ಜನ ಸಾಮಾನ್ಯರ ಧ್ವನಿಯೇ ಜಾನಪದ ಸಂಪತ್ತು : ರಂಭಾಪುರಿ ಶ್ರೀ

| Published : Mar 25 2024, 12:53 AM IST

ಸಾರಾಂಶ

ನೀರು ಅನ್ನ ಮತ್ತು ಒಳ್ಳೆಯವರ ಮಾತು ಜೀವನ ಉನ್ನತಿಗೆ ಅವಶ್ಯಕ. ಭೌತಿಕ ಆಸ್ತಿ ಸಿರಿ ಸಂಪತ್ತು ನಾಶವಾಗಿ ಹೋಗ ಬಹುದು. ಗ್ರಾಮೀಣ ಜನರ ಬಾಯಿಂದ ಬಂದ ಸಾಹಿತ್ಯವೇ ನಿಜವಾದ ಜಾನಪದ ಸಾಹಿತ್ಯ. ಇದರಲ್ಲಿರುವ ಆಧ್ಯಾತ್ಮ ಚಿಂತನೆಗಳು ಜೀವನ ಶ್ರೇಯಸ್ಸಿಗೆ ಅಡಿಪಾಯ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ನೀರು ಅನ್ನ ಮತ್ತು ಒಳ್ಳೆಯವರ ಮಾತು ಜೀವನ ಉನ್ನತಿಗೆ ಅವಶ್ಯಕ. ಭೌತಿಕ ಆಸ್ತಿ ಸಿರಿ ಸಂಪತ್ತು ನಾಶವಾಗಿ ಹೋಗ ಬಹುದು. ಗ್ರಾಮೀಣ ಜನರ ಬಾಯಿಂದ ಬಂದ ಸಾಹಿತ್ಯವೇ ನಿಜವಾದ ಜಾನಪದ ಸಾಹಿತ್ಯ. ಇದರಲ್ಲಿರುವ ಆಧ್ಯಾತ್ಮ ಚಿಂತನೆಗಳು ಜೀವನ ಶ್ರೇಯಸ್ಸಿಗೆ ಅಡಿಪಾಯ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಭಾನುವಾರ ನಡೆದ ಜಾನಪದ ಹಬ್ಬದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾನವನ ಬದುಕು ದೀಪದಂತೆ ಪರಿಶುದ್ಧವಾಗಬೇಕು. ಬೆಳಕು ಎಲ್ಲಿ ಬಿದ್ದರೂ ಮಲಿನವಾಗುವುದಿಲ್ಲ. ಈ ದೇಹ ಶಿವ ನಿರುವ ಶಿವಾಲಯ. ಸೂರ್ಯ ಚಂದ್ರರ ಬೆಳಕು ಬೆಳೆಯುವ ಭೂಮಿ ಮಳೆ ಸುರಿಸುವ ಮೋಡ ಬೀಸುವ ಗಾಳಿ ಯಾವಾಗಲೂ ತಮ್ಮ ಕಾರ್ಯ ಮಾಡುತ್ತಲೆ ಬಂದಿವೆ. ಆದರೆ ನಾ ಮಾಡಿದೆ ಎಂದು ಎಲ್ಲಿಯೂ ಹೇಳಿಲ್ಲ. ಮನುಷ್ಯ ಮಾತ್ರ ಎಲ್ಲೆಡೆ ತನ್ನ ಹೆಸರು ಇರಬೇಕೆಂದು ಬಯಸುತ್ತಾನೆ ಎಂದರು.

