ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ದೇಶಾದ್ಯಂತ ಸದ್ದು ಮಾಡುತ್ತಿರುವ ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರಿಗೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯನ್ನು ಅಪಹರಣ ಮಾಡಲಾಗಿದೆ ಎಂದು ಆಕೆಯ ಪುತ್ರ ಎಚ್.ಡಿ. ರಾಜು ದೂರು ದಾಖಲಿಸಿದ್ದಾರೆ.ಕೇಸು ದಾಖಲಾದ ನಂತರ ಕೆ.ಆರ್. ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಹೆಚ್ಚುವರಿ ಪೊಲೀಸ್ ಅಧಿಕಾರಿ ಡಾ. ನಂದಿನಿ ಮತ್ತು ಕರಿಂ ರಾವತ್ ಅವರು ಸತೀಶ್ ಬಾಬು ಅವರನ್ನು ಕರೆದುಕೊಂಡು ಹೋಗಿ ಸ್ಥಳ ತನಿಖೆ ಮಾಡಿದರು. ಎರಡನೇ ಆರೋಪಿ ಸತೀಶ್ ಬಾಬು ಅವರನ್ನು ವಿಚಾರಣೆ ನಡೆಸಿದ ನಂತರ ಆತನನ್ನು 14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಂತ್ರಸ್ತೆ ಮಹಿಳೆಯ ಪುತ್ರ ಕೆ.ಆರ್. ನಗರ ಪೊಲೀಸ್ ಠಾಣೆಗೆ ಗುರುವಾರ ರಾತ್ರಿ ಹಾಜರಾಗಿ ಲಿಖಿತವಾಗಿ ದೂರು ನೀಡಿದ್ದು, ನಮ್ಮ ತಾಯಿಯನ್ನು ಹೆಬ್ಬಾಳು ಕೊಪ್ಪಲು ಗ್ರಾಮದ ಸತೀಶ್ ಬಾಬು ಎಂಬವರು ಕಳೆದ ನಾಲ್ಕು ದಿನಗಳ ಹಿಂದೆ ಎಚ್.ಡಿ. ರೇವಣ್ಣ ಅವರು ಕರೆಯುತ್ತಿದ್ದಾರೆ ಎಂದು ಕರೆದುಕೊಂಡು ಹೋದರೆಂದು ತಿಳಿಸಿದ್ದಾರೆ.ಇದಕ್ಕೂ ಮುನ್ನಾ ಭವಾನಿ ರೇವಣ್ಣ ಅವರು ಕರೆಯುತ್ತಿದ್ದಾರೆ ಎಂದು ಸತೀಶ್ ಬಾಬು ಅವರು ನನ್ನ ತಾಯಿಯನ್ನು ಚುನಾವಣೆಯ ದಿವಸ ಕರೆದುಕೊಂಡು ಹೋಗಿ ಮತ್ತೆ ಮನೆಗೆ ತಂದು ಬಿಟ್ಟು ನಮ್ಮನ್ನು ಬೆದರಿಸಿ ನಿಮ್ಮ ಮನೆಗೆ ಪೊಲೀಸರು ಬಂದರೆ ಯಾವುದೇ ಮಾಹಿತಿ ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆ ಮಗನ ದೂರನ್ನು ದಾಖಲು ಮಾಡಿಕೊಂಡ ಕೆ. ಆರ್. ನಗರ ಪೊಲೀಸರು ಈ ಸಂಬಂಧ ಎಫ್.ಐ.ಆರ್. ದಾಖಲಿಸಿಕೊಂಡು ಆನಂತರ ಸತೀಶ್ ಬಾಬು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಈ ಸಂಬಂಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಮೊದಲನೇ ಆರೋಪಿ ಮತ್ತು ಎರಡನೆ ಆರೋಪಿಯನ್ನಾಗಿ ಹೆಬ್ಬಾಳು ಕೊಪ್ಪಲು ಸತೀಶ್ ಬಾಬು ಅವರ ವಿರುದ್ಧ ದೂರು ದಾಖಲಾಗಿಸಿಕೊಂಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರಿನಲ್ಲಿ ಸಂತ್ರಸ್ತೆಯ ಮಗ ಹೇಳಿರುವಂತೆ ಏ. 26ರಂದು ನಡೆದ ಲೋಕಸಭಾ ಚುನಾವಣೆಯ ಬಳಿಕ ಸತೀಶ್ ಬಾಬು ಬಂದು ನನ್ನ ತಾಯಿಯನ್ನು ಮಾತನಾಡಿಸಿ, ನಿಮ್ಮನ್ನು ಭವಾನಿ ರೇವಣ್ಣ ಅವರು ಕರೆಯುತ್ತಿದ್ದಾರೆ, ಹಾಗಾಗಿ ನೀನು ಬರಬೇಕೆಂದು ಜತೆಯಲ್ಲೆ ಕರೆದುಕೊಂಡು ಹೋದರೆಂದು ತಿಳಿಸಿದ್ದು, ಆನಂತರ ನಮ್ಮನ್ನು ಆತ ಬೆದರಿಸಿ ನಿಮ್ಮನ್ನು ಪೊಲೀಸರು ಕರೆಯಿಸಿ ಯಾವುದೇ ಪ್ರಶ್ನೆ ಕೇಳಿದರು ಉತ್ತರ ನೀಡಬೇಡಿ ಎಂದರೆಂದು ಹೇಳಿದ್ದು, ಇದಕ್ಕೆ ನಾವು ಏನು ತಿಳಿಯದೆ ಒಪ್ಪಿಕೊಡವೆಂದು ತಿಳಿಸಿದ್ದಾರೆ.ನನ್ನ ತಾಯಿ ಕಳೆದ ಆರು ವರ್ಷಗಳ ಕಾಲ ಹೊಳೆ ನರಸೀಪುರದ ಚೆನ್ನಾಂಬಿಕಾ ಥಿಯೇಟರ್ ಪಕ್ಕ ಇರುವ ಮನೆಯಲ್ಲೂ ಹಾಗೂ ತೋಟದ ಮನೆಯಲ್ಲೂ ಕೆಲಸ ಮಾಡುತ್ತಿದ್ದು, ಆಕೆಯನ್ನು ಹಲವು ಆಮಿಷಗಳಿಗೆ ಒಡ್ಡಿ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಎಚ್.ಡಿ. ರೇವಣ್ಣ ಅವರ ಮನೆಯಿಂದ ಕೆಲಸ ಬಿಟ್ಟು ಬಂದು, ನಮ್ಮೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ಆಕೆಯ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ.