತ್ವದ ಆಧಾರದಲ್ಲಿ ಹುಟ್ಟಿಕೊಂಡಿರುವುದಕ್ಕೆ ಯಾವತ್ತೂ ಮೃತ್ಯು ಇಲ್ಲ. ಹೀಗಾಗಿಯೇ ವಂದೇ ಮಾತರಂ ಗೀತೆಗೆ ಮೃತ್ಯುಂಜಯತ್ವದ ಅದ್ಭುತ ಶಕ್ತಿ ಇದೆ ಎಂದು ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.

ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಂದೇಮಾತರಂ ಗೀತಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರದರ್ಶನಕ್ಕಾಗಿ ಅಲ್ಲದೇ ಉದಾಹರಣೆಗಾಗಿ, ಅನುಕರಣೀಯವಾಗಿ ಈ ಸ್ಪರ್ಧೆ ನಡೆದಿದೆ. ವಂದೇಮಾತರಂ ಮಹಿಮೆಯನ್ನು ವರ್ಣಿಸುವ ಇಂಥ ಕಾರ್ಯಕ್ರಮಗಳು ಬಲವಾದ ಸಂದೇಶ ನೀಡಲಿದೆ. ವಂದೇ ಮಾತರಂಗೆ ಕಳೆದು ಹೋದ ಗೌರವ ಪುನಃ ಪ್ರಾಪ್ತವಾಗಿದೆ ಎಂಬುದಕ್ಕೆ ಸಾಕ್ಷಿ ಈ ಕಾರ್ಯಕ್ರಮ. ರಾಷ್ಟ್ರೀಯ ಪುನರ್ ಸ್ವೀಕಾರ್ಯತೆಯ ಮಂಗಲ ಮುಹೂರ್ತದಲ್ಲಿ ನಡೆಯುತ್ತಿರುವ ಇಂಥ ಕಾರ್ಯಕ್ರಮಗಳು ಅಭಿನಂದನೀಯ.

ವಂದೇಮಾತರಂ ಗೀತೆಯ ವೈಭವದ ವೈಜಯಂತಿ ತಲುಪಿದ್ದು ಹಾಗೂ ನಂತರ ದಿನಗಳಲ್ಲಿ ಉಪೇಕ್ಷೆಯಿಂದ ಬದಿಗೆ ಸರಿಸಲ್ಪಟ್ಟಿದ್ದರೂ ಈಗ ಮತ್ತೆ ಪುಟಿದೆದ್ದಿದೆ. ವಂದೇಮಾತರಂ ಗೀತೆಯ ಪ್ರೇರಣೆಯಿಂದ ಬೆಳೆದ ಪ್ರಭುತ್ವ ಕೃತಜ್ಞತಾ ರೂಪವಾಗಿ ವಂದೇಮಾತರಂ ೧೫೦ ಆಚರಿಸುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹುಬ್ಬಳ್ಳಿ ಸ್ವರ್ಣ ಗ್ರುಪ್ ಕಂಪನಿಯ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ವಂದೇ ಮಾತರಂ ಗೀತೆಯ ಈ ಕಾರ್ಯಕ್ರಮ ಅರ್ಥಪೂರ್ಣ. ವಂದೇಮಾತರಂ ಅತ್ಯಂತ ರೋಮಾಂಚನಕಾರಿ. ಎಲ್ಲರೂ ಅರ್ಥವರಿತು ವಂದೇಮಾತರಂ ಗಾಯನ ಮಾಡಿ ಎಂದರು.

ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಮಾತನಾಡಿ, ಸಂಸ್ಕಾರದೊಡನೆ ಶಿಕ್ಷಣ ನಮ್ಮ ಧ್ಯೇಯಕ್ಕೆ ಪೂರಕವಾಗಿ ದೇಶಭಕ್ತಿಯ ಪ್ರೇರಣೆಯ ಅನುಸರಣೆಯಾಗಿ ವಂದೇ ಮಾತರಂ ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆ ಆಯೋಜಿಸಿದ್ದೆವು. ದೇಶದ ಉದ್ದಗಲಕ್ಕೂ ದೇಶ ಗುಲಾಮಿತನದಿಂದ ಹೊರಬರಲು ಕಾರಣವಾಗಿದ್ದು ವಂದೇಮಾತರಂ ಮಾತ್ರ, ತ್ಯಾಗ ಬಲಿದಾನದ ಸಂಕೇತ ಅದು ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಅಶೋಕ ಪಿಕಳೆ ಮಾತನಾಡಿದರು. ವಿಶ್ವಸ್ಥ ಡಿ.ಎನ್. ಭಟ್, ಕಾರ್ಯದರ್ಶಿ ಡಾ. ಸೀತಾಲಕ್ಷ್ಮೀ ಹೆಗಡೆ ವೇದಿಕೆಯಲ್ಲಿದ್ದರು. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಿರಣ ಭಟ್ ಸ್ವಾಗತಿಸಿದರು. ಉಪಪ್ರಾಚಾರ್ಯೆ ರಮ್ಯಾ ಸಭಾಹಿತ, ಇತರ ಉಪನ್ಯಾಸಕರು, ವಿದ್ಯಾರ್ಥಿ ಪ್ರತಿನಿಧಿ ಪ್ರಜ್ಞಾ ಭಟ್ ಇತರರು ಉಪಸ್ಥಿತರಿದ್ದರು. ಬಹುಮಾನ ವಿಜೇತರು: ರಾಜ್ಯಮಟ್ಟದ ವಂದೇ ಮಾತರಂ ಗೀತಗಾಯನ ಸ್ಪರ್ಧೆಯಲ್ಲಿ ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟಿನ ಸಿವಿಎಸ್‌ಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ ಹೆಗಡೆ ಪ್ರಥಮ ಸ್ಥಾನ ಗಳಿಸಿದರೆ, ಬೆಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಶಿವಕಾಮಿ ದ್ವಿತೀಯ ಸ್ಥಾನ ಪಡೆದಳು.

ಉಡುಪಿ ಆರ್‌ವಿಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ವಿಧಾತ್ರಿ ಜಿ. ಮಯ್ಯಾ ತೃತೀಯ ಸ್ಥಾನ ಪಡೆದಳು. ಸಮಾಧಾನಕರ ಬಹುಮಾನಗಳನ್ನು ಹೊನ್ನಾವರ ಕವಲಕ್ಕಿ ಶ್ರೀಭಾರತಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪ್ರಥಮ ಎಸ್., ಧಾರವಾಡ ಶ್ರೀಸತ್ಯಸಾಯಿ ವಿದ್ಯಾಮಂದಿರದ ತನ್ಮಯಿ ಹೆಗಡೆ, ಹುಬ್ಬಳ್ಳಿಯ ಚಿನ್ಮಯಿ ವಿದ್ಯಾಲಯದ ದೇವಯಾನಿ ಶರ್ಮಾ, ವಿದ್ಯಾನಗರದ ಆರ್‌ವಿಕೆ ಪ್ರೌಢಶಾಲೆಯ ಅಭಯ್ ಎಸ್., ಹಾಸನದ ಸೋಂದಾ ಪಬ್ಲಿಕ್ ಸ್ಕೂಲಿನ ವಾರುಣಿ ಗಿರೀಶ ಪಡೆದುಕೊಂಡರು. ಸ್ಪರ್ಧೆಯ ಮೊದಲ ಹಂತದಲ್ಲಿ ರಾಜ್ಯದ ಎಲ್ಲೆಡೆಯಿಂದ ಅಪಾರ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಅಂತಿಮ ಸುತ್ತಿನಲ್ಲಿ ೫೦ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.

ಸ್ಪರ್ಧೆಯ ನಿರ್ಣಾಯಕರಾಗಿ ಡಾ. ಹರೀಶ ಹೆಗಡೆ, ಎಂ.ವಿ.ಶೇಷಾದ್ರಿ ಅಯ್ಯಂಗಾರ್, ಚಂದ್ರಶೇಖರ ಮಣಗಿಮನಿ ಕಾರ್ಯನಿರ್ವಹಿಸಿದರು.