ಪಶ್ಚಿಮ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಎಸ್.ವಿ. ಸಂಕನೂರ ಅವರು ಶಿಕ್ಷಣ ಕ್ಷೇತ್ರ ಹಾಗೂ ನೌಕರರ ಪರವಾಗಿ ಸದಾ ಕಳಕಳಿಯಿಂದ ಕೆಲಸ ಮಾಡುತ್ತಾ ಬಂದಿದ್ದು, ಅವರ ಗೆಲುವು ಅತ್ಯಂತ ಅವಶ್ಯವಾಗಿದೆ.
ಸಂಕನೂರ ಹಿತೈಷಿ ಬಳಗದ ಮುಖ್ಯಸ್ಥ ಡಾ. ಬಸವರಾಜ ಧಾರವಾಡ ಹೇಳಿಕೆ
ಕನ್ನಡಪ್ರಭ ವಾರ್ತೆ ಮುಂಡರಗಿಪಶ್ಚಿಮ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಎಸ್.ವಿ. ಸಂಕನೂರ ಅವರು ಶಿಕ್ಷಣ ಕ್ಷೇತ್ರ ಹಾಗೂ ನೌಕರರ ಪರವಾಗಿ ಸದಾ ಕಳಕಳಿಯಿಂದ ಕೆಲಸ ಮಾಡುತ್ತಾ ಬಂದಿದ್ದು, ಅವರ ಗೆಲುವು ಅತ್ಯಂತ ಅವಶ್ಯವಾಗಿದೆ ಎಂದು ಸಂಕನೂರ ಹಿತೈಷಿ ಬಳಗದ ಮುಖ್ಯಸ್ಥ ಡಾ. ಬಸವರಾಜ ಧಾರವಾಡ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಎಸ್.ವಿ. ಸಂಕನೂರ ಕಳೆದ ಎರಡು ಅವಧಿಗಳಲ್ಲಿ (12 ವರ್ಷ) ವಿಧಾನಪರಿಷತ್ ಸದಸ್ಯರಾಗಿ ಅತ್ಯಂತ ಕ್ರಿಯಾಶೀಲವಾಗಿ ಸೇವೆ ಸಲ್ಲಿಸಿದ್ದಾರೆ. ಸದನದ ಒಂದು ದಿನದ ಕಲಾಪಕ್ಕೂ ಗೈರಾಗದೆ, ಶಿಕ್ಷಕರು, ಉಪನ್ಯಾಸಕರು ಮತ್ತು ಪದವೀಧರರ ಸಮಸ್ಯೆಗಳ ಕುರಿತು ಅತಿ ಹೆಚ್ಚು ಪ್ರಶ್ನೆ ಕೇಳಿ ಸರ್ಕಾರದ ಗಮನ ಸೆಳೆದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಸ್ವಪಕ್ಷದ ಸರ್ಕಾರವಿದ್ದಾಗಲೂ ಸಹ ಶಿಕ್ಷಕರ ಮತ್ತು ವಿಶ್ವವಿದ್ಯಾಲಯಗಳ ಸಮಸ್ಯೆಗಳು ಎದುರಾದಾಗ, ತಮ್ಮದೇ ಸರ್ಕಾರದ ವಿರುದ್ಧವೇ ಧ್ವನಿಯೆತ್ತಿ ಬದ್ಧತೆ ಪ್ರದರ್ಶಿಸಿದ ಏಕೈಕ ನಾಯಕ ಎಸ್.ವಿ.ಸಂಕನೂರ ಎಂದರು.ಇಂತಹ ಸಜ್ಜನ, ಕ್ರಿಯಾಶೀಲ ನಾಯಕನಿಗೆ ಪದವೀಧರ ಹಾಗೂ ಶಿಕ್ಷಕ ಮತದಾರರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಮನವಿ ಮಾಡಿಕೊಂಡರು.
ಗದಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ ಮಾತನಾಡಿ, ಈ ಕ್ಷೇತ್ರಗಳಲ್ಲಿ ಎನ್ಡಿಎ ಬಲ ಹೆಚ್ಚಿದ್ದು, ಮೂರನೇ ಬಾರಿಯೂ ಪ್ರೊ. ಎಸ್.ವಿ. ಸಂಕನೂರ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.ಸಂಕನೂರ ಹಿತೈಷಿ ಬಳಗದ ಎಂ.ಎಸ್. ಅಗಡಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ ಭಂಡಾರಿ, ವಿ.ಎಸ್. ದಲಾಲಿ, ಶಿವಯೋಗಿ ಗಡ್ಡದ, ಲಿಂಗರಾಜಗೌಡ ಪಾಟೀಲ, ಗುರುರಾಜ ಜೋಶಿ, ಮೈಲಾರಪ್ಪ ಕಲಕೇರಿ, ಸುನಿಲರಡ್ಡಿ ನೀರಲಗಿ, ಆರ್.ಎಂ. ತಪ್ಪಡಿ ಸೇರಿದಂತೆ ಅನೇಕರಿದ್ದರು.