ಗ್ರಾಮ ಆಡಳಿತ ಕಚೇರಿಗಳಿಗೆ ಸ್ವಂತ ಕಟ್ಟಡ, ಶೌಚಾಲಯವೂ ಇಲ್ಲ!

| Published : Feb 19 2025, 12:46 AM IST

ಸಾರಾಂಶ

ರಾಜ್ಯದಲ್ಲಿ ಗ್ರಾಮಾಡಳಿತಾಧಿಕಾರಿಗಳ ಮುಷ್ಕರ ಏಳನೆ ದಿನ ಪೂರೈಸಿದ್ದು, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಎಲ್ಲ ಗ್ರಾಮಾಧಿಕಾರಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಒಂದೆಡೆ ಸರ್ಕಾರದ ಸೇವೆಗಳು ವ್ಯತ್ಯಯವಾಗಿದ್ದು ಇನ್ನೊಂದೆಡೆ ಗ್ರಾಮಾಡಳಿತ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲ, ಮಹಿಳಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆಯೇ ಇಲ್ಲ ಎಂಬ ಅಂಶಗಳು ಬೆಳಕಿಗೆ ಬಂದಿದೆ.

ಗ್ರಾಮಾಡಳಿತಾಧಿಕಾರಿಗಳ ಮುಷ್ಕರ । ಮೂಲ ಸೌಕರ್ಯ ವಂಚಿತ ಸಿಬ್ಬಂದಿ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ರಾಜ್ಯದಲ್ಲಿ ಗ್ರಾಮಾಡಳಿತಾಧಿಕಾರಿಗಳ ಮುಷ್ಕರ ಏಳನೆ ದಿನ ಪೂರೈಸಿದ್ದು, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಎಲ್ಲ ಗ್ರಾಮಾಧಿಕಾರಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಒಂದೆಡೆ ಸರ್ಕಾರದ ಸೇವೆಗಳು ವ್ಯತ್ಯಯವಾಗಿದ್ದು ಇನ್ನೊಂದೆಡೆ ಗ್ರಾಮಾಡಳಿತ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲ, ಮಹಿಳಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆಯೇ ಇಲ್ಲ ಎಂಬ ಅಂಶಗಳು ಬೆಳಕಿಗೆ ಬಂದಿದೆ.

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಒಟ್ಟು 39 ಕಂದಾಯ ಗ್ರಾಮಗಳಿದ್ದು ಅದರಲ್ಲಿ 32 ಗ್ರಾಮ ವೃತ್ತಗಳಿವೆ. ಅದರಲ್ಲಿ ತಾಲೂಕು ಕಚೇರಿ ಹಾಗೂ ಗ್ರಾಮಗಳು ಸೇರಿದಂತೆ ಒಟ್ಟು 25 ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ಸಲ್ಲಿಸುತಿದ್ದಾರೆ. ಅದರಲ್ಲೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 16 ಕಂದಾಯ ಗ್ರಾಮ ಗಳಿದ್ದು 9 ಗ್ರಾಮ ವೃತ್ತಗಳಿವೆ ಅದರಲ್ಲಿ ತಾಲೂಕು ಕಚೇರಿ ಹಾಗೂ ಗ್ರಾಮ ಮಟ್ಟದಲ್ಲಿ ಒಟ್ಟು 7 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

70 ವರ್ಷಗಳ ಹಳೆಯ ಕಟ್ಟಡಗಳು:

ಕಾರ್ಕಳ ತಾಲೂಕಿನ ಮರ್ಣೆ, ಅಂಡಾರು, ಎಳ್ಳಾರೆ, ಇರ್ವತ್ತೂರು, ಈದು, ನಲ್ಲೂರು, ಹೆರ್ಮುಂಡೆ, ರೆಂಜಾಳ, ಹೆಬ್ರಿ ತಾಲೂಕಿನ ಮಡಾಮಕ್ಕಿ, ಬೆಳ್ವೆ, ಕುಚ್ಚೂರು, ಶಿವಪುರ ವರಂಗ ಮುದ್ರಾಡಿಯ ಪಂಚಾಯಿತಿಗಳು ಸುಮಾರು 70 ವರ್ಷದ ಹಳೆಯ ಕಟ್ಟಡಗಳಾಗಿವೆ. ಅದರಲ್ಲೂ ನಾಡ್ಪಾಲು ಗ್ರಾಮದ ಗ್ರಾಮಾಡಳಿತ ಕಚೇರಿಗೆ ಕೇವಲ ತಗಡು ಶೀಟ್ ಹೊಂದಿಸಿ ನಿಲ್ಲಿಸಲಾಗಿದ್ದರು ಅದರಲ್ಲಿ ಗ್ರಾಮದ ದಾಖಲೆಗಳನ್ನು ಇಡಲು ಸರಿಯಾದ ವ್ಯವಸ್ಥೆ ಗಳು ಕೂಡ ಇಲ್ಲ. ಇರ್ವತ್ತೂರು ಗ್ರಾಮ ಕರಣಿಕರ ಕಚೇರಿ ಶಾಲೆ ಕಟ್ಟಡದಲ್ಲಿ, ಎಳ್ಳಾರೆ ಗ್ರಾಮ ಕರಣಿಕರ ಕಚೇರಿ ಖಾಸಗಿ ಭೂಮಿಯಲ್ಲಿ ಕಾರ್ಯ

ನಿರ್ವಹಿಸುತ್ತಿದೆ.‌

ಸ್ವಂತ ಕಟ್ಟಡವಿಲ್ಲ:

ಗ್ರಾಮಾಡಳಿತ ಕಚೇರಿಗಳು ಸಾರ್ವಜನಿಕರಿಗೆ ಮನೆಕಟ್ಟಲು ಕಂದಾಯ ಭೂಮಿ ಗುರುತಿಸಿ ಸರಕಾರಕ್ಕೆ ವರದಿ ನೀಡುತ್ತವೆ. ಅದರೆ ಅದರಲ್ಲೂ ತಮ್ಮ ಸ್ವಂತ ಕಟ್ಟಡ ವನ್ನು ನಿರ್ಮಾಣ ಮಾಡುವಲ್ಲಿ ಸ್ಥಳ ನಿಗದಿ ಮಾಡುವಲ್ಲಿ ಸರ್ಕಾರಗಳ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತದೆ. ಕಾರ್ಕಳ ತಾಲೂಕಿನ ಹೆರ್ಮುಂಡೆ, ಮರ್ಣೆ ಅಂಡಾರು, ಮಾಳ ಕೆರುವಾಶೆ, ಎರ್ಲಪಾಡಿ, ನೀರೆ ಬೈಲೂರು, ಇರ್ವತ್ತೂರು, ಪಳ್ಳಿ, ನಲ್ಲೂರು ,ರೆಂಜಾಳ ಮುಡಾರು, ಈದು, ಮಿಯ್ಯಾರು, ನಿಟ್ಟೆ , ಬೋಳ, ಕಾಂತಾವರ, ಸಾಣೂರು, ಕೆರವಾಶೆ, ಮುಂಡ್ಕೂರು, ಇನ್ನಾ, ಕಲ್ಯಾ, ನಿಟ್ಟೆ ಹೆಬ್ರಿ ತಾಲೂಕಿನ ಮಡಮಕ್ಕಿ, ಬೆಳ್ವೆ, ಕುಚ್ಚೂರು , ಶಿವಪುರ ವರಂಗ, ಮುದ್ರಾಡಿ ಎಲ್ಲಾ ಕಚೇರಿಗಳೂ ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲಿಯೆ ಕಾರ್ಯನಿರ್ವಹಿಸುವ ಅನಿವಾರ್ಯತೆಯಿದೆ.

ಟಾಯ್ಲೆಟ್ ವ್ಯವಸ್ಥೆಯೇ ಇಲ್ಲ.

ಜಿಲ್ಲಾಡಳಿತ ಎಲ್ಲೆಡೆ ಶೌಚಾಲಯ ನಿರ್ಮಿಸಬೇಕು ಎಂದು ಪಣ ತೊಟ್ಟಿದ್ದರೂ ಗ್ರಾಮಾಡಳಿತ ಕಚೇರಿಗಳಲ್ಲಿ ಶೌಚಾಲಯ ವ್ಯವಸ್ಥೆಗಳೇ ಇಲ್ಲ. ಅದರಲ್ಲೂ ಕಾರ್ಕಳ ತಾಲೂಕಿನ ಶೇ.60 ಗ್ರಾಮಾಡಳಿತ ಅಧಿಕಾರಿಗಳು ಮಹಿಳಾ ಸಿಬ್ಬಂದಿ ಇದ್ದಾರೆ.

ಹೆಬ್ರಿ ತಾಲೂಕಿನಲ್ಲಿ ಓರ್ವ ಗ್ರಾಮಾಡಳಿತ ಮಹಿಳಾ ಅಧಿಕಾರಿಯಿದ್ದರೂ ಅವರು ಕಾರ್ಯ ನಿರ್ವಹಿಸುವ ಕಚೇರಿಯಲ್ಲೂ ಟಾಯ್ಲೆಟ್ ನಿರ್ಮಾಣ ವಾಗಿಲ್ಲ. ಮಹಿಳಾ ಸಿಬ್ಬಂದಿ ಸ್ಥಳೀಯರ ಮನೆಗಳನ್ನು ಶೌಚ ವ್ಯವಸ್ಥೆಗೆ ಆಶ್ರಯಿಸಬೇಕಾಗಿದೆ.

ಪಕ್ಕಾಸು ಬಿದ್ದಾಗ ಎದ್ದು ಓಡಿದರು:

ಎಳ್ಳಾರೆ ಗ್ರಾಮಾಡಳಿತ ಕಚೇರಿಯಲ್ಲಿ ಕಳೆದ 9 ದಿನಗಳ ಹಿಂದೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತಿದ್ದ ಸಂದರ್ಭದಲ್ಲಿ ಛಾವಣಿಯ ಪಕ್ಕಾಸು ತುಂಡಾಗಿ ಬಿದ್ದಿತ್ತು. ಆದರೆ ಗ್ರಾಮಾಡಳಿತ ಅಧಿಕಾರಿಯ ಸಮಯಪ್ರಜ್ಞೆಯಿಂದ ನಡೆಯಲಿದ್ದ ಭಾರಿ ದುರಂತ ತಪ್ಪಿಹೋಗಿತ್ತು.

ಸುಮಾರು 70 ವರ್ಷಗಳ ಹಳೆಯ ಕಟ್ಟಡಗಳಾಗಿದ್ದ ಕಾರಣ ಮರದ ರೀಪುಗಳು ತುಂಡಾಗಿ ಹಂಚುಗಳು ನೇತಾಡುತ್ತಿವೆ. ಅಧಿಕಾರಿಗಳು ಜೀವ ಪಣಕ್ಕಿಟ್ಟುಕೊಂಡು ಕಾರ್ಯನಿರ್ವಹಿಸುವ ಒತ್ತಡಗಳಿವೆ.

ಶಾಸಕರ ನಿಧಿಯೆ ಶ್ರೀರಕ್ಷೆ:

ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಕಾರ್ಕಳ ಸಾಸಕ ವಿ. ಸುನಿಲ್ ಕುಮಾರ್ ತಮ್ಮ ಶಾಸಕರ ನಿಧಿ ಹಾಗೂ ಗ್ರಾಮ ಪಂಚಾಯತಿ ಸಹಕಾರದೊಂದಿಗೆ ಹಿರ್ಗಾನಕ್ಕೆ ರು. 10 ಲಕ್ಷ ವೆಚ್ಚದಲ್ಲಿ ಹಾಗೂ ಕುಕ್ಕುಂದೂರು ಗ್ರಾಮದ ಗ್ರಾಮಾಧಿಕಾರಿ ಕಚೇರಿಗಳು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಅದರಲ್ಲೂ ಸೂಡ ಕಚೇರಿಯನ್ನು 5 ಲಕ್ಷ ರು. ಶಾಸಕರ ಅನುದಾನಿಂದ ನವೀಕರಣ ಮಾಡಲಾಗಿದೆ.

ನೀರೆಗೆ 5 ಲಕ್ಷ ರು., ಕೌಡೂರು 5 ಲಕ್ಷ ರು., ನಂದಳಿಕೆ ಗೆ 5 ಲಕ್ಷ ರು. ಹಣವನ್ನು ಗ್ರಾಮಾಡಳಿತ ಕಚೇರಿಗೆ ಮೀಸಲಿಡಲಾಗಿದೆ.

..................

ಗ್ರಾಮ ಆಡಳಿತಾಧಿಕಾರಿ ಕಚೇರಿ ಹಾಗು ಶೌಚಾಲಯ ನಿರ್ಮಾಣಕ್ಕಾಗಿ ಅನುದಾನವನ್ನು ಸರ್ಕಾರ ಆದ್ಯತೆ ಮೇರೆಗೆ ಬಿಡುಗಡೆ ಮಾಡಬೇಕು. ಮೂಲ ಸೌಕರ್ಯಗಳನ್ನು ಒದಗಿಸಬೇಕು.

-ವಿ. ಸುನಿಲ್‌ ಕುಮಾರ್‌, ಕಾರ್ಕಳ ಶಾಸಕ.