ಬಾಳೆಹೊನ್ನೂರುವಿಶ್ವದ ನಿಜವಾದ ಜೀವಂತಿಕೆ ಇರುವುದು ಸನಾತನ ಹಿಂದೂ ಧರ್ಮದಲ್ಲಿ ಮಾತ್ರ ಎಂದು ಚಿಕ್ಕಮಗಳೂರು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅಯ್ಯಪ್ಪಸ್ವಾಮಿ ದೀಪೋತ್ಸವ, ಕಲಾವಿದರಿಗೆ ಸನ್ಮಾನಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ವಿಶ್ವದ ನಿಜವಾದ ಜೀವಂತಿಕೆ ಇರುವುದು ಸನಾತನ ಹಿಂದೂ ಧರ್ಮದಲ್ಲಿ ಮಾತ್ರ ಎಂದು ಚಿಕ್ಕಮಗಳೂರು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ 33ನೇ ವರ್ಷದ ಅನ್ನದಾನ, ದೀಪೋತ್ಸವ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನಮ್ಮ ಧರ್ಮ ಸನಾತನ ಧರ್ಮವಾಗಿದ್ದು, ಎಲ್ಲ ತತ್ವವನ್ನು ಒಪ್ಪುವುದೇ ನಿಜವಾದ ಸನಾತನ ಧರ್ಮ. ಪರಮಾತ್ಮ, ಜೀವಾತ್ಮ, ಜಗತ್ತು ಸನಾತನ ಧರ್ಮದ ಮೂಲ. ನಮ್ಮ ಮಕ್ಕಳಿಗೆ ಪರಂಪರೆ, ಸಂಸ್ಕೃತಿ, ಸನಾತನ ಧರ್ಮದ ಬಗ್ಗೆ ತಿಳಿಸಬೇಕಿದ್ದು, ಸನಾತನ ಧರ್ಮ ಯಾವುದೇ ಧರ್ಮ ದ್ವೇಷಿಸುವುದನ್ನು ತಿಳಿಸಿಲ್ಲ ಎಂದು ತಿಳಿ ಹೇಳಬೇಕಿದೆ.

ಧರ್ಮ ಮರೆತರೆ ಬದುಕಿನ ತತ್ವ ಕಳೆದುಕೊಳ್ಳುತ್ತೇವೆ. ನಮ್ಮ ಧರ್ಮ ಅತ್ಯಂತ ಶ್ರೇಷ್ಠ ಧರ್ಮ. ಮನುಷ್ಯ ಜೀವನದಲ್ಲಿ ಧರ್ಮಾರ್ಥವಾಗಿ ಬದುಕಿ, ಪರೋಪಕಾರಿಯಾಗಿದ್ದರೆ ಮಾತ್ರ ಜೀವನ ಅರ್ಥಪೂರ್ಣವಾಗಲು ಸಾಧ್ಯವಿದೆ. ಸನಾತನ ಹಿಂದೂ ಧರ್ಮದಲ್ಲಿ ಜಾತಿ ಆಧಾರಗಳಿಲ್ಲ. ಆದರೆ ಮಾಡುವ ಕರ್ಮಗಳಿಂದ ಜಾತಿ, ವರ್ಣ ಪದ್ಧತಿ ಜಾರಿಗೆ ಬಂದಿದೆ ಎಂಬುದನ್ನು ನಾವು ಅರಿಯಬೇಕಿದೆ. ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಮಾತನಾಡಿ, ದೇವಾಲಯಗಳಲ್ಲಿನ ಆಚರಣೆಗಳಿಂದ ನಮ್ಮ ಸಂಸ್ಕೃತಿ ಉಳಿದಿದ್ದು, ನಮ್ಮ ಪೂರ್ವಿಕರು ಕಟ್ಟಿದ ಆದರ್ಶಗಳಿಂದ ದೇವಾಲಯ ಉಳಿದಿವೆ. ಭಾರತೀಯ ಸನಾತನ ಧರ್ಮ ನಾಶ ಮಾಡಲು ನೂರಾರು ಹುನ್ನಾರ ನಡೆದಿವೆ. ಆದರೆ ಇದು ಸಾಧ್ಯವಾಗಿಲ್ಲ.ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮ ನಾಶ ಮಾಡಲು ದೇವಾಲಯವನ್ನು ಗುರಿಯಾಗಿಸುವ ಕೆಲಸ ನಡೆಯುತ್ತಿದ್ದು, ನಿರಂತರ ವಾಗಿ ವೈಚಾರಿಕ ದಾಳಿಗಳು ಆಗುತ್ತಿವೆ. ಈ ಬಗ್ಗೆ ಹಿಂದೂಗಳು ಜಾಗೃತಿಯಾಗಿರಬೇಕು. ನಮ್ಮ ಮಕ್ಕಳಿಗೆ ಧರ್ಮ ಜಾಗೃತಿ ಇಲ್ಲದ ಕಾರಣ ಸಂಸ್ಕೃತಿ ನಾಶವಾಗುತ್ತಿದೆ. ನಮ್ಮ ಪರಂಪರೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಾಶ ಮಾಡುವ ಯತ್ನ ನಡೆಯುತ್ತಿದೆ. ನಮ್ಮ ಮಕ್ಕಳಿಗೆ ನಮ್ಮ ಪರಂಪರೆ ತಿಳಿ ಹೇಳಲು ಪೋಷಕರು ಹಿಂಜರಿಕೆ ತಾಳುತ್ತಿದ್ದಾರೆ. ಹಿಂದೂಗಳು ಹಣೆಗೆ ಹಚ್ಚುವ ಕುಂಕುಮ ನಮ್ಮ ಪರಂಪರೆ ಸಾರಲಿದ್ದು, ಇಂತಹದ್ದನ್ನು ಮಕ್ಕಳಿಗೆ ತಿಳಿಸಬೇಕಿದೆ. ಇದು ನಿಜವಾದ ಧರ್ಮ ಜಾಗೃತಿಯಾಗಲಿದೆ ಎಂದರು.ದೇವಾಲಯಗಳಲ್ಲಿ ಗಂಟೆ ಬಾರಿಸಲು ಇಂದು ಕೈಗಳು ಕಾಣದೆ ಯಂತ್ರಗಳು ಬಂದಿರುವುದು ವಿಶಾದನೀಯ. ಮಕ್ಕಳನ್ನು ದೇವಾಲಯಗಳಿಗೆ ಕರೆತಂದು ಭಜನೆ, ಸಂಕೀರ್ತನೆ ಹೇಳಿಕೊಡಬೇಕಿದೆ. ಮನೆಯಲ್ಲಿ ಸಂಸ್ಕಾರ ಕಲಿಸಬೇಕಿದೆ. ಭಾರತ ಉಳಿಯಬೇಕಾದರೆ ಸನಾತನ ಧರ್ಮ ಉಳಿಯಬೇಕಿದೆ ಎಂದರು.ಹಿಂದೂ ದೇವಾಲಯಗಳಿಗೆ ನಿರಂತರ ಕೊಡುಗೆ ನೀಡುತ್ತಿರುವ ಮೆಣಸುಕೊಡಿಗೆ ಅನ್ನಪೂರ್ಣಮ್ಮ ಶಿವರಾಮೇಗೌಡ ಅವರಿಗೆ ಹಿಂದೂ ಸಮಾಜ ಸೇವಾ ರತ್ನ ಪ್ರಶಸ್ತಿ, ನಿರ್ಮಾಪಕ ಮಂಜುನಾಥ್ ತುಪ್ಪೂರು ಅವರಿಗೆ ಅಯ್ಯಪ್ಪ ಕಲಾರತ್ನ ಪ್ರಶಸ್ತಿ, ನಟಿ ತ್ರಿಷಾ ಜೈನ್ ಅವರಿಗೆ ಅಯ್ಯಪ್ಪ ಅನುಗ್ರಹದ ಭವಿಷ್ಯದ ತಾರೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎ.ಆರ್.ಲತಾ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಮೋಘ್ ವಾಟುಕೊಡಿಗೆ, ಪುನೀತ್ ಕರಗಣೆ, ಪ್ರಜ್ವಲ್ ಹಾಗೂ 18ನೇ ವರ್ಷದ ಶಬರಿಮಲೆ ಯಾತ್ರೆ ನಡೆಸುತ್ತಿರುವ ಮೂರ್ತಿ ರೇಣುಕನಗರ, ಸುರೇಶ್ ವಾಟುಕೊಡಿಗೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ, ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ದಾನಿಗಳಾದ ಸತೀಶ್ ಗದ್ದೆಮನೆ, ನಾಗರಾಜ್ ದುರ್ಗಾಂಭ, ಕುಮಾರ್, ಪ್ರಭಾಕರ್ ಪ್ರಣಸ್ವಿ, ಸಹದೇವ್ ಸಾಗರ್, ಬಿ.ಜಗದೀಶ್ಚಂದ್ರ, ರವೀಂದ್ರ ಆಚಾರ್ಯ, ಅಶೋಕ್, ಸಿ.ಎಸ್.ಮಹೇಶ್ಚಂದ್ರ, ಶೃತಿ ಸುನೀಲ್ ಪ್ರಭು, ಪಿ.ಕೆ.ಪ್ರಕಾಶ್, ಸಂದೀಪ್ ಮತ್ತಿತರರು ಹಾಜರಿದ್ದರು.೦೨ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ದೀಪೋತ್ಸವದಲ್ಲಿ ಮೆಣಸುಕೊಡಿಗೆ ಅನ್ನಪೂರ್ಣಮ್ಮ ಶಿವರಾಮೇಗೌಡ ಅವರಿಗೆ ಹಿಂದೂ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಆರ್.ಡಿ.ಮಹೇಂದ್ರ, ಹಾರಿಕಾ ಮಂಜುನಾಥ್, ಮಂಜುನಾಥ್ ತುಪ್ಪೂರು, ತ್ರಿಷಾ ಜೈನ್, ಸತೀಶ್ ಗದ್ದೆಮನೆ, ಪ್ರಭಾಕರ್ ಪ್ರಣಸ್ವಿ ಇದ್ದರು.