ಸಿಂದಗಿ ನಗರದಲ್ಲಿ ಜರುಗಿದ ತಾಲೂಕು ವಿಶ್ವಕರ್ಮ ಸಮ್ಮೇಳನ, ಪ್ರತಿಭಾ ಪುರಸ್ಕಾರ, ವಿಶ್ವಕರ್ಮ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ವಿಶ್ವಕರ್ಮ ಸಮಾಜ ಅತ್ಯಂತ್ಯ ಪ್ರಾಚೀನ ಇತಿಹಾಸ ಹೊಂದಿದೆ. ದೇಶದಲ್ಲಿ ಈ ಸಮಾಜದ ವಾಸ್ತು ಶಿಲ್ಪ, ವಿಜ್ಞಾನ, ತಂತ್ರಜ್ಞಾನ, ಕಲೆ, ಸಂಸ್ಕೃತಿ, ಕ್ರೀಡೆಯಲ್ಲಿ ವಿಶಿಷ್ಠವಾದ ಸೇವೆ ಸಲ್ಲಿಸುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ನಗರದ ಕಾಳಿಕಾ ನಗರದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಸಿಂದಗಿ ತಾಲೂಕು ವಿಶ್ವಕರ್ಮ ಸಮಾಜ ಕಾಳಿಕಾದೇವಿ ಸೇವಾ ಸಮಿತಿ ವತಿಯಿಂದ ತಾಲೂಕು ವಿಶ್ವಕರ್ಮ ಸಮ್ಮೇಳನ, ಪ್ರತಿಭಾ ಪುರಸ್ಕಾರ, ವಿಶ್ವಕರ್ಮ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ತಂದೆ ಎಂ.ಸಿ. ಮನಗೂಳಿ ಅವರೊಂದಿಗೆ ವಿಶ್ವಕರ್ಮ ಸಮಾಜ ಅತ್ಯಂತ ಸೌಹಾರ್ದ, ವಿಶ್ವಾಸದ ಬಾಂಧವ್ಯ ಹೊಂದಿತ್ತು. ಅವರಂತೆ ನಾನೂ ಸಹ ವಿಶ್ವಕರ್ಮ ಸಮಾಜದೊಂದಿಗೆ ವಿಶ್ವಾಸ, ಸೌಹಾರ್ದತೆ ಮುಂದುವರೆಸಿಕೊoಡು ಹೋಗುತ್ತಿದ್ದೇನೆ. ಸಮಾಜದ ಬೇಡಿಕೆಯಂತೆ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ 10 ಗುಂಟೆ ಜಮೀನು ಮಂಜೂರು ಮಾಡಿಸುವ ಜತೆಗೆ ಸರ್ಕಾರದಿಂದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಮಂದೇವಾಲದ ಚಿದಾನಂದ ಬಡಿಗೇರ ಅವರಿಗೆ ವಿಶ್ವಕರ್ಮ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೌನೇಶ್ವರ ಹಾಗೂ ಭಗವಾನ್ ವಿಶ್ವಕರ್ಮರ ಧ್ವನಿ ಸುರುಳಿ ಬಿಡುಗಡೆ ಗೊಳಿಸಲಾಯಿತು.

ಶಹಾಪುರ ವಿಶ್ವಕರ್ಮ ಏಕದಂಡಿಗಿಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು.

ಸಿಂದಗಿ ತಾಲೂಕು ವಿಶ್ವಕರ್ಮ ಸಮಾಜ, ಕಾಳಿಕಾದೇವಿ ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ, ಆಲಮೇಲ-ಸಿಂದಗಿ ಮೂರು-ಝಾವಧೀಶ್ವರ ಮಠದ ಪೀಠಾಧ್ಯಕ್ಷ ರಾಮಚಂದ್ರ ಸ್ವಾಮೀಜಿ, ಸಿಂದಗಿ ಸಾರಂಗಮಠ-ಗಚ್ಚಿನಮಠದ ಪೀಠಾಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಅಫಜಲಪುರ ಮೂರು-ಝಾವಧೀಶ್ವರಮಠದ ಬ್ರಹ್ಮಾನಂದ ಸ್ವಾಮೀಜಿ, ಮಲ್ಲಾ ಬಿ. ಆದಿಶಕ್ತಿ ಬಗಳಾಂಭ ಶಕ್ತಿಪೀಠದ ನಿಂಗಣ್ಣ ಶರಣರು ಸಾನ್ನಿಧ್ಯ ವಹಿಸಿದ್ದರು. ಬೋರಗಿಯ ಬಸವರಾಜ ಬಡಿಗೇರ ಮಾತನಾಡಿದರು.

ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ, ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ಅಧ್ಯಕ್ಷ ಕನ್ನಡ ಸೋಮು, ಅಧ್ಯಕ್ಷ ದೇವೇಂದ್ರ ದೇಸಾಯಿಕಲ್ಲೂರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಹಣಮಂತ ಸುಣಗಾರ, ವಿನೋದ ಹಂಚಿನಾಳ, ಸುಹಾಸಿನಿ ಹಂಚಿನಾಳ ವೇದಿಕೆ ಮೇಲೆ ಇದ್ದರು.ಸಿಂದಗಿ ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ವಿಶ್ವಕರ್ಮ ಸಮಾಜದವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.