ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆತಾಲೂಕಿನ ಬುಕಪಟ್ಟಣ ಗ್ರಾಪಂ ವ್ಯಾಪ್ತಿಯ ಘಟಲಹಳ್ಳಿ ಗ್ರಾಮದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಇತ್ತೀಚಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳು ನೀರಿನ ವಿಚರವಾಗಿ ಯಾವುದೇ ಲೋಪದೋಷವಾಗದಂತೆ ಆದೇಶ ಮಾಡಿದ್ದರು ಸಹ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕೆರೆಯ ನೀರನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಯ ನೀರು ಶುದ್ಧವಿಲ್ಲದ ನೀರಾಗಿದ್ದು, ಪರ್ಯಾಯ ವ್ಯವಸ್ಥೆ ಇಲ್ಲದೆ ದಿನ ನಿತ್ಯವೂ ಈ ನಿರನ್ನು ಬಳಸುವುದು ಅನಿವಾರ್ಯವಾಗಿದೆ.ಗ್ರಾಮಸ್ಥ ಸುರೇಶ್ ಮಾತನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಸೇವಾ ಕೇಂದ್ರ ಅಧ್ಯಕ್ಷ ಸಿದ್ದಲಿಂಗೇಗೌಡರ ಗಮನಕ್ಕೆ ತಂದಿದ್ದೇವೆ, ನಮ್ಮ ಕಷ್ಟಕ್ಕೆ ಸ್ಪಂದಿಸಿ ಅವರು ಸಹ ಜಿಲ್ಲಾಧಿಕಾರಿಗಳಿಗೆ ಸಮಸ್ಯೆಯ ಕುರಿತು ಪತ್ರ ಬರೆದಿದ್ದಾರೆ. ಪತ್ರ ಬರೆದರೂ ಸಹ ಇಲ್ಲಿನ ಯಾವುದೇ ಅಧಿಕಾರಿಗಳಾಗಲಿ ಅಥವಾ ಗ್ರಾಮದ ಸದಸ್ಯರಾಗಲಿ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿರುವುದಿಲ್ಲ, ಸ್ಥಳೀಯ ವಾಟರ್ ಮ್ಯಾನ್ ವಿಚಾರಿಸಿದರೆ "ನಾವು ಬಿಟ್ಟಾಗ ನೀವು ನೀರನ್ನು ಕುಡಿಯಬೇಕು " ಎಂದು ಉಡಾಫೆ ಉತ್ತರ ನೀಡುತ್ತಾರೆ. ಖಾಸಗಿ ವ್ಯಕ್ತಿಯೊಬ್ಬರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ನಮ್ಮ ಗ್ರಾಮದ ಸದಸ್ಯರು ಕೂಡ ಈ ನೀರು ಹಿಡಿಯಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾವು ದಿನ ನಿತ್ಯದ ಬಳಕೆಯ ನೀರಿಗಾಗಿ ಪ್ರತಿ ದಿನವೂ ಸುಮಾರು ಒಂದು ಕಿಲೋಮೀಟರ್ ನೆಡೆದುಕೊಂಡು ಹೋಗಿ ಕೆರೆಗೆ ಹೋಗಿ ಹೊತ್ತು ತಂದು ಬಳಸುತ್ತಿದ್ದೇವೆ. ಕೆರೆಯಲ್ಲಿ ಹೆಚ್ಚು ಗುಂಡಿಗಳಿದ್ದು, ನೀರಿಗಾಗಿ ಒಂದು ಹೆಜ್ಜೆ ಮುಂದಿಟ್ಟರೆ ನಮ್ಮ ಪ್ರಾಣಕ್ಕೆ ಅಪಾಯವಾಗುವುದು, ಆದರೂ ಸಹ ಜೀವನವನ್ನು ಸಾಗಿಸಲು ವಿಧಿಯಿಲ್ಲದೆ ಇಷ್ಟೆಲ್ಲ ಕಷ್ಟ ಬೀಳಬೇಕು. ಸ್ಥಳೀಯ ಗ್ರಾಪಂ ಅಧ್ಯಕ್ಷರು ಎರಡು-ಮೂರು ದಿನಗಳಿಗೊಮ್ಮೆ ಭೇಟಿ ನೀಡಿದಾಗ ಮಾತ್ರ ವಾಟರ್ ಮ್ಯಾನ್ ನೀರು ಬಿಡುತ್ತಾರೆ ನಂತರ ಸ್ಥಳದಿಂದ ಅವರು ಹೋದಾಗ ನೀರು ನಿಲ್ಲುಸುತ್ತಾರೆ ನಾಮಕವಸ್ಥೆಗೆ ಮಾತ್ರ ನೀರು ಬಿಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಗೌರಮ್ಮ ಮನವಿ ಮಾಡಿದ್ದಾರೆ.