ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ದೇವಾಲಯಗಳ ಸ್ವಚ್ಛತಾ ಕಾರ್ಯ ನಡೆಯಬೇಕು ಎಂದು ಹೇಳಿದ್ದರು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ನಾಗರಿಕರ ಜೊತೆ ಸೇರಿಕೊಂಡು ಸ್ವಚ್ಛದ ಕಾರ್ಯ ನಡೆಸಿದ್ದೇವೆ. ಅಯೋಧ್ಯೆಗೆ ಕ್ರಿಶ್ಚಿಯನ್, ಮುಸ್ಲಿಂ ರಾಷ್ಟ್ರಗಳೂ ಬರುತ್ತವೆ ಎಂದು ಕೇಳಿ ಸಂತೋಷವಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ದೇವಾಲಯಗಳ ಸ್ವಚ್ಛತಾ ಕಾರ್ಯ ನಡೆಯಬೇಕು ಎಂದು ಹೇಳಿದ್ದರು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ನಾಗರಿಕರ ಜೊತೆ ಸೇರಿಕೊಂಡು ಸ್ವಚ್ಛದ ಕಾರ್ಯ ನಡೆಸಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ 500 ವರ್ಷಗಳಿಂದ ಸಾವಿರಾರು ಭಕ್ತರು ಬಲಿ ಆಗಿದೆ. ಅಯೋಧ್ಯ ರಾಮ ಮಂದಿರದ ಮೂರ್ತಿ ನಿರ್ಮಾಣ ಮಾಡಿದ್ದು ಕರ್ನಾಟಕದ ಯೋಗಿರಾಜ್ ಎಂದು ಹೇಳಲು ನಮಗೆ ಹೆಮ್ಮೆ ಆಗುತ್ತದೆ ಎಂದರು.
ಸಿಎಂ ಸಿದ್ದರಾಮಯ್ಯ ರಾಮಭಕ್ತ ಹೌದು, ಅವರ ಮೊದಲು 22ರ ನಂತರ ಅಯೋಧ್ಯೆಗೆ ಹೋಗುತ್ತೇನೆ ಒಮ್ಮೆ ಹೇಳಿ, ಅಮೇಲೆ ಹೋಗುವುದಿಲ್ಲ ಎನ್ನುವುದನ್ನು ಬಿಟ್ಟು ಎಂದಾದರೂ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುವುದು ಸೂಕ್ತ. ಖಂಡಿತ ನಾನು ಇದರಲ್ಲಿ ರಾಜಕಾರಣ ಬೆರೆಸಲು ಇಷ್ಟಪಡುವುದಿಲ್ಲ. ಅಯೋಧ್ಯೆಗೆ ಕ್ರಿಶ್ಚಿಯನ್, ಮುಸ್ಲಿಂ ರಾಷ್ಟ್ರಗಳೂ ಬರುತ್ತವೆ ಎಂದು ಕೇಳಿ ಸಂತೋಷವಾಗಿದೆ ಎಂದರು.ವೈಯಕ್ತಿಕ ಟೀಕೆ ಸಲ್ಲದು:
ರಾಮ ಯಾವ ಪಕ್ಷಕ್ಕೂ ಸೇರಿದವನಲ್ಲ. ರಾಮ ಎಲ್ಲರನ್ನೂ ಒಂದುಗೂಡಿಸಿದ ಮರ್ಯಾದಾ ಪುರುಷೋತ್ತಮ. ರಾಜಕೀಯ ಮಾಡುವ ಸಂದರ್ಭದಲ್ಲಿ ವೈಯಕ್ತಿಕ ಟೀಕೆ ಮಾಡಬಾರದು. ಅನಂತಕುಮಾರ್ ಏನ್ ಹೇಳಿದ್ದಾರೆ, ಬೇರೆಯವರು ಏನ್ ಹೇಳಿದ್ದಾರೆ ಎಂದು ಹೇಳುತ್ತಾ ಹೋದರೆ ಇದು ಹುಚ್ಚರ ಜಾತ್ರೆಯಾಗುತ್ತದೆ ಎಂದು ಹೇಳಿದರು.ಡಿಸಿಎಂ ಹುದ್ದೆ ಕಾಂಗ್ರೆಸ್ ಪಕ್ಷದ ವಿಚಾರ. ಒಂದೊಂದು ಜಾತಿಗೆ ಡಿಸಿಎಂ ಮಾಡುವುದರ ಮೂಲಕ ಆಯಾ ಜಾತಿಯ ಮತಗಳು ಬರುತ್ತದೆ ಎಂದುಕೊಂಡಿದ್ದಾರೆ. ಡಿಸಿಎಂ ಮಾಡುವ ಉದ್ದೇಶ ಜನರ ಅಭಿವೃದ್ಧಿಗೆ ಇದ್ದರೆ ಒಳ್ಳೆಯದು. ಸಿದ್ದರಾಮಯ್ಯ ಪರ, ಡಿಕೆಶಿ ಪರ ಡಿಸಿಎಂಗಳು ಆಗುವುದು ಜನರಿಗೆ ಅಸಹ್ಯ ಮುಟ್ಟಿಸುತ್ತದೆ. ಬಿಜೆಪಿಯವರು ಎಂದು ಡಿಸಿಎಂ ಆಗುವ ವಿಚಾರವಾಗಿ ಬಹಿರಂಗವಾಗಿ ಬಡಿದಾಡಿಲ್ಲ. ಪಕ್ಷದ ವೇದಿಕೆಯಲ್ಲಿ ಆಗುವುದನ್ನು ಕಾಂಗ್ರೆಸ್‌ನವರು ಬಹಿರಂಗವಾಗಿ ಬಡಿದಾಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಕುರುಬನಾಗಿ ಹುಟ್ಟಬೇಕೆಂದು ಅರ್ಜಿ ಹಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾವ ಜಾತಿಯಲ್ಲಿ ಹುಟ್ಟಬೇಕು ಎಂದು ಯಾರೂ ಅರ್ಜಿ ಹಾಕಲ್ಲ. ಅದು ಭಗವಂತನ ತೀರ್ಮಾನ. ವ್ಯಕ್ತಿ ಸಂಸ್ಕಾರದಿಂದ ಸಮಾಜದಲ್ಲಿ ಮುಂದುವರಿತಾನೆ. ಕನಕದಾಸರು ವಾಲ್ಮೀಕಿ ಮೊದಲಾದ ಮಹಾನ್ ವ್ಯಕ್ತಿಗಳು ಹುಟ್ಟಿನಿಂದಲ್ಲ, ಅವರ ಸಂಸ್ಕಾರದಿಂದ ಸಾಧಕರಾಗಿದ್ದಾರೆ ಎಂದರು.- - - -ಫೋಟೋ: ಕೆ.ಎಸ್.ಈಶ್ವರಪ್ಪ