ವಿಜಯಪುರ ಬಂದ್‌ ಬಹುತೇಕ ಯಶಸ್ವಿ

| Published : Dec 31 2024, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಡಾ.ಅಂಬೇಡ್ಕರ್‌ ಬಗ್ಗೆ ನೀಡಿದ್ದ ಹೇಳಿಕೆ ಖಂಡಿಸಿ ಹಾಗೂ ರಾಜೀನಾಮೆಗೆ ಆಗ್ರಹಿಸಿ ಅಹಿಂದ, ದಲಿತ, ಪ್ರಗತಿಪರ ಸಂಘಟನೆಗಳು ಸೇರಿದಂತೆ ಡಾ.ಅಂಬೇಡ್ಕರ ಅಭಿಮಾನಿಗಳು ಕರೆ ನೀಡಿದ್ದ ವಿಜಯಪುರ ಬಂದ್‌ ಬಹುತೇಕ ಯಶಸ್ವಿಯಾಗಿದೆ. ಬೆಳಗ್ಗೆ 11ಗಂಟೆಗೆ ಆರಂಭವಾದ ಹೋರಾಟದ ಕಿಚ್ಚು ಸಂಜೆ 4 ಗಂಟೆವರೆಗೆ ವಿವಿಧ ವೃತ್ತಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಡಾ.ಅಂಬೇಡ್ಕರ್‌ ಬಗ್ಗೆ ನೀಡಿದ್ದ ಹೇಳಿಕೆ ಖಂಡಿಸಿ ಹಾಗೂ ರಾಜೀನಾಮೆಗೆ ಆಗ್ರಹಿಸಿ ಅಹಿಂದ, ದಲಿತ, ಪ್ರಗತಿಪರ ಸಂಘಟನೆಗಳು ಸೇರಿದಂತೆ ಡಾ.ಅಂಬೇಡ್ಕರ ಅಭಿಮಾನಿಗಳು ಕರೆ ನೀಡಿದ್ದ ವಿಜಯಪುರ ಬಂದ್‌ ಬಹುತೇಕ ಯಶಸ್ವಿಯಾಗಿದೆ. ಬೆಳಗ್ಗೆ 11ಗಂಟೆಗೆ ಆರಂಭವಾದ ಹೋರಾಟದ ಕಿಚ್ಚು ಸಂಜೆ 4 ಗಂಟೆವರೆಗೆ ವಿವಿಧ ವೃತ್ತಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಶುರುವಾದ ನೂರಾರು ಜನರ ಪ್ರತಿಭಟನೆ ಮಹಾತ್ಮಾಗಾಂಧಿ ವೃತ್ತ, ಬಸವೇಶ್ವರ ಸರ್ಕಲ್ ಮೂಲಕ ಬಂದು ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ಮೊದಲು ನಗರದಲ್ಲಿ ಅಲ್ಲಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಅಮಿತ್ ಶಾ ಪ್ರತಿಕೃತಿ ಮೆರವಣಿಗೆ ನಡೆಸಲಾಯಿತು. ಹಲಗೆ ಮೇಳಗಳು ಸಾಮಾನ್ಯವಾಗಿ ಎಲ್ಲೆಡೆ ಕಂಡುಬಂದವು. ಈ ಬೃಹತ್ ಹೋರಾಟದಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಮುಖಂಡರು, ದಲಿತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಮಹಿಳಾ, ಕಾರ್ಮಿಕ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಹೂ ನೀಡಿ ಸಹಕಾರಕ್ಕೆ ಮನವಿ:

ಬಂದ್‌ ಮಧ್ಯೆ ಖಾಸಗಿ ಬಸ್‌ ಹಾಗೂ ಆಟೋಗಳು, ಟೀ ಶಾಪ್‌ಗಳು ಸೇರಿದಂತೆ ಮಾರುಕಟ್ಟೆಗಳಲ್ಲಿ ವ್ಯಾಪಾರ ನಡೆದಿತ್ತು. ಈ ವೇಳೆ ವಿಜಯಪುರ ಬಂದ್‌ ಬೆಂಬಲಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಗುಲಾಬಿ ಹೂಗಳನ್ನು ನೀಡಿ ಬಂದ್‌ ಬೆಂಬಲಿಸಿ ಎಂದು ಮನವಿ ಮಾಡಲಾಯಿತು. ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ ಸರ್ಕಾರಿ ಬಸ್, ಖಾಸಗಿ ಬಸ್, ಕ್ಯಾಬ್, ಆಟೋ ಚಾಲಕರು, ಟೀ ಶಾಪ್‌ಗಳು ಸೇರಿದಂತೆ ಇತರರಿಗೆ ಗುಲಾಬಿ ಹೂವು ನೀಡಿ ಬಂದ್‌ಗೆ ಸಾಥ್ ನೀಡಬೇಕೆಂದು ಮನವಿ ಮಾಡಿದರು. ಬಂದ್ ಕರೆ ಹಿನ್ನೆಲೆಯಲ್ಲಿ ಹಲವು ಯುವಕರ ಗುಂಪುಗಳು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿದರು. ಮಹಾತ್ಮಾಗಾಂಧಿ ವೃತ್ತ, ಶಾಸ್ತ್ರಿ ಮಾರುಕಟ್ಟೆ, ಸರಾಫ್ ಬಜಾರ್, ಶಿವಾಜಿ ಸರ್ಕಲ್, ಬಸವೇಶ್ವರ ಸರ್ಕಲ್, ಸರ್ದಾರ್ ವಲ್ಲಭಬಾಯಿ ಸರ್ಕಲ್, ಕಿರಾಣಾ ಬಜಾರ್ ಸೇರಿದಂತೆ ಮುಖ್ಯ ಮಾರುಕಟ್ಟೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿ ಮಾರುಕಟ್ಟೆಯನ್ನು ಬಂದ್ ಮಾಡಿಸಿದರು.