ಮನುಷ್ಯ ಜಾಗೃತನಾಗಿ ಸತ್ಕಾರ್ಯ ಮಾಡಿ ಧರ್ಮ ಸಂಪಾದಿಸಬೇಕು. ಮೌಲ್ಯಾಧಾರಿತ ನೆಮ್ಮದಿ ಬದುಕಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳು ಎಲ್ಲರಿಗೂ ಆಶಾಕಿರಣ. ಅರಿತು ಆಚರಿಸಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಪ್ರಯತ್ನಿಸುವುದು ಶ್ರೇಯಸ್ಕರ. ಜಾನಪದ ಸಾಹಿತ್ಯದಲ್ಲಿರುವ ಆಧ್ಯಾತ್ಮ ಚಿಂತನೆ ನೈತಿಕ ವಿಚಾರ ಧಾರೆ ಬದುಕಿ ಬಾಳುವ ಜನ ಸಮುದಾಯಕ್ಕೆ ಸ್ಫೂರ್ತಿ ತಂದು ಕೊಡುತ್ತವೆ ಎಂದರು.ಸಮಾರಂಭ ಉದ್ಘಾಟಿಸಿದ ಜಾನಪದ ತಜ್ಞ ಡಾ. ರಾಮು ಮೂಲಗಿ ಮಾತನಾಡಿ ಜಾನಪದ ಸಾಹಿತ್ಯ ಬಂದಿದ್ದು, ವಿದ್ವಾಂಸರಿಂದಲ್ಲ. ಹಳ್ಳಿಯ ಪರಿಸರದಲ್ಲಿ ಬೆಳೆದು ಸಾಮಾನ್ಯರಿಂದ ಹೊರ ಬಂದ ಸಂಪತ್ತು ಜಾನಪದ. ಅದನ್ನು ಬೆಳೆಸುವ ಕಾರ್ಯ ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.

ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ ಮಾತನಾಡಿ, ಶ್ರೀ ರಂಭಾಪುರಿ ಪೀಠ ಪ್ರಖ್ಯಾತಿ ಹೊಂದಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಶ್ರೀ ಜಗದ್ಗುರುಗಳ ಮೂಲಕ ರೇಣುಕಾಚಾರ್ಯರನ್ನು ಕಾಣಲು ಸಾಧ್ಯವಾಗಿದೆ. ಶ್ರೀ ಸನ್ನಿಧಿ ಯವರ ಆದೇಶ ಪಾಲನೆ ಮಾಡುವ ಲಕ್ಷಾಂತರ ಭಕ್ತರು ಇದ್ದಾರೆ. ಸರ್ವ ಸಮುದಾಯದ ಜನತೆ ಶಾಂತಿ ಸೌಹಾರ್ದತೆಯಿಂದ ಬಾಳುವಂತೆ ಆಶೀರ್ವದಿಸುತ್ತಿರುವುದು ನಮ್ಮ ಸೌಭಾಗ್ಯ ಎಂದರು.

ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಜೀವನ ಆದರ್ಶ ಮರೆತರೆ ಜೀವನ ಬರಡು. ಹಿರಿಯರ ಆದರ್ಶ ಚಿಂತನೆ ನುಡಿ ಜೀವನೋತ್ಸಾಹಕ್ಕೆ ಕಾರಣವಾಗಿವೆ ಎಂದರು.

ಲಿಂಗಸುಗೂರು ಶ್ರೀ ಮಾಣಿಕ್ಯೇಶ್ವರಿ ಆಶ್ರಮದ ಮಾತಾ ನಂದಿಕೇಶ್ವರಿ ಅಮ್ಮನವರು, ವಾಣಿ ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ, ರಾಯಚೂರು ಮಂಗಳವಾರ ಪೇಟೆ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿ, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿ, ಮೊಳಹಳ್ಳಿಯ ನಿರ್ಮಲಮ್ಮ-ಕೆ.ಶಿವಲಿಂಗಯ್ಯ, ಹುಬ್ಬಳ್ಳಿಯ ಚನ್ನಯ್ಯ ಚನ್ನವೀರಯ್ಯ ಹಿರೇಮಠ, ಯಲಿವಾಳದ ಶ್ರೀಕಂಠಗೌಡ ಹಿರೇಗೌಡ, ತಿರುಮಲಕೊಪ್ಪದ ವೇ.ಗುರುಸಿದ್ಧಯ್ಯ ಹಿರೇಮಠ ಅವರಿಗೆ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಿ ಆಶೀರ್ವದಿಸಿದರು. ೨೪ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಜಾನಪದ ಹಬ್ಬ ಸಮಾರಂಭವನ್ನು ಜಾನಪದ ತಜ್ಞ ಡಾ. ರಾಮು ಮೂಲಗಿ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಉದ್ಘಾಟಿಸಿದರು.೨೪ಬಿಹೆಚ್‌ಆರ್ ೪: ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ಶಿವಾನಂದ ಎಸ್ಟೇಟಿನಲ್ಲಿ ವನದೇವಿ ಚೌಡೇಶ್ವರಿ ಪೂಜೆ ನಡೆಯಿತು.