ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ: ವಿರೂಪಾಕ್ಷಪ್ಪ

| Published : May 22 2024, 12:55 AM IST

ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ: ವಿರೂಪಾಕ್ಷಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸುಮಾರು 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕರ್ನಾಟಕದಲ್ಲಿ ಸುಮಾರು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಅಲ್ಲದೇ, ವಿಧಾನಪರಿಷತ್ತು ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಜಯ ಸಾಧಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಶತಸಿದ್ಧ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಭವಿಷ್ಯ ನುಡಿದಿದ್ದಾರೆ.

- ಚನ್ನಗಿರಿ ಪಟ್ಟಣದಲ್ಲಿ ಶಿಕ್ಷಕರು-ಪದವೀಧರರ ಕ್ಷೇತ್ರಗಳ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಸಭೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸುಮಾರು 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕರ್ನಾಟಕದಲ್ಲಿ ಸುಮಾರು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಅಲ್ಲದೇ, ವಿಧಾನಪರಿಷತ್ತು ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಜಯ ಸಾಧಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಶತಸಿದ್ಧ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಭವಿಷ್ಯ ನುಡಿದರು.

ಮಂಗಳವಾರ ಪಟ್ಟಣದ ಸಮುದಾಯ ಭವನದಲ್ಲಿ ನೈರುತ್ಯ ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಡೆದ ಕಾರ್ಯಕರ್ತರ ಸಭೆ ಉದ್ಘಾಟನೆ ಅವರು ಮಾತನಾಡಿದರು.

ದೇಶದಲ್ಲಿ ನರೇಂದ್ರ ಮೋದಿ ಅವರ ಆಡಳಿತವನ್ನು ಜನರು ಮೆಚ್ಚಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ ಎಂದರು.

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಚನ್ನಗಿರಿ ತಾಲೂಕು ಒಳಪಡಲಿದೆ. ಈ ಬಾರಿಯ ವಿಧಾನಪರಿಷತ್ತು ಚುನಾವಣೆಗೆ ಚನ್ನಗಿರಿ ತಾಲೂಕಿನವರೇ ಆಗಿರುವ ಡಾ.ಧನಂಜಯ ಸರ್ಜಿ ಅವರು ಅಭ್ಯರ್ಥಿಯಾಗಿದ್ದಾರೆ. ಅವರಿಗೆ ನಮ್ಮ ತಾಲೂಕಿನ ಪದವೀಧರ ಮತದಾರರ ಮೊದಲ ಪ್ರಾಶಸ್ತ್ಯದ ಮತಗಳನ್ನು ಕೊಡಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮ ವಹಿಸಿ ಕೆಲಸ ಮಾಡಬೇಕಾಗಿದೆ ಎಂದರು.

ಚನ್ನಗಿರಿ ತಾಲೂಕಿನಲ್ಲಿ ಸುಮಾರು 2000 ಪದವೀಧರ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಇವರೆಲ್ಲರ ಭೇಟಿಯಾಗಿ, ಡಾ.ಧನಂಜಯ ಸರ್ಜಿ ಅವರ ಜನಪರ ಕಾಳಜಿ ಮತ್ತು ಸಾಮಾಜಿಕ ಕೆಲಸಗಳನ್ನು ಮತದಾರರಿಗೆ ತಿಳಿಸಬೇಕು ಎಂದರು.

ಇನ್ನು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಆಗಿರುವ ಭೋಜೇಗೌಡ ಅವರು ವಿಧಾನ ಪರಿಷತ್ತು ಸದಸ್ಯರಾಗಿ ಶಿಕ್ಷಕರ ಪರವಾದ ಕೆಲಸ ಮಾಡಿದ್ದಾರೆ. ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಧನಂಜಯ ಸರ್ಜಿ ಹಾಗೂ ಭೋಜೇಗೌಡ ಅವರಿಗೆ ಚನ್ನಗಿರಿ ತಾಲೂಕಿನಿಂದ ಅಧಿಕ ಮತಗಳನ್ನು ಕೊಡಿಸುವ ಕೆಲಸ ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್, ಎಚ್.ಎಸ್. ಶಿವಕುಮಾರ್, ಮಾಡಾಳು ಮಲ್ಲಿಕಾರ್ಜುನ್, ಸಂತೆಬೆನ್ನೂರು ಬಸವರಾಜ್, ಆರ್.ಎಂ. ರವಿ, ತಾಲೂಕು ಬಿಜೆಪಿ ಅಧ್ಯಕ್ಷ ಗಿರೀಶ್, ದೇವೇಂದ್ರಪ್ಪ, ಕೆ.ಸಿ.ಕೆಂಚಪ್ಪ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.

- - -

ಬಾಕ್ಸ್‌-1ಒಪಿಎಸ್ ಜಾರಿಗೆ ಕಾನೂನು ಹೋರಾಟ ಅಗತ್ಯ: ಭೋಜೇಗೌಡಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡ ಮಾತನಾಡಿ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನಾವು ಅಧಿಕಾರಕ್ಕೆ ಬಂದರೆ ಒಪಿಎಸ್ ಜಾರಿಗೆ ತರುತ್ತೇವೆ ಎಂದು ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಇದುವರೆಗೂ ಒಪಿಎಸ್ ಜಾರಿಗೆ ತಂದಿಲ್ಲ. ಈಗ ಮತ್ತೆ ವಿ.ಪ. ಚುನಾವಣೆ ಬಂದಿದ್ದು, ಒಪಿಎಸ್ ಜಾರಿಗೆ ತರುತ್ತೇವೆ, ಮತ ನೀಡಿ ಎಂದು ಪುನಃ ಹೇಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ಶಿಕ್ಷಕರು, ನೌಕರರ ನೆನಪಾಗುವ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು. ಸರ್ಕಾರಿ ಸೇವೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದವರಿಗೆ ಅಂತ್ಯ ಕಾಲದಲ್ಲಿ ಪಿಂಚಣಿ ನೀಡುವುದು ಬಹುಮುಖ್ಯವಾಗಿದೆ. ಒಪಿಎಸ್ ಜಾರಿಗೆ ತರಲು ಕಾನೂನಿನ ಹೋರಾಟ ಅಗತ್ಯವಾಗಿದೆ. ನಾವು ಕಾನೂನಿನ ಮೂಲಕವೇ ನೌಕರ ವರ್ಗದವರಿಗೆ ನ್ಯಾಯ ಒದಗಿಸಿಕೊಡುತ್ತೇವೆ ಎಂದರು.

- - -

ಬಾಕ್ಸ್-2 ಪದವೀಧರರಿಗೆ ಜೀವನ ಭದ್ರತೆ: ಡಾ. ಧನಂಜಯ ಸರ್ಜಿ ಭರವಸೆ ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಕೃಷಿ ಕುಟುಂಬದಲ್ಲಿ ಹುಟ್ಟಿ ಸರ್ಕಾರಿ ಶಾಲೆಗಳಲ್ಲಿ ಓದಿ, ವೈದ್ಯಕೀಯ ಶಿಕ್ಷಣವನ್ನು ಪಡೆದು ವೈದ್ಯವೃತ್ತಿ ಪ್ರಾರಂಭಿಸಿದ್ದೇನೆ. ಪದವೀಧರರ ಕಷ್ಟಗಳನ್ನು ಹತ್ತಿರದಿಂದ ಬಲ್ಲೆ. ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪದವೀಧರರಿಗೆ ಜೀವನ ಭದ್ರತೆ ಒದಗಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಸಂಘಟನೆಯ ಶಕ್ತಿಯಿಂದ ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾರ್ಯಕರ್ತರ ಪರಿಶ್ರಮದಿಂದ ಇಂದು ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಿಕ್ ಪಾಕೆಟ್ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಗೆ ಮತ ನೀಡಿ ಎಂದು ಕೋರಿದರು.

- - - -21ಕೆಸಿಎನ್‌ಜಿ1:

ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ಚನ್ನಗಿರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.