ಸಾರಾಂಶ
ಅಧಿಕಾರವಿದ್ದರೂ ದುರಸ್ಥಿ ಮಾಡದ ಜನಪ್ರತಿನಿಧಿಗಳು: ಆಕ್ರೋಶ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಹೊಂಡ ಗುಂಡಿ ಬಿದ್ದು ಹದಗೆಟ್ಟ ರಸ್ತೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಕೈಯಿಂದ ಹಣ ಹಾಕಿ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿಕೊಂಡ ಘಟನೆ ಎನ್.ಆರ್.ಪುರ ತಾಲೂಕು ಕರ್ಕೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಕರ್ಕೇಶ್ವರ ಕೈಮರದಿಂದ ಗುಬ್ಬೂರು ಗ್ರಾಮಕ್ಕೆ ತೆರಳುವ ರಸ್ತೆ ಕಳೆದ ಹಲವಾರು ವರ್ಷಗಳಿಂದ ಹೊಂಡ ಗುಂಡಿಗಳಿಂದ ಕೂಡಿದ್ದು, ಡಾಂಬರೀಕರಣ ಮಾಡಿ ದುರಸ್ತಿ ಮಾಡಿಕೊಡುವಂತೆ ಗ್ರಾಮಸ್ಥರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಹ ಪ್ರಯೋಜನವಾಗಿರಲಿಲ್ಲ. ರಸ್ತೆ ಹದಗೆಟ್ಟಿರುವ ಕಾರಣ ಜನರ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ತಮ್ಮ ಸ್ವಂತ ಹಣ ಬಳಸಿಕೊಂಡು ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಮೂಲಕ ಜನ, ವಾಹನ ಸಂಚಾರಕ್ಕೆ ಸುಗಮ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸ್ಥಳೀಯ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರ ಆಡಳಿತವಿದ್ದು, ಕ್ಷೇತ್ರದಲ್ಲಿ ಶಾಸಕರು ಕಾಂಗ್ರೆಸ್‌ನವರೇ ಇದ್ದಾರೆ, ರಾಜ್ಯದಲ್ಲೂ ಕಾಂಗ್ರೆಸ್ ಆಡಳಿತವೇ ಇದೆ. ಇದು ಟ್ರಿಪಲ್ ಎಂಜಿನ್ ಸರ್ಕಾರ ವಾಗಿದೆ. ಆದರೂ ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳು ಅಧಿಕಾರಿಗಳು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ನಾವುಗಳೇ ರಸ್ತೆ ದುರಸ್ತಿ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಮಾಜಿ ಶಾಸಕ ಜೀವರಾಜ್ ಬಿಡುತ್ತಿಲ್ಲ ಎಂದು ಶಾಸಕರು ಆರೋಪಿಸುತ್ತಿದ್ದರು. ಆದರೆ ಇದೀಗ ಅಂತಹ ಪರಿಸ್ಥಿತಿಯಿಲ್ಲ. ಆದರೂ ಏಕೆ ರಸ್ತೆ ದುರಸ್ತಿ ಮಾಡಿಲ್ಲ ಎಂದು ಕೆಲ ಗ್ರಾಮಸ್ಥರು ಶಾಸಕರನ್ನು ಪ್ರಶ್ನಿಸಿದ್ದಾರೆ. --ಕೋಟ್ --ಗುಬ್ಬೂರು ರಸ್ತೆ ಈ ಹಿಂದೆ ಡಿ.ಬಿ.ಚಂದ್ರೇಗೌಡರ ಅವಧಿಯಲ್ಲಿ ಡಾಂಬರೀಕರಣಗೊಂಡಿತ್ತು. ಆ ಬಳಿಕ ಆ ರಸ್ತೆಗೆ ಡಾಂಬರೀಕರಣವಾಗಿಲ್ಲ. ಹಲವು ವರ್ಷವಾದ ಕಾರಣ ರಸ್ತೆ ಹದಗೆಟ್ಟಿದ್ದರಿಂದ ಗ್ರಾಮಸ್ಥರು ಒಗ್ಗೂಡಿ ಮಣ್ಣು ಹಾಕಿ ದುರಸ್ತಿ ಮಾಡಿಸಿಕೊಂಡಿದ್ದಾರೆ. ನಾನು ಸಹ ಟ್ರ್ಯಾಕ್ಟರ್ ಕಳುಹಿಸಿ ಮಣ್ಣು ಹಾಕಿಸಲು ವ್ಯವಸ್ಥೆ ಮಾಡಿದ್ದೇನೆ. ಆದರೆ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯ ಗ್ರಾಪಂ, ಶಾಸಕರು, ಸರ್ಕಾರದ ಬಗ್ಗೆ ರಸ್ತೆ ದುರಸ್ತಿ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಈ ಹಿಂದೆ ಎಂಎಡಿಬಿಯಲ್ಲಿಯೂ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಸರ್ಕಾರ ಬದಲಾದಾಗ ಅನುದಾನ ಬಿಡುಗಡೆಗೊಂಡಿಲ್ಲ. ಈ ರಸ್ತೆ ಡಾಂಬರೀಕರಣಕ್ಕೆ ಶಾಸಕ ರಾಜೇಗೌಡರು ಇದೀಗ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ದೊರೆತ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ. ರಾಜಕೀಯ ದುರುದ್ದೇಶ ದಿಂದ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಗ್ರಾಮಸ್ಥರು ಸರ್ಕಾರವನ್ನು ದೂಷಿಸುತ್ತಿಲ್ಲ. ವಿಪಕ್ಷದ ಕೆಲವರು ಈ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ 15 ವರ್ಷ ಬಿಜೆಪಿ ಶಾಸಕರೇ ಆಡಳಿತದಲ್ಲಿದ್ದರೂ ಈ ರಸ್ತೆಗೆ ಏಕೆ ಅನುದಾನ ನೀಡಿ ಅಭಿವೃದ್ಧಿ ಮಾಡಿಲ್ಲ. ಕೆಲ ವರ್ಷಗಳ ಹಿಂದೆ ಪಿಎಂಜಿಎಸ್‌ವೈ ಯೋಜನೆ ಯಲ್ಲಿ ಅನುದಾನ ಬಿಡುಗಡೆಯಾಗಿದೆ ಕಾಮಗಾರಿ ಆಗುತ್ತದೆ ಎನ್ನುತ್ತಿದ್ದ ಬಿಜೆಪಿಗರು ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ವಿಚಾರ ಮುನ್ನೆಲೆಗೆ ತಂದು ಆರೋಪಿಸುತ್ತಿದ್ದಾರೆ.
ಕೆ.ಎಸ್.ರಾಜೇಶ್ ಕೇಶವತ್ತಿ,ಕರ್ಕೇಶ್ವರ ಗ್ರಾಪಂ ಅಧ್ಯಕ್ಷ. ೦೬ಬಿಹೆಚ್‌ಆರ್ ೪:
ಬಾಳೆಹೊನ್ನೂರು ಸಮೀಪದ ಕರ್ಕೇಶ್ವರ ಕೈಮರದಿಂದ ಗುಬ್ಬೂರು ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗ್ರಾಮಸ್ಥರೇ ಮಣ್ಣು ಹಾಕಿ ದುರಸ್ಥಿ ಮಾಡುತ್ತಿರುವುದು.