ಕಣ್ಣೀರಿಟ್ಟ ಮಹಿಳೆ:

ನಗರದಲ್ಲಿ ಬಂದ್ ಮಾಡಿಸುವ ವೇಳೆ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ಬಳಿ ಹೂ ಮಾರಾಟ ಮಾಡಲು ಬಂದಿದ್ದ ಮಹಿಳೆಯ ಚೀಲದಲ್ಲಿದ್ದ ಹೂವನ್ನೆಲ್ಲ ಕೆಲವರು ರಸ್ತೆಯ ಮೇಲೆ ಚೆಲ್ಲಾಡಿ ಉದ್ಧಟತನ ಮೆರೆದಿದ್ದರಿಂದ ಮಹಿಳೆ ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದಳು. ಹೂ ಮಾರಾಟ ಮಾಡಿ ಜೀವನ ಸಾಗಿಸುವ ಬಡವರ ಮೇಲೆ ಯಾಕೆ ನಿಮ್ಮ ಅಟ್ಟಹಾಸ? ಹೆಣ್ಣು ಮಕ್ಕಳೊಂದಿಗೆ ಹೀಗೆ ವರ್ತಿಸಬಹುದೇ ಎಂದು ಆಕ್ರೋಶದ ಮಾತುಗಳನ್ನು ಹೊರಹಾಕಿ ಅಸಹಾಯಕತೆಯನ್ನು ತೋಡಿಕೊಂಡಳು.

ಬಂದ್ ಬಹುತೇಕ ಯಶಸ್ವಿ:

ಈ ಮೊದಲೇ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳ ಪರದಾಟ ತಪ್ಪಿತ್ತು. ಜೊತೆಗೆ ಬೆಳಗ್ಗೆಯಿಂದಲೇ ಸಾರಿಗೆ ಸಂಚಾರ ಸ್ಥಗಿತವಾಗಿತ್ತು. ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೇ ಪ್ರಯಾಣಿಕರು ಪರದಾಡಿದರು. ಜೊತೆಗೆ 10 ಗಂಟೆ ವೇಳೆಗೆ ಕೇಂದ್ರ ಬಸ್ ನಿಲ್ದಾಣ ಖಾಲಿ ಖಾಲಿಯಾಗಿತ್ತು. ಆಟೋ-ಖಾಸಗಿ ವಾಹನ ಚಾಲಕರು ಬೆಂಬಲ ನೀಡಿದರು. ಎಪಿಎಂಸಿ ಮಾರುಕಟ್ಟೆ, ಹಣ್ಣು-ತರಕಾರಿ, ದಿನಸಿ ಸೇರಿದಂತೆ ಎಲ್ಲ ವ್ಯಾಪಾರಸ್ಥರು ಸಹ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲಿಸಿದರು.

ಕುಸಿದುಬಿದ್ದ ಮುಖಂಡ:

ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡ ಮಲ್ಲಿಕಾರ್ಜುನ ಬಟಗಿ ಬಿಸಿಲಿನ ತಾಪದಿಂದಾಗಿ ವೇದಿಕೆ ಮೇಲೆಯೇ ಕುಸಿದುಬಿದ್ದ ಘಟನೆ ನಡೆಯಿತು. ಈ ವೇಳೆ ತಕ್ಷಣವೇ ನಗರ ಡಿವೈಎಸ್‌ಪಿ ಅವರ ವಾಹನದಲ್ಲಿ ಮಲ್ಲಿಕಾರ್ಜುನ ಬಟಗಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಬಂದ್‌ ಹಿನ್ನೆಲೆಯಲ್ಲಿ ತಿಕೋಟಾ ತಾಲೂಕಿನ ತೊರವಿ ಗ್ರಾಮದಲ್ಲಿ ವಿಜಯಪುರ- ಅಥಣಿ ರಾಷ್ಟ್ರೀಯ ಹೆದ್ದಾರಿ 548ಬಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಮಧ್ಯ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